ADVERTISEMENT

ಅಂಚೆ ಕಚೇರಿ, ಇನ್ನು ಪೇಮೆಂಟ್ ಬ್ಯಾಂಕ್!

ಮನೆ ಬಾಗಿಲಿಗೆ ಹಣ ತಂದುಕೊಡಲಿದ್ದಾರೆ ಅಂಚೆಯಣ್ಣಂದಿರು

ವೆಂಕಟೇಶ್ ಜಿ.ಎಚ್
Published 14 ಜುಲೈ 2018, 19:30 IST
Last Updated 14 ಜುಲೈ 2018, 19:30 IST
   

ಬಾಗಲಕೋಟೆ: ಟ್ರಿಣ್, ಟ್ರಿಣ್ ಸದ್ದಿನೊಂದಿಗೆ ಮನೆ ಬಾಗಿಲಿಗೆ ಪತ್ರ, ಪಾರ್ಸೆಲ್ ತಂದು ಕೊಡುತ್ತಿದ್ದ ಅಂಚೆಯಣ್ಣಂದಿರು, ಇನ್ನು ಮುಂದೆ ನಿಮ್ಮ ಉಳಿತಾಯ ಖಾತೆಯಲ್ಲಿನ ಹಣ ತಂದುಕೊಡಲಿದ್ದಾರೆ. ಹಣ ಜಮಾ ಮಾಡಿಸಿಕೊಂಡು ಪಕ್ಕಾ ಬ್ಯಾಂಕ್ ಸಿಬ್ಬಂದಿಯಂತೆ ಕೆಲಸ ಮಾಡಲಿದ್ದಾರೆ.

ಶತಮಾನಗಳ ಕಾಲ ಸಂದೇಶ ವಾಹಕನ ಪಾತ್ರ ವಹಿಸಿದ್ದ ಅಂಚೆ ಕಚೇರಿಗಳು ಇನ್ನು ಮುಂದೆ ಹೆಚ್ಚುವರಿಯಾಗಿ ಪೇಮೆಂಟ್ ಬ್ಯಾಂಕ್ (ಇಂಡಿಯಾ ಪೋಸ್ಟ್ ಪೇಮೆಂಟ್‌ ಬ್ಯಾಂಕ್‌–ಐಪಿಪಿಬಿ) ಆಗಿಯೂ ಕೆಲಸ ಮಾಡಲಿವೆ. ಜುಲೈ ಅಂತ್ಯಕ್ಕೆ ಈ ಕಾರ್ಯಭಾರ ಇಲಾಖೆಯ ಹೆಗಲಿಗೇರಲಿದೆ. ಮೊದಲ ಹಂತದಲ್ಲಿ, ಈಗಿರುವ ಅಂಚೆ ಕಚೇರಿಗಳಲ್ಲೇ ಬ್ಯಾಂಕ್‌ ಶಾಖೆಗಳ ಸ್ಥಾಪನೆ, ಅಗತ್ಯ ಇರುವ ಕಡೆ ನೇಮಕಾತಿ, ಸಿಬ್ಬಂದಿಗೆ ತರಬೇತಿಯೂ ಪೂರ್ಣಗೊಂಡಿದೆ.

ಏನಿದು ಪೇಮೆಂಟ್ ಬ್ಯಾಂಕ್: ಬೇರೆ ಬ್ಯಾಂಕ್‌ಗಳ ರೀತಿ ತನ್ನದೇ ಇತಿಮಿತಿಯಲ್ಲಿ ಗ್ರಾಹಕರ ಜೊತೆ ಅಂಚೆ ಇಲಾಖೆ ಹಣಕಾಸಿನ ವಹಿವಾಟು ನಡೆಸಲಿದೆ. ಇಲ್ಲಿ ₹ 50 ತುಂಬಿ ಖಾತೆ ತೆರೆಯುವ ಗ್ರಾಹಕರು ₹1 ಲಕ್ಷದವರೆಗೆ ಠೇವಣಿ ಇಡಬಹುದು. ನಿತ್ಯದ ಚಟುವಟಿಕೆಗಳಿಗೆ ಹಣ ಬೇಕಿದ್ದರೆ ಕರೆ ಮಾಡಿದ ಗರಿಷ್ಠ 48 ಗಂಟೆಗಳ ಒಳಗಾಗಿ ಅಂಚೆಯಣ್ಣಂದಿರೇ ಮನೆ ಬಾಗಿಲಿಗೆ ಬಂದು ಹಣ ಕೊಡಲಿದ್ದಾರೆ. ಅಲ್ಲಿಯೇ ಸಹಿ ಪಡೆದು ರಸೀದಿ ಕೊಡಲಿದ್ದಾರೆ. ಜೊತೆಗೆ ಉಳಿತಾಯ ಖಾತೆಗೂ ಮನೆ ಬಳಿಯೇ ಹಣ ತುಂಬಬಹುದು.

ADVERTISEMENT

ಪ್ರಧಾನಿ ಕಚೇರಿ ನಿರ್ವಹಣೆ: ‘ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಬ್ಯಾಂಕಿಂಗ್‌ ಸೌಲಭ್ಯ ವಿಸ್ತರಿಸುವ ಹಾಗೂ ನಗದು ರಹಿತ ವಹಿವಾಟು ಉತ್ತೇಜಿಸಲು ಮುಂದಾಗಿರುವ ಕೇಂದ್ರ ಸರ್ಕಾರ, ಅದಕ್ಕೆ ಈಗಾಗಲೇ ದೇಶಾದ್ಯಂತ ಸಮರ್ಥ ಸಂಪರ್ಕ ಜಾಲ ಹೊಂದಿರುವ ಅಂಚೆ ಇಲಾಖೆ ಬಳಸಿಕೊಳ್ಳಲು ಮುಂದಾಯಿತು. ಅದರ ಫಲವಾಗಿ ಪೇಮೆಂಟ್ ಬ್ಯಾಂಕ್‌ನ ಕಲ್ಪನೆ ಸಾಕಾರಗೊಂಡಿದೆ. ಇದರ ನಿರ್ವಹಣೆ ಹೊಣೆಯನ್ನು ನೇರವಾಗಿ ಪ್ರಧಾನಮಂತ್ರಿ ಕಚೇರಿಯೇ ವಹಿಸಿಕೊಂಡಿದೆ’ ಎಂದು ಇಲಾಖೆಯ ಬಾಗಲಕೋಟೆ ವೃತ್ತದ ಮುಖ್ಯ ಅಧೀಕ್ಷಕ ಕೆ. ಮಹಾದೇವಪ್ಪ ಹೇಳುತ್ತಾರೆ.

ಗ್ರಾಹಕ ಸ್ನೇಹಿ ವಹಿವಾಟು:ಗ್ರಾಹಕರು ಅಂಚೆಯಣ್ಣನ ಬಳಿಯೇ ಖಾತೆ ತೆರೆಯಬಹುದಾಗಿದೆ. ಇಲ್ಲವೇ ಸಮೀಪದ ಶಾಖೆಗೆ ಎಡತಾಕಬಹುದಾಗಿದೆ. ಕ್ಯುಆರ್‌ ಕೋಡ್ ಕಾರ್ಡ್ ಕೊಡಲಿದ್ದಾರೆ. ದಾಖಲೆಯಾಗಿ ಆಧಾರ್ ಸಂಖ್ಯೆ, ಪ್ಯಾನ್ ನಂಬರ್ ಹಾಗೂ ಮೊಬೈಲ್ ಸಂಖ್ಯೆ ನೀಡಬಹುದು. ಚೆಕ್‌ಬುಕ್ ಬೇಕಿದ್ದರೆ ₹ 500 ಠೇವಣಿ ಇರಬೇಕು. ಕೆಲವು ಬ್ಯಾಂಕ್‌ಗಳು ಉಳಿತಾಯ ಖಾತೆಯಲ್ಲಿ ₹ 5000ವರೆಗೆ ಠೇವಣಿ ಇಡಬೇಕು ಎಂಬ ಷರತ್ತು ಹೊಂದಿವೆ. ಆದರೆ ಪೇಮೆಂಟ್ ಬ್ಯಾಂಕ್‌ನಲ್ಲಿ ಅಂತಹ ನಿಬಂಧನೆಗಳು ಇಲ್ಲ. ಇ– ಬ್ಯಾಂಕಿಂಗ್‌ ಸೇವೆಯೂ ಲಭ್ಯವಿದ್ದು, ಅದಕ್ಕೆ ಗ್ರಾಹಕರು ಹೆಚ್ಚಿನ ಶುಲ್ಕ ತೆರುವಂತಿಲ್ಲ.

ಯಾರಿಗೆ ಅನುಕೂಲ: ಸಾಮಾನ್ಯ ಗ್ರಾಹಕರ ಜತೆಗೆ ಹೆಣ್ಣು ಮಕ್ಕಳು, ಹಿರಿಯ ನಾಗರಿಕರು, ಅಂಗವಿಕಲರು, ವಹಿವಾಟಿಗೋಸ್ಕರ ಬ್ಯಾಂಕ್‌ಗಳಿಗೆ ಪದೇ ಪದೇ ತೆರಳಲು ಸಮಯಾವಕಾಶ ಇಲ್ಲದವರಿಗೆ ಪೇಮೆಂಟ್‌ ಬ್ಯಾಂಕ್‌ನ ಸೇವೆ ನೆರವಾಗಲಿದೆ. ಹಣ ಡ್ರಾ ಮಾಡುವುದು, ಠೇವಣಿ ಇರಿಸುವುದು, ಬೇರೆ ಬ್ಯಾಂಕುಗಳಿಗೆ ಹಣ ವರ್ಗಾಯಿಸಬಹುದು. ಡಿಒಪಿ ಅಕೌಂಟ್ ಜೋಡಣೆ, ಇಕೆವೈಸಿ–ಉಳಿತಾಯ ಖಾತೆ, ಚಾಲ್ತಿ ಖಾತೆ ಸೇವೆಗಳು ಲಭ್ಯವಿವೆ.

* ‘ನಿಮ್ಮಿಂದಲೇ, ನಿಮ್ಮ ಬ್ಯಾಂಕ್’ ಧ್ಯೇಯವಾಕ್ಯದಡಿ ಪೇಮೆಂಟ್ ಬ್ಯಾಂಕ್ ಆರಂಭಿಸುತ್ತಿದ್ದೇವೆ. ಇದು ಅಂಚೆ ಇಲಾಖೆ ಬಗ್ಗೆ ಗ್ರಾಹಕರು ಹೊಂದಿರುವ ನಂಬಿಕೆ ದ್ಯೋತಕವೂ ಹೌದು.

-ಕೆ.ಮಹಾದೇವಪ್ಪ, ಬಾಗಲಕೋಟೆ ವೃತ್ತದ ಮುಖ್ಯ ಅಂಚೆ ಅಧೀಕ್ಷಕ

ಯಾರಿಗೆ ಅನುಕೂಲ..

ಸಾಮಾನ್ಯ ಗ್ರಾಹಕರ ಜತೆಗೆ ಹೆಣ್ಣು ಮಕ್ಕಳು, ಹಿರಿಯ ನಾಗರಿಕರು, ಅಂಗವಿಕಲರು, ವಹಿವಾಟಿಗೋಸ್ಕರ ಬ್ಯಾಂಕ್‌ಗಳಿಗೆ ಪದೇ ಪದೇ ತೆರಳಲು ಸಮಯಾವಕಾಶ ಇಲ್ಲದವರಿಗೆ ಪೇಮೆಂಟ್‌ ಬ್ಯಾಂಕ್‌ನ ಸೇವೆ ನೆರವಾಗಲಿದೆ.

ಹಣ ಡ್ರಾ ಮಾಡುವುದು, ಠೇವಣಿ ಇರಿಸುವುದು, ಬೇರೆ ಬ್ಯಾಂಕುಗಳಿಗೆ ಹಣ ವರ್ಗಾಯಿಸಬಹುದು. ಡಿಒಪಿ ಅಕೌಂಟ್ ಜೋಡಣೆ, ಇಕೆವೈಸಿ–ಉಳಿತಾಯ ಖಾತೆ, ಚಾಲ್ತಿ ಖಾತೆ ಸೇವೆಗಳು ಲಭ್ಯವಿವೆ.

ಗ್ರಾಹಕರ ಹಣಕ್ಕೆ ಗರಿಷ್ಠ ಖಾತರಿ...

ಠೇವಣಿ ಇಟ್ಟ ಹಣಕ್ಕೆ ಪೇಮೆಂಟ್ ಬ್ಯಾಂಕ್‌ ಬಡ್ಡಿ ನೀಡಲಿದೆ. ಜೊತೆಗೆ ನೆಫ್ಟ್‌ (NEFT), ಆರ್‌ಟಿಜಿಇಎಸ್‌ (RTGES) ಮೂಲಕ ಹಣ ವರ್ಗಾವಣೆಗೆ ಅವಕಾವಿದೆ. ಕೋರ್‌ ಬ್ಯಾಂಕಿಂಗ್‌ ಸೇವೆಗೆ ಒಳಪಟ್ಟಿರುವುದರಿಂದ ಯಾವುದೇ ರಾಷ್ಟ್ರೀಕೃತ ಬ್ಯಾಂಕ್‌ನ ಎಟಿಎಂಗಳಲ್ಲೂ ಹಣ ಡ್ರಾ ಮಾಡಬಹುದು.

ಬಯೋಮೆಟ್ರಿಕ್‌ ವ್ಯವಸ್ಥೆ ಇರುವುದರಿಂದ ಗ್ರಾಹಕರ ಬೆರಳ ಗುರುತು ಮೂಡಿದರೆ ಮಾತ್ರ ಖಾತೆಯ ವಿವರಗಳು ಗೊತ್ತಾಗಲಿವೆ. ಅಂಚೆಯಣ್ಣಂದಿರೊಂದಿಗೆ ವಹಿವಾಟಿನ ವೇಳೆಯೂ ಗ್ರಾಹಕರ ಬೆರಳ ಗುರುತು ಅಗತ್ಯ. ಹಾಗಾಗಿ ಗರಿಷ್ಠ ಮಟ್ಟದ ಸುರಕ್ಷತೆಯ ಖಾತರಿ ಪೇಮೆಂಟ್ ಬ್ಯಾಂಕ್‌ ನೀಡಲಿದೆ ಎಂದು ಮಹಾದೇವಪ್ಪ ಹೇಳುತ್ತಾರೆ.

ಕ್ಯುಆರ್‌ಕೋಡ್ ಕಾರ್ಡ್: ಎಟಿಎಂ ಬದಲು ಗ್ರಾಹಕರಿಗೆ ಕ್ಯುಆರ್‌ ಕೋಡ್ ಕಾರ್ಡ್ ನೀಡಲಾಗುತ್ತದೆ. ಅದರಲ್ಲಿ ಖಾತೆಯ ಸಂಪೂರ್ಣ ಮಾಹಿತಿ ಇರಲಿದೆ. ಮುಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ನಗದು ರಹಿತ ವಹಿವಾಟು ನಡೆಸಲು ಈ ಕಾರ್ಡ್ ನೆರವಾಗಲಿದೆ ಎನ್ನುತ್ತಾರೆ.

ಜಿಲ್ಲೆಯಲ್ಲಿ ಸದ್ಯ ಐದು ಶಾಖೆಗಳು ಸಜ್ಜುಗೊಂಡಿವೆ..

ಜಿಲ್ಲೆಯಲ್ಲಿ ಒಟ್ಟು ಅಂಚೆ ಕಚೇರಿಗಳು
349 ಅಂಚೆ ಕಚೇರಿಗಳು ಇವೆ.
ಬಾಗಲಕೋಟೆಯ ಮುಖ್ಯ ಕಚೇರಿ
ನವನಗರದ ಉಪ ಕಚೇರಿ
ಬಸವೇಶ್ವರ ಹೈಸ್ಕೂಲ್ ಶಾಖೆ
ಹವೇಲಿ
ಬಿಟಿಡಿಎ ಕಚೇರಿಯೊಳಗಿನ ಅಂಚೆ ಕಚೇರಿ

ಖಾತೆ ತೆರೆಯಲು ಶುಲ್ಕ ₹50

ಪೇಮೆಂಟ್ ಬ್ಯಾಂಕ್ ಇನ್ನಷ್ಟು ವಿವರ
ದೇಶಾದ್ಯಂತ 710 ಜಿಲ್ಲೆಗಳಲ್ಲಿ, 1.5 ಲಕ್ಷ ಶಾಖೆಗಳು, 3.60 ಲಕ್ಷ ಸಿಬ್ಬಂದಿ ನೇಮಕ

ಬಾಗಲಕೋಟೆಯ ಮುಖ್ಯ ಅಂಚೆ ಕಚೇರಿಯಲ್ಲಿ ಸಜ್ಜುಗೊಂಡಿರುವ ಇಂಡಿಯಾ ಪೋಸ್ಟ್‌ ಪೇಮೆಂಟ್ ಬ್ಯಾಂಕ್‌ನ ನೂತನ ಶಾಖೆಯ ನೋಟ ಪ್ರಜಾವಾಣಿ ಚಿತ್ರ– ಮಂಜುನಾಥ ಗೋಡೆಪ್ಪನವರ
ಗ್ರಾಹಕರೊಂದಿಗೆ ವಹಿವಾಟಿನ ವೇಳೆ ಉಪಕರಣಗಳ ಬಳಕೆ ಬಗ್ಗೆ ಅಧಿಕಾರಿಗಳು ಬಾಗಲಕೋಟೆಯಲ್ಲಿ ಅಂಚೆ ಸಿಬ್ಬಂದಿಗೆ ತರಬೇತಿ ನೀಡಿದರು
ಕೆ.ಮಹಾದೇವಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.