ADVERTISEMENT

ರಾಜ್ಯದ ಮೊದಲ ಅನಿಲ ಆಧಾರಿತ ವಿದ್ಯುತ್ ಕೇಂದ್ರ

ಕೆ.ಜೆ.ಮರಿಯಪ್ಪ
Published 12 ಡಿಸೆಂಬರ್ 2019, 19:37 IST
Last Updated 12 ಡಿಸೆಂಬರ್ 2019, 19:37 IST
   

ಬೆಂಗಳೂರು: ರಾಜ್ಯದ ಮೊದಲ ಅನಿಲ ಆಧಾರಿತ ವಿದ್ಯುತ್ ಉತ್ಪಾದನಾ ಕೇಂದ್ರ ಕಾರ್ಯಾರಂಭ ಮಾಡಲು ಸಿದ್ಧವಾಗಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಉತ್ಪಾದನೆ ಆರಂಭಿಸಲಿದೆ. ಸಾಕಷ್ಟು ತಡವಾಗಿದ್ದ ಯೋಜನೆ ಕೊನೆಗೂ ದಡಮುಟ್ಟಿದೆ.

ನಗರದ ಯಲಹಂಕ ಬಳಿ 370 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಘಟಕದ ನಿರ್ಮಾಣ ಕೆಲಸ ಬಹುತೇಕ ಪೂರ್ಣಗೊಂಡಿದ್ದು, ಇನ್ನೂ ಉದ್ಘಾಟನೆಯಷ್ಟೇ ಬಾಕಿ ಇದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಈ ತಿಂಗಳ ಅಂತ್ಯಕ್ಕೆ ಕಾರ್ಯಾಚರಣೆಗೆ ಚಾಲನೆ ಸಿಗಲಿದೆ.

4 ವರ್ಷದಲ್ಲಿ ಪೂರ್ಣ: ಸರ್ಕಾರಿ ಸ್ವಾಮ್ಯದ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್‌ಇಎಲ್) ವಿದ್ಯುತ್ ಕೇಂದ್ರದ ನಿರ್ಮಾಣ ಗುತ್ತಿಗೆಯನ್ನು ಪಡೆದುಕೊಂಡಿತ್ತು. 2015ರ ಸೆಪ್ಟೆಂಬರ್‌ನಲ್ಲಿ ಕೆಲಸ ಆರಂಭಿಸಿದ್ದು, ಈಗ ಪೂರ್ಣಗೊಳಿಸಿದೆ. ಈ ಜಾಗದಲ್ಲಿ ಹಿಂದೆ ಡೀಸೆಲ್ ಜನರೇಟರ್ ಬಳಸಿವಿದ್ಯುತ್ ಉತ್ಪಾದನೆ ಮಾಡಲಾಗುತ್ತಿತ್ತು. ಇದರಿಂದ ಪರಿಸರ ಮಾಲಿನ್ಯದ ಪ್ರಮಾಣ ಹೆಚ್ಚುತ್ತಿರುವುದನ್ನು ಮನಗಂಡುಕೆಪಿಟಿಸಿಎಲ್ ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದು, ನಂತರ ಈ ಸ್ಥಳವನ್ನು ಕೆಪಿಸಿಎಲ್ ತನ್ನ ವಶಕ್ಕೆ ಪಡೆದುಕೊಂಡಿತ್ತು. ಈಗ ನೂತನವಿದ್ಯುತ್ ಘಟಕ ಸ್ಥಾಪಿಸಿದೆ.

ADVERTISEMENT

ಈ ಘಟಕವೂ ವಿದ್ಯುತ್ ಉತ್ಪಾದನೆ ಆರಂಭಿಸಿ, ರಾಜ್ಯದ ವಿದ್ಯುತ್ ಜಾಲಕ್ಕೆ ಸೇರ್ಪಡೆಯಾದರೆ ಮುಂದಿನ ದಿನಗಳಲ್ಲಿ ವಿದ್ಯುತ್ ಸಮಸ್ಯೆಗೆ ಸ್ವಲ್ಪ ಮಟ್ಟಿಗೆ ಪರಿಹಾರ ಸಿಗಲಿದೆ. ಪರಿಸರ ಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ಕೆಪಿಸಿಎಲ್ ಕಾರ್ಯಪ್ರವೃತ್ತವಾಗಿದ್ದು, ಅಸಾಂಪ್ರದಾಯಿಕ ಮೂಲಗಳಿಂದ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕಿದೆ.

ಕಲ್ಲಿದ್ದಲು ಬಳಸಿ ಶಾಖೋತ್ಪನ್ನ ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಮಾಡುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದು. ಸೋಲಾರ್, ಪವನ, ಅನಿಲ, ಜಲ ವಿದ್ಯುತ್ ಉತ್ಪಾದನೆಗೆ ಆದ್ಯತೆ ನೀಡಲು ನಿಗಮ ಮುಂದಾಗಿದೆ. ಹಾಗಾಗಿ ಅನಿಲ ಆಧಾರಿತ ವಿದ್ಯುತ್ ಘಟಕ ಸ್ಥಾಪಿಸಲಾಗಿದೆ ಎಂದು ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು.

ಯೋಜನೆ ಗಾತ್ರ

104 ಎಕರೆ ಪ್ರದೇಶದಲ್ಲಿ ₹1700 ಕೋಟಿ ವೆಚ್ಚದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಸಿಎಲ್) ಈ ಘಟಕ ನಿರ್ಮಿಸಿದೆ. ಭಾರತೀಯ ಅನಿಲ ಪ್ರಾಧಿಕಾರ (ಗೇಲ್) ಮಹಾರಾಷ್ಟ್ರದ ದಾಬೋಲ್‌ನಿಂದ ಬೆಂಗಳೂರಿಗೆ ಪೈಪ್‌ಲೈನ್ ಮೂಲಕ ಅನಿಲ ಸರಬರಾಜು ಮಾಡುವ ಜಾಲವನ್ನು ರೂಪಿಸಿದ್ದು, ಇದೇ ಜಾಲದಿಂದ ಈ ಕೇಂದ್ರಕ್ಕೂ ಅನಿಲ ಸರಬರಾಜು ಆಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.