ಚಿಕ್ಕಬಳ್ಳಾಪುರ: ಅಂಚೆ ಇಲಾಖೆಯ ಕಸ್ಟಮ್ಸ್ ತಪಾಸಣೆ ಕೇಂದ್ರ ಇಡೀ ರಾಜ್ಯಕ್ಕೆ ಒಂದೇ ಒಂದು ಬೆಂಗಳೂರಿನಲ್ಲಿದೆ. ಇದರಿಂದ ದೂರದ ಜಿಲ್ಲೆಗಳ ಜನರಿಗೆ ಆಗುತ್ತಿರುವ ಅನನುಕೂಲತೆ ತಪ್ಪಿಸಲು ಈ ವ್ಯವಸ್ಥೆಯ ವಿಕೇಂದ್ರೀಕರಣ ಮಾಡಬೇಕು ಎನ್ನುವುದು ಅಂಚೆ ಇಲಾಖೆ ಅಧಿಕಾರಿಗಳ ಆಗ್ರಹವಾಗಿದೆ.
ರಾಜ್ಯದಿಂದ ಅಂಚೆ ಇಲಾಖೆ ಮೂಲಕ ವಿದೇಶಗಳಿಗೆ ರಫ್ತು, ಆಮದು ಆಗುವ ಅಂಚೆ ಲಕೋಟೆಗಳು ಮತ್ತು ಸರಕುಗಳಿಗೆ ಸಂಬಂಧಿಸಿದ ತೆರಿಗೆ ಪಾವತಿ ದಾಖಲೆಗಳ ಪರಿಶೀಲನೆ ಸದ್ಯ ಬೆಂಗಳೂರಿನ ಪ್ರಧಾನ ಅಂಚೆ ಕಚೇರಿ (ಜಿಪಿಒ) ಕಟ್ಟಡದಲ್ಲಿರುವ ಅಂಚೆ ಕಸ್ಟಮ್ಸ್ ತಪಾಸಣೆ ಕೇಂದ್ರದಲ್ಲಿ ನಡೆಯುತ್ತದೆ.
ತಪಾಸಣೆ ವೇಳೆ ಲಕೋಟೆಗಳು, ಸರಕುಗಳಿಗೆ ಸಂಬಂಧಿಸಿದಂತೆ ಅಗತ್ಯ ದಾಖಲೆ ಪತ್ರಗಳು ಇಲ್ಲದಿದ್ದರೆ ಅವುಗಳಿಗೆ ಸಂಬಂಧಪಟ್ಟವರು ದೂರದ ಜಿಲ್ಲೆಗಳಿಂದ ಈ ಕೇಂದ್ರಕ್ಕೆ ಬಂದು ಸಮರ್ಪಕ ದಾಖಲೆಗಳನ್ನು ಒದಗಿಸಿದಾಗ ಮಾತ್ರವೇ ಆಮದು, ರಫ್ತು ಪ್ರಕ್ರಿಯೆ ನಡೆಯುತ್ತವೆ. ಹೀಗಾಗಿ ಈ ವ್ಯವಸ್ಥೆ ವಿಳಂಬಕ್ಕೆ ಕಾರಣವಾಗುತ್ತಿದೆ ಎನ್ನುವುದು ಅಧಿಕಾರಿಗಳ ಬೇಸರ.
‘ಅಂಚೆ ಇಲಾಖೆ ಮೂಲಕ ವಿದೇಶಗಳಿಂದ ವಾರ್ಷಿಕ ಎರಡು ಲಕ್ಷ ಅಂಚೆ ಲಕೋಟೆಗಳು, 50 ಸಾವಿರ ಅಂತರರಾಷ್ಟ್ರೀಯ ಸ್ಪೀಡ್ ಪೋಸ್ಟ್‌ಗಳು, 75 ಸಾವಿರ ಪಾರ್ಸೆಲ್‌ಗಳು ರಾಜ್ಯಕ್ಕೆ ಆಮದು ಆಗುತ್ತವೆ. ಇಷ್ಟೇ ಪ್ರಮಾಣದಲ್ಲಿ ರಫ್ತು ಆಗುತ್ತದೆ’ ಎನ್ನುತ್ತಾರೆ ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಚಾರ್ಲ್ಸ್ ಲೋಬೊ.
‘ರಾಜ್ಯದಲ್ಲಿ ಅಂಚೆ ಇಲಾಖೆಗೆ ಒಂದೇ ಕಸ್ಟಮ್ಸ್ ತಪಾಸಣೆ ಕೇಂದ್ರವಿರುವ ಕಾರಣ ರಫ್ತು, ಆಮದಿಗೆ ಬಹಳ ತೊಂದರೆ ಆಗುತ್ತಿದೆ. ಬೀದರ್‌ನ ಒಬ್ಬ ವ್ಯಕ್ತಿಗೆ ವಿದೇಶದಿಂದ ಸರಕು ಬರುತ್ತದೆ. ಒಂದು ವೇಳೆ ಇದಕ್ಕೆ ಅಗತ್ಯ ದಾಖಲೆಗಳು ಇಲ್ಲದಿದ್ದರೆ ಅವರು ಬೆಂಗಳೂರಿನ ಕೇಂದ್ರಕ್ಕೆ ಬಂದು ದಾಖಲೆಗಳನ್ನು ಒದಗಿಸಬೇಕು’ ಎಂದು ಹೇಳಿದರು.
‘ಇಂತಹ ಸಮಸ್ಯೆ ತಪ್ಪಿಸುವ ಉದ್ದೇಶದಿಂದ ಕಸ್ಟಮ್ಸ್ ತಪಾಸಣೆ ವ್ಯವಸ್ಥೆ ವಿಕೇಂದ್ರೀಕರಣ ಮಾಡಬೇಕಾಗಿದೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಬಂದರು ಇರುವ ಮಂಗಳೂರಿನಿಂದ ದೊಡ್ಡ ಪ್ರಮಾಣದಲ್ಲಿ ರಫ್ತು, ಆಮದು ನಡೆಯುತ್ತದೆ. ಹೀಗಾಗಿ ಮಂಗಳೂರು, ಹುಬ್ಬಳ್ಳಿ, ಕಲಬುರ್ಗಿಗಳಲ್ಲಿ ಒಬ್ಬ ಕಸ್ಟಮ್ಸ್ ತಪಾಸಣಾ ಅಧಿಕಾರಿ ನಿಯೋಜಿಸಿದರೆ ಅನುಕೂಲವಾಗಲಿದೆ’ ಎಂದರು.
**
ಪಾಸ್‌ಪೋರ್ಟ್ ಸೇವಾ ಕೇಂದ್ರಗಳ ಮಾದರಿಯಲ್ಲಿ ವಿವಿಧ ನಗರಗಳಲ್ಲಿ ಕಸ್ಟಮ್ಸ್ ತಪಾಸಣೆ ಕೇಂದ್ರ ಆರಂಭಿಸಿದರೆ ಜನರಿಗೆ ಸಮಯ, ಹಣ ಉಳಿತಾಯ ಆಗಲಿದೆ.
– ಚಾರ್ಲ್ಸ್ ಲೋಬೊ, ಕರ್ನಾಟಕದ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.