ADVERTISEMENT

ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ: ಪುರುಷರ ನಿರಾಸಕ್ತಿ

2021–22ನೇ ಸಾಲಿನಲ್ಲಿ 2.20 ಲಕ್ಷ ಮಹಿಳೆಯರಿಗೆ ಶಸ್ತ್ರಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2022, 20:45 IST
Last Updated 10 ಜುಲೈ 2022, 20:45 IST
   

ಬೆಂಗಳೂರು: ರಾಜ್ಯದಲ್ಲಿ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಪುರುಷರು ನಿರಾಸಕ್ತಿ ತಾಳಿದ್ದು,2021–22ನೇ ಸಾಲಿನಲ್ಲಿ 643 ಪುರುಷರು ಮಾತ್ರ ಈ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಇದೇ ಅವಧಿಯಲ್ಲಿ 2.20 ಲಕ್ಷ ಮಹಿಳೆಯರು ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

‘ಕಳೆದ ಸಾಲಿನಲ್ಲಿ 1.13 ಲಕ್ಷ ಮಂದಿಗೆ ಪಿಪಿಐಯುಸಿಡಿ (ವಂಕಿ) ಅಳವಡಿಸಲಾಗಿದೆ. 1.04 ಲಕ್ಷ ಮಂದಿ ಐಯುಸಿಡಿ ಸಾಧನ ಅಳವಡಿಸಿಕೊಂಡಿದ್ದಾರೆ. 2.20 ಲಕ್ಷ ಮಂದಿ ನಿರೋಧ್ ಬಳಸಿದ್ದಾರೆ. 1.54 ಲಕ್ಷ ಮಂದಿ ಮಾಲಾ–ಡಿ ಹಾಗೂ 34,770 ಮಂದಿ ಗರ್ಭ ನಿರೋಧಕ ಮಾತ್ರೆಬಳಸಿದ್ದಾರೆ. 74,513 ಮಂದಿ ಗರ್ಭನಿರೋಧಕ ಅಂತರ ಚುಚ್ಚುಮದ್ದು ಪಡೆದಿದ್ದಾರೆ’ ಎಂದು ಇಲಾಖೆ ಪ್ರಕಟಣೆಯಲ್ಲಿ ಹೇಳಿದೆ.

‘ಕುಟುಂಬ ಕಲ್ಯಾಣ ಯೋಜನೆಗಳಡಿ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಒಳಗಾದವರಿಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ. ಶಸ್ತ್ರಚಿಕಿತ್ಸೆ ವಿಫಲವಾದರೆ ₹ 60 ಸಾವಿರ, ತೊಂದರೆಯಾದರೆ ಗರಿಷ್ಠ ₹ 50 ಸಾವಿರ ಹಾಗೂ ಮರಣ ಹೊಂದಿದರೆ ₹ 4 ಲಕ್ಷ ಪರಿಹಾರವನ್ನೂ ನೀಡಲಾಗುತ್ತದೆ. 2021–22ನೇ ಸಾಲಿನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದವರಲ್ಲಿ ಮೂರು ಮಂದಿ ಮೃತಪಟ್ಟಿದ್ದರು. 82 ಮಂದಿಗೆ ವಿಫಲವಾದರೆ, ಒಬ್ಬರಿಗೆ ಮಾತ್ರ ತೊಂದರೆಯಾಗಿತ್ತು’ ಎಂದು ತಿಳಿಸಿದೆ.

ADVERTISEMENT

ಸಮೀಕ್ಷೆ: ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ 4.5 ರ ಅಡಿ ರಾಜ್ಯದಲ್ಲಿ 20 ರಿಂದ 24 ವರ್ಷದ ಮಹಿಳೆಯರನ್ನು ಸಮೀಕ್ಷೆ ಮಾಡಲಾಗಿದ್ದು, ಅವರಲ್ಲಿಶೇ 23.3 ರಷ್ಟು ಮಹಿಳೆಯರು 18 ವರ್ಷದೊಳಗೆ ಮದುವೆಯಾಗಿದ್ದಾರೆ. 15 ರಿಂದ 19 ವರ್ಷದೊಳಗಿನವರಲ್ಲಿ ಶೇ 6.8 ರಷ್ಟು ಮಂದಿ ಸಮೀಕ್ಷೆ ವೇಳೆ ಗರ್ಭಿಣಿಯಾಗಿದ್ದರು. ಸಮೀಕ್ಷೆಗೆ ಒಳಪಟ್ಟ 25 ರಿಂದ 29 ವರ್ಷದ ಪುರುಷರಲ್ಲಿ ಶೇ 6.1 ರಷ್ಟು ಮಂದಿ 21 ವರ್ಷದೊಳಗೆ ವಿವಾಹವಾಗಿದ್ದಾರೆ ಎಂದು ವಿವರಿಸಿದೆ.

ಇಲಾಖೆಯು ವಿಶ್ವ ಜನಸಂಖ್ಯಾ ದಿನದ ಪ್ರಯುಕ್ತ ಸೋಮವಾರ ರಾಜ್ಯದಾದ್ಯಂತ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ‘ಕುಟುಂಬ ಯೋಜನೆ ಉಪಾಯಗಳನ್ನು ನಮ್ಮದಾಗಿಸಿ, ಉನ್ನತಿಯ ಹೊಸ ಅಧ್ಯಾಯ ಬರೆಯೋಣ’ ಈ ವರ್ಷದ ಘೋಷ ವಾಕ್ಯವಾಗಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.