ADVERTISEMENT

ಸಿಐಡಿಯಿಂದ ‘ಪೋಸ್ಟ್‌ಕಾರ್ಡ್’ ಮುಖ್ಯಸ್ಥನ ವಿಚಾರಣೆ

ಎಂ.ಬಿ.ಪಾಟೀಲ ಹೆಸರಿನಲ್ಲಿ ಸೋನಿಯಾ ಗಾಂಧಿಗೆ ಪತ್ರ ರವಾನೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 20:11 IST
Last Updated 24 ಏಪ್ರಿಲ್ 2019, 20:11 IST
ಮಹೇಶ್
ಮಹೇಶ್   

ಬೆಂಗಳೂರು: ಲಿಂಗಾಯತ ಪ್ರತ್ಯೇಕ ಧರ್ಮಸ್ಥಾಪನೆ ವಿಚಾರವಾಗಿ ಗೃಹ ಸಚಿವ ಎಂ.ಬಿ.ಪಾಟೀಲ ಅವರ ಹೆಸರಿನಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ ಪತ್ರ ರವಾನೆಯಾದ ಪ್ರಕರಣದಲ್ಲಿ ‘ಪೋಸ್ಟ್‌ ಕಾರ್ಡ್‌’ ವೆಬ್‌ಸೈಟ್‌ನ ಮುಖ್ಯಸ್ಥ ಮಹೇಶ್ ವಿಕ್ರಮ್ ಹೆಗಡೆ ಅವರು ಬುಧವಾರ ಸಿಐಡಿ ವಿಚಾರಣೆ ಎದುರಿಸಿದರು.

ನೋಟಿಸ್ ಜಾರಿಯಾಗಿದ್ದ ಹಿನ್ನೆಲೆಯಲ್ಲಿ ಬೆಳಿಗ್ಗೆ ಸಿಐಡಿ ಕೇಂದ್ರ ಕಚೇರಿಗೆ ಬಂದ ಮಹೇಶ್ ಅವರನ್ನು ಸೈಬರ್ ವಿಭಾಗದ ಪೊಲೀಸರು ಸತತ ನಾಲ್ಕು ತಾಸು ವಿಚಾರಣೆಗೆ ಒಳಪಡಿಸಿದರು. ಮತ್ತೊಂದೆಡೆ ಬಿಜೆಪಿ ನಾಯಕರು, ‘ಸಿಐಡಿ ಪೊಲೀಸರು ಮಹೇಶ್ ಹೆಗಡೆ ಅವರನ್ನು ಬಂಧಿಸಿದ್ದಾರೆ’ ಎಂಬ ಸುದ್ದಿಯನ್ನೂ ಹರಿಬಿಟ್ಟರು.‌

ಆದರೆ, ‘ತನಿಖೆಗೆ ಅಗತ್ಯವಿದ್ದ ಕೆಲವರನ್ನು ಈಗಾಗಲೇ ವಿಚಾರಣೆ ನಡೆಸಿದ್ದೇವೆ. ಅಂತೆಯೇ ಮಹೇಶ್ ಅವರನ್ನೂ ಕರೆಸಿ ಪ್ರಶ್ನೆ ಮಾಡಿದ್ದೇವೆ. ಈವರೆಗೆ ಯಾರನ್ನೂ ಬಂಧಿಸಿಲ್ಲ’ ಎಂದುಸಿಐಡಿ ಐಜಿಪಿ ಹೇಮಂತ್ ನಿಂಬಾಳ್ಕರ್ ಸ್ಪಷ್ಟಪಡಿಸಿದರು.

ADVERTISEMENT

‘ಕಿಡಿಗೇಡಿಗಳು ಪ್ರತಿಷ್ಠಿತ ಬಿಎಲ್‌ಡಿಇ ಸಂಸ್ಥೆಯ ಲೆಟರ್ ಹೆಡ್ ಬಳಸಿ, ನಕಲಿ ಪತ್ರವೊಂದನ್ನು ಸೃಷ್ಟಿಸಿದ್ದಾರೆ. ಅದರಲ್ಲಿ ನನ್ನ ಸಹಿಯನ್ನು ನಕಲು ಮಾಡಿ 2017ರ ಜುಲೈ 10ರಂದು ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ’ ಎಂದು ಬಿಎಲ್‌ಡಿಇ ಸಂಸ್ಥೆಯ ಅಧ್ಯಕ್ಷರೂ ಆದ ಎಂ.ಬಿ.ಪಾಟೀಲ ವಿಜಯಪುರದ ಆದರ್ಶನಗರ ಠಾಣೆಗೆ ದೂರು ಕೊಟ್ಟಿದ್ದರು. ಪ್ರಕರಣ ಸಿಐಡಿಗೆ ವರ್ಗವಾಗಿತ್ತು.

‘ಪೋಸ್ಟ್‌ ಕಾರ್ಡ್‌’ನಲ್ಲಿ ಮೊದಲು: ಎಂ.ಬಿ.ಪಾಟೀಲ ಅವರು ಬರೆದಿದ್ದರು ಎನ್ನಲಾದ ಪತ್ರವು 2018ರ ವಿಧಾನಸಭಾ ಚುನಾವಣೆ ವೇಳೆ ರಾಜಕೀಯ ವಲಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತ್ತು. ‘ಅಧಿಕಾರಕ್ಕಾಗಿ ಧರ್ಮ ಒಡೆಯುವ ಕೆಲಸ ಮಾಡಲಾಗುತ್ತಿದೆ’ ಎಂದು ಬಿಜೆಪಿ ಮುಖಂಡರು ಟೀಕಾ ಪ್ರಹಾರ ನಡೆಸಿದ್ದರು. ಆಗ ಪಾಟೀಲ ಮೌಖಿಕ ಸ್ಪಷ್ಟನೆ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದರು. ಆದರೆ, ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಅದೇ ಪತ್ರ ಜಾಲತಾಣಗಳಲ್ಲಿ ಹರಿದಾಡಿತ್ತು.

‘ಆ ಪತ್ರ ಪೋಸ್ಟ್‌ಕಾರ್ಡ್‌ ವೆಬ್‌ಸೈಟ್‌ನಲ್ಲೇ ಮೊದಲು ಪ್ರಕಟವಾಗಿತ್ತು ಎಂಬ ಮಾಹಿತಿ ಇದೆ. ಹೀಗಾಗಿ, ಅದರ ಮೂಲದ ಬಗ್ಗೆ ಮಹೇಶ್ ಅವರಿಂದ ವಿವರಣೆ ಕೇಳಲಾಯಿತು. ಅದಕ್ಕೆ ಸರಿಯಾಗಿ ಉತ್ತರಿಸದ ಅವರು, ಕಾಲಾವಕಾಶ ಕೋರಿದ್ದಾರೆ’ ಎಂದು ಸಿಐಡಿ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.