ADVERTISEMENT

ಕುಮಾರಸ್ವಾಮಿ ವಿರುದ್ಧ ಕೀಳು ಅಭಿರುಚಿಯ ಪೋಸ್ಟರ್‌: ಎಫ್‌ಐಆರ್ ದಾಖಲು

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2023, 22:55 IST
Last Updated 22 ನವೆಂಬರ್ 2023, 22:55 IST
   

ಬೆಂಗಳೂರು:ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ನಗರದ ವಿವಿಧೆಡೆ ಕೀಳು ಅಭಿರುಚಿಯ ಪೋಸ್ಟರ್‌ ಅಂಟಿಸಿದ್ದ ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜೆಡಿಎಸ್‌ ಮುಖಂಡರು ಬುಧವಾರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದರು.

ದೂರು ಆಧರಿಸಿ ಶ್ರೀರಾಂಪುರ ಪೊಲೀಸರು ಎಸ್.ಮನೋಹರ್‌, ಡಿ.ಎಸ್.ಕಾರ್ತಿಕ್‌ ಗೌಡ, ಎಚ್.ಡಿ.ದರ್ಶನ್ ಗೌಡ, ಅರ್ಜುನ್ ಡಿ.ಗೌಡ, ಸಂತೋಷ್‌ ಎನ್ನುವವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಅವರ ವಿರುದ್ಧ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ದಯಾನಂದ ಅವರಿಗೆ ದೂರು ಸಲ್ಲಿಸಿದ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ, ವಿಧಾನ ಪರಿಷತ್‌ ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ, ಜೆಡಿಎಸ್ ರಾಜ್ಯ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್‌ ಮತ್ತಿತರರು ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಮನೋಹರ್ ಹಿಂದಿನಿಂದಲೂ ಇದೇ ರೀತಿಯಲ್ಲಿ ಕೀಳು ಅಭಿರುಚಿಯ ಪೋಸ್ಟರ್‌ ಅಂಟಿಸಿ, ವಿರೋಧ ಪಕ್ಷದ ನಾಯಕರನ್ನು ತೇಜೋವಧೆ ಮಾಡುತ್ತಾ ಬಂದಿದ್ದಾರೆ. ಈಗ ಕುಮಾರಸ್ವಾಮಿ ಅವರ ವಿರುದ್ಧ ಜೆಡಿಎಸ್‌ ಕಚೇರಿ ಬಳಿಯೂ ಪೋಸ್ಟರ್‌ ಅಂಟಿಸಿದ್ದಾರೆ. ಮುಖ್ಯಮಂತ್ರಿಯ ಮುಖ್ಯ ಸಲಹೆಗಾರ ಸುನಿಲ್ ಕನುಗೋಳ ಅವರೂ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಮುಖ್ಯಮಂತ್ರಿ ವಿರುದ್ಧ ಪೋಸ್ಟರ್ ಅಂಟಿಸಿದ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು  ಆಗ್ರಹಿಸಿದರು.

‘ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳದಿದ್ದರೆ ಎಲ್ಲಾ ಸಚಿವರ ಕಚೇರಿ ಮುಂದೆ ನಾವೂ ಪೋಸ್ಟರ್‌  ಅಂಟಿಸುತ್ತೇವೆ. ಕಾಂಗ್ರೆಸ್‌ ಇದೇ ಚಾಳಿ ಮುಂದುವರಿಸಿದರೆ ಜೆಡಿಎಸ್‌ ಸುಮ್ಮನೆ ಕೂರುವುದಿಲ್ಲ’ ಎಂದು ರಮೇಶ್ ಗೌಡ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.