ಬೆಂಗಳೂರು: ರಾಜ್ಯದ ವಿಶ್ವವಿದ್ಯಾಲಯಗಳ ಕುಲಸಚಿವ (ಆಡಳಿತ) ಹುದ್ದೆಗಳು ಕೆಎಎಸ್ ಅಧಿಕಾರಿಗಳು ಹಾಗೂ ಪ್ರೊಫೆಸರ್‌ಗಳ ಮಧ್ಯದ ‘ಮ್ಯೂಸಿಕಲ್ ಚೇರ್’ಗಳಂತಾಗಿವೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕೆಲ ವಿಶ್ವವಿದ್ಯಾಲಯಗಳಿಗೆ ಕೆಎಎಸ್ ಹಿರಿಯ ಶ್ರೇಣಿಯ ಅಧಿಕಾರಿಗಳನ್ನು ವರ್ಗಾಯಿಸಿದರೆ, ಮತ್ತೊಂದು ಕಡೆ ಉನ್ನತ ಶಿಕ್ಷಣ ಇಲಾಖೆ ವಿಶ್ವವಿದ್ಯಾಲಯಗಳಲ್ಲಿ ಸೇವಾ ಹಿರಿತನ ಹೊಂದಿರುವ ಪ್ರಾಧ್ಯಾಪಕರನ್ನು (ಪ್ರೊಫೆಸರ್) ನೇಮಿಸುತ್ತಿದೆ. ಎರಡೂ ಇಲಾಖೆಗಳು ಕುಲಸಚಿವ ಸ್ಥಾನಗಳ ಭರ್ತಿಗೆ ಪೈಪೋಟಿಗೆ ಬಿದ್ದವರಂತೆ ಆದೇಶ ಹೊರಡಿಸುತ್ತಿವೆ.
ಕಳೆದ ವರ್ಷ ಹೊಸದಾಗಿ ಆರಂಭವಾಗಿದ್ದ ಎಂಟು ವಿಶ್ವವಿದ್ಯಾಲಯಗಳಿಗೆ ಹಿಂದಿನ ಬಿಜೆಪಿ ಸರ್ಕಾರ ಕೆಎಎಸ್‌ಯೇತರ ಅಧಿಕಾರಿಗಳನ್ನು ನೇಮಿಸಿತ್ತು. ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರೇ ಆ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇದೇ ಜುಲೈನಲ್ಲಿ ನಡೆದ ಅಧಿಕಾರಿಗಳ ವರ್ಗಾವಣೆಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಒಂದೇ ದಿನ ಬೆಂಗಳೂರು ವಿಶ್ವವಿದ್ಯಾಲಯ, ಮಂಗಳೂರು, ನೃಪತುಂಗ, ರಾಯಚೂರು, ಕೃಷ್ಣದೇವರಾಯ ಸೇರಿದಂತೆ 10 ವಿಶ್ವವಿದ್ಯಾಲಯಗಳಿಗೆ ಕೆಎಎಸ್ ಹಿರಿಯ ಶ್ರೇಣಿಯ ಅಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿತ್ತು. ಅತ್ತ ಕುವೆಂಪು ವಿಶ್ವವಿದ್ಯಾಲಯಕ್ಕೆ ವರ್ಗಾವಣೆಗೊಂಡಿದ್ದ ಎಂ.ಪಿ.ಮಾರುತಿ ಆದೇಶ ಬದಲಾವಣೆ ಮಾಡಿಸಿಕೊಂಡು ಹಂಪಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೋಗುತ್ತಿದ್ದಂತೆ, ಉನ್ನತ ಶಿಕ್ಷಣ ಇಲಾಖೆ ಪ್ರತ್ಯೇಕ ಆದೇಶ ಹೊರಡಿಸಿ ಪ್ರೊ.ಕಣ್ಣನ್ ಅವರನ್ನುಕುಲಸಚಿವ ಹುದ್ದೆಗೆ ನೇಮಿಸಿತ್ತು.
ನಿಯಮ ಪಾಲನೆಯಲ್ಲಿಲ್ಲ ಸ್ಪಷ್ಟತೆ:
2000ದ ಇಸವಿವರೆಗೂ ರಾಜ್ಯದ ವಿಶ್ವವಿದ್ಯಾಲಯಗಳ ಕುಲಸಚಿವ ಹುದ್ದೆಗಳಿಗೆ ಅನುಭವಿ ಪ್ರಾಧ್ಯಾಪಕರನ್ನು ನೇಮಕ ಮಾಡಲಾಗುತ್ತಿತ್ತು. ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆಗೆ ತಿದ್ದುಪಡಿ ತಂದು ಕುಲಸಚಿವ ಸ್ಥಾನಕ್ಕೆ ಐಎಎಸ್, ಐಎಫ್‌ಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳನ್ನು ನೇಮಿಸಬಹುದು ಎಂದು ನಿಯಮ ರೂಪಿಸಿತು. ಕಾಯ್ದೆ ಜಾರಿಯ ನಂತರ ಹಲವು ವಿಶ್ವವಿದ್ಯಾಲಯಗಳಿಗೆ ಐಎಎಸ್, ಐಎಫ್‌ಎಸ್, ಐಪಿಎಸ್ ಶ್ರೇಣಿಯ ಅಧಿಕಾರಿಗಳು ನೇಮಕವಾದರೂ, ಐದಾರು ತಿಂಗಳಿಗಿಂತ ಹೆಚ್ಚು ಅವಧಿ ಯಾರೂ ಕೆಲಸ ಮಾಡಲಿಲ್ಲ. ಮಲೆನಾಡಿನ ಕುವೆಂಪು ವಿಶ್ವವಿದ್ಯಾಲಯಕ್ಕೆ ನೇಮಕವಾಗಿದ್ದ ಐಎಫ್‌ಎಸ್ ಅಧಿಕಾರಿ ಪ್ರವೀಣ್‌ಚಂದ್ರ ಪಾಂಡೆ ನಾಲ್ಕು ವರ್ಷ ಆ ಸ್ಥಾನದಲ್ಲಿ ಇದ್ದುದೇ ಇದುವರೆಗಿನ ದಾಖಲೆ.
ಕುಲಸಚಿವ ಹುದ್ದೆಗಳಿಗೆ ತೆರಳಲು ಐಎಎಸ್ ದರ್ಜೆಯ ಅಧಿಕಾರಿಗಳು ಮನಸ್ಸು ಮಾಡದ ಕಾರಣ ಉನ್ನತ ಶಿಕ್ಷಣ ಇಲಾಖೆ ಅನಿವಾರ್ಯವಾಗಿ ಮತ್ತೆ ಪ್ರಾಧ್ಯಾಪಕರನ್ನೇ ಆ ಹುದ್ದೆಗೆ ನೇಮಿಸಲು ಆರಂಭಿಸಿತ್ತು. ಕೆಎಎಸ್ ಅಧಿಕಾರಿಗಳನ್ನು ನೇಮಕ ಮಾಡಲು ವಿಶ್ವವಿದ್ಯಾಲಯಗಳ ಕಾಯ್ದೆಗೆ 2022ರಲ್ಲಿ ಮತ್ತೆ ತಿದ್ದುಪಡಿ ತರಲಾಯಿತು. ವಿಪರ್ಯಾಸವೆಂದರೆ ತಿದ್ದುಪಡಿ ತರಲು ಶ್ರಮಿಸಿದ್ದ ಅಂದಿನ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರೇ ಅಸ್ತಿತ್ವಕ್ಕೆ ತಂದ ರಾಜ್ಯದ ಎಂಟು ಹೊಸ ವಿಶ್ವವಿದ್ಯಾಲಯಗಳ ಪ್ರಥಮ ಕುಲಸಚಿವ ಸ್ಥಾನಕ್ಕೆ ಅಧ್ಯಾಪಕರನ್ನೇ ನೇಮಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.