ಬೆಂಗಳೂರು: ಸಚಿವ ಸ್ಥಾನ ಸಿಗದ ಶಾಸಕರ ಅತೃಪ್ತಿ ದಿನೇ ಹೆಚ್ಚುತ್ತಿರುವ ಮಧ್ಯೆಯೇ, ಸಚಿವ ಸಂಪುಟ ವಿಸ್ತರಣೆಯಾಗಿ ಎರಡನೇ ದಿನ ಕಳೆದರೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೊಸ ಸಚಿವರಿಗೆ ಖಾತೆ ಹಂಚಿಕೆ ಸಾಹಸಕ್ಕೆ ಕೈ ಹಾಕಿಲ್ಲ.
ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಖಾತೆ ಹಂಚಿಕೆ ಪ್ರಕ್ರಿಯೆಯು ಇನ್ನೂ ಎರಡು ದಿನ ತಡವಾಗಬಹುದು ಎಂದು ಯಡಿಯೂರಪ್ಪ ಸುಳಿವು ನೀಡಿದ್ದಾರೆ.
ಅನರ್ಹಗೊಂಡಿರುವ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ನೀಡಿ, ಅವರಲ್ಲಿ ಕೆಲವರಿಗೆ ಪ್ರಮುಖ ಖಾತೆಗಳನ್ನು ನೀಡಬೇಕಾಗಿರುವುದರಿಂದ ಈಗ ಸಚಿವಸ್ಥಾನ ಪಡೆದವರಿಗೆ ಯಾವ ಖಾತೆಗಳನ್ನು ಹಂಚಬೇಕು ಎಂಬ ಬಗ್ಗೆ ಯಡಿಯೂರಪ್ಪ ತಮ್ಮ ಆಪ್ತ ವಲಯದಲ್ಲಿ ಚರ್ಚೆ ನಡೆಸಿದ್ದು, ವರಿಷ್ಠರ ಸಲಹೆಯನ್ನೂ ಕೇಳಿದ್ದಾರೆ ಎಂದು ಮೂಲಗಳು ಹೇಳಿವೆ.
ಅನರ್ಹಗೊಂಡಿರುವ 17 ಶಾಸಕರಲ್ಲಿ ಕೆಲವು ಶಾಸಕರು ಪ್ರಮುಖ ಖಾತೆಗಳಿಗೆ ಬೇಡಿಕೆ ಇಟ್ಟಿದ್ದಾರೆ. ಅಂತಹ ಖಾತೆಗಳನ್ನು ತಮ್ಮ ಬಳಿಯೇ ಇಟ್ಟುಕೊಂಡು, ಮುಂದೆ ಸಚಿವ ಸಂಪುಟ ವಿಸ್ತರಣೆ ಮಾಡಿದಾಗ ಅವರಿಗೆ ಹಂಚಿಕೆ ಮಾಡಲು ಸುಲಭವಾಗುತ್ತದೆ ಎಂಬ ಆಲೋಚನೆ ಯಡಿಯೂರಪ್ಪ ಅವರದು ಎಂದು ಪಕ್ಷದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ಅನರ್ಹಗೊಂಡಿರುವ ಶಾಸಕರ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿ ಇತ್ಯರ್ಥ ಆಗಿಲ್ಲ. ಇದರಿಂದ ಕೆಲವು ಶಾಸಕರು ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಗೊಂದಲಕ್ಕೆ ಸಿಲುಕಿದ್ದಾರೆ. ಅವರನ್ನು ಸಮಾಧಾನಪಡಿಸುವುದು ಮತ್ತುಪಕ್ಷದ ವರಿಷ್ಠರಿಂದ ಸರ್ಕಾರದಲ್ಲಿ ಸಚಿವ ಸ್ಥಾನದ ಖಾತರಿ ನೀಡುವ ಕೆಲಸಕ್ಕೂ ಯಡಿಯೂರಪ್ಪ ಕೈ ಹಾಕಿದ್ದಾರೆ. ಹೀಗಾಗಿ ಅನರ್ಹಗೊಂಡಿರುವ ಕೆಲವು ಶಾಸಕರನ್ನು ವರಿಷ್ಠರ ಜತೆ ಭೇಟಿ ಮಾಡಿಸುವ ಸಾಧ್ಯತೆಯೂ ಇದೆ.
ಈ ಹಿನ್ನೆಲೆಯಲ್ಲಿರಮೇಶ ಜಾರಕಿಹೊಳಿ, ಕೆ. ಗೋಪಾಲಯ್ಯ, ಮುನಿರತ್ನ ಅವರು ದೆಹಲಿಗೆ ತೆರಳಿದ್ದು, ಅಲ್ಲಿ ಬಿಜೆಪಿ ವರಿಷ್ಠರನ್ನು ಭೇಟಿ ಮಾಡಲಿದ್ದಾರೆ.ಅನರ್ಹತೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಕಾನೂನು ಸಮರಕ್ಕೆ ಹಿನ್ನಡೆಯಾಗದಂತೆ ನೋಡಿಕೊಳ್ಳಲು ಹಿರಿಯ ವಕೀಲ ಮುಕುಲ್ ರೋಹ್ಟಗಿ ಜತೆ ಚರ್ಚೆ ನಡೆಸಲಿದ್ದಾರೆ.
ಬಿಎಸ್‌ವೈ ಇಟ್ಟುಕೊಳ್ಳುವ ಖಾತೆಗಳು
ಅನರ್ಹಗೊಂಡಿರುವ ಶಾಸಕರು ಪ್ರಮುಖ ಖಾತೆಗಳಿಗೆ ಬೇಡಿಕೆ ಇಟ್ಟಿರುವುದರಿಂದ ಜಲಸಂಪನ್ಮೂಲ, ವಸತಿ, ಬೆಂಗಳೂರು ಅಭಿವೃದ್ಧಿ, ಅಬಕಾರಿ, ಇಂಧನ, ಗಣಿ, ಸಾರಿಗೆಯಂತಹ ಪ್ರಮುಖ ಖಾತೆಗಳನ್ನು ಯಡಿಯೂರಪ್ಪ ಸದ್ಯಕ್ಕೆ ತಮ್ಮ ಬಳಿಯೇ ಇಟ್ಟುಕೊಳ್ಳಬಹುದು ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.