ಬೆಂಗಳೂರು: ‘ಮೊದಲ ದಿನ ಒಟ್ಟು 351 ಮಂದಿ ಆನ್‌ಲೈನ್ ಮೂಲಕ ಮಾವಿನ ಹಣ್ಣುಗಳನ್ನು ಕಾಯ್ದಿರಿಸಿದ್ದಾರೆ. ಒಂದು ಟನ್‌ಗೂ ಅಧಿಕ ಹಣ್ಣಿಗೆ ಬೇಡಿಕೆ ಬಂದಿದೆ’ ಎಂದು ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ (ಕೆಎಸ್‌ಎಂಡಿಎಂಸಿ) ಅಧ್ಯಕ್ಷ ಕೆ.ವಿ.ನಾಗರಾಜು ತಿಳಿಸಿದರು.
ಆನ್‌ಲೈನ್ ಮೂಲಕ ಮಾವು ಮಾರಾಟ ಮಾಡುವ ಸಂಬಂಧ ಕೆಎಸ್‌ಎಂಡಿಎಂಸಿ ಹಾಗೂ ಅಂಚೆ ಇಲಾಖೆ ನಡುವೆ ಒಪ್ಪಂದವಾಗಿದ್ದು, ಅಂಚೆ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ಮಾವು ತಲುಪಿಸುವ ಕಾರ್ಯಕ್ಕೆ ಬುಧವಾರ ಚಾಲನೆ ನೀಡಲಾಯಿತು.
ಬಳಿಕ ಮಾತನಾಡಿದ ನಾಗರಾಜು ‘ಕೋವಿಡ್ ಎರಡನೇ ಅಲೆಗೆ ಕಡಿವಾಣ ಹಾಕಲು ಸರ್ಕಾರ ಬಿಗಿ ಕ್ರಮಗಳನ್ನು ಕೈಗೊಂಡಿದೆ. ಹೀಗಾಗಿ ಆನ್‌ಲೈನ್ ಖರೀದಿಯತ್ತ ಜನ ಒಲವು ತೋರುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಅಂಚೆ ಇಲಾಖೆ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ. ಬಾಕ್ಸ್‌ಗಳ ರೂಪದಲ್ಲಿ ಇವುಗಳನ್ನು ಪೂರೈಸಲಾಗುತ್ತದೆ. ಬಾಕ್ಸ್‌ವೊಂದರಲ್ಲಿ 3 ಕೆ.ಜಿ. ಹಣ್ಣು ಇರುತ್ತದೆ. ಮಾರುಕಟ್ಟೆ ದರದಲ್ಲೇ ಅವುಗಳನ್ನು ಗ್ರಾಹಕರಿಗೆ ಒದಗಿಸಲು ನಿರ್ಧರಿಸಲಾಗಿದೆ’ ಎಂದರು.
‘ಅಂಚೆ ಇಲಾಖೆಯ ಸಹಕಾರದಿಂದ ಹೋದ ವರ್ಷ ಆನ್‌ಲೈನ್ ಮೂಲಕ ಒಟ್ಟು 100 ಟನ್‌ಗೂ ಅಧಿಕ ಮಾವು ಮಾರಾಟ ಮಾಡಲಾಗಿತ್ತು. ರೈತರು ₹1.6 ಕೋಟಿ ವಹಿವಾಟು ನಡೆಸಿದ್ದರು. ಈ ಬಾರಿಯೂ ಉತ್ತಮ ವಹಿವಾಟು ನಡೆಸುವ ನಿರೀಕ್ಷೆ ಇದೆ’ ಎಂದು ಹೇಳಿದರು.
ಬೆಂಗಳೂರು ಕೇಂದ್ರ ವಲಯದ ಪೋಸ್ಟ್‌ಮಾಸ್ಟರ್ ಜನರಲ್ ಶೆವುಲಿ ಬರ್ಮನ್ ‘ಕೋವಿಡ್‌ನಿಂದ ಸೃಷ್ಟಿಯಾಗಿರುವ ಬಿಕ್ಕಟ್ಟಿನ ಸಮಯದಲ್ಲೂ ಅಂಚೆ ಇಲಾಖೆಯು ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದೆ. ಔಷಧಗಳು, ಪಿಪಿಟಿ ಕಿಟ್ ಹಾಗೂ ಮಾವಿನ ಹಣ್ಣು ಸೇರಿದಂತೆ ಇತರ ಅಗತ್ಯ ವಸ್ತುಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಗ್ರಾಹಕರು ಕಾಯ್ದಿರಿಸಿದ ದಿನವೇ ಅವರಿಗೆ ತಾಜಾ ಮಾವಿನ ಹಣ್ಣುಗಳನ್ನು ತಲುಪಿಸಲು ಎಲ್ಲಾ ಕ್ರಮ ಕೈಗೊಂಡಿದೆ. ಈ ವ್ಯವಸ್ಥೆಯನ್ನು ಸದ್ಯ ಬೆಂಗಳೂರಿಗಷ್ಟೇ ಸೀಮಿತಗೊಳಿಸಲಾಗಿದೆ. ಗ್ರಾಹಕರು www.karsirimangoes.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಿ ವಿವಿಧ ತಳಿಯ ಮಾವಿನ ಹಣ್ಣು ಕಾಯ್ದಿರಿಸಬಹುದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.