ಬೆಂಗಳೂರು: ‘ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯನ್ನು ಮುಂದಿನ ಏಳು ವರ್ಷಗಳಲ್ಲಿ 28,000 ಮೆಗಾ ವಾಟ್‌ನಷ್ಟು ಹೆಚ್ಚಿಸುವ ಗುರಿ ಇದೆ. ಇದಕ್ಕಾಗಿ ಸಿದ್ಧತೆಗಳನ್ನು ಆರಂಭಿಸಲಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ಹೆಬ್ಬಾಳದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಶನಿವಾರ ‘ರೈತ ಸೌರಶಕ್ತಿ ಮೇಳ’ ಉದ್ಘಾಟಿಸಿದ ಅವರು, ‘ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಉತ್ಪಾದನೆಯೂ ಹೆಚ್ಚಬೇಕು. ಈಗ ರಾಜ್ಯದಲ್ಲಿ ಉತ್ಪಾದನಾ ಸಾಮರ್ಥ್ಯ 32,000 ಮೆಗಾವಾಟ್‌ನಷ್ಟಿದೆ. 2031ರ ವೇಳೆಗೆ 60,000 ಮೆಗಾವಾಟ್‌ಗಳಿಗೆ ಹೆಚ್ಚಿಸುವ ಗುರಿ ಇದೆ’ ಎಂದರು.
2013ರಲ್ಲಿ ತಮ್ಮ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗ ಉತ್ಪಾದನಾ ಸಾಮರ್ಥ್ಯ 14,000 ಮೆಗಾವಾಟ್ ಇತ್ತು. ಐದು ವರ್ಷಗಳಲ್ಲಿ ಅದನ್ನು 28,000 ಮೆಗಾವಾಟ್‌ಗೆ ಏರಿಸಲಾಗಿತ್ತು. ಸಮ್ಮಿಶ್ರ ಸರ್ಕಾರ ಹಾಗೂ ಬಿಜೆಪಿ ಆಡಳಿತದ ಐದು ವರ್ಷಗಳ ಅವಧಿಯಲ್ಲಿ ಕೇವಲ 4,000 ಮೆಗಾವಾಟ್ ಹೆಚ್ಚಳವಾಯಿತು. ಈ ಕಾರಣದಿಂದಾಗಿಯೇ ರಾಜ್ಯವು ಈಗ ವಿದ್ಯುತ್ ಕೊರತೆಯ ಸಮಸ್ಯೆ ಎದುರಿಸುತ್ತಿದೆ ಎಂದು ದೂರಿದರು.
‘ನಮ್ಮ ಸರ್ಕಾರವು ಪಾವಗಡದಲ್ಲಿ ಅತಿದೊಡ್ಡ ಸೌರವಿದ್ಯುತ್ ಪಾರ್ಕ್ ನಿರ್ಮಿಸಿತ್ತು. ನಂತರ ಆಡಳಿತ ನಡೆಸಿದವರು ಅದೇ ವೇಗ ಕಾಯ್ದುಕೊಂಡಿದ್ದರೆ ಈಗ ಸಮಸ್ಯೆ ಉದ್ಭವಿಸುತ್ತಿರಲಿಲ್ಲ’ ಎಂದರು.
ಸೌರವಿದ್ಯುತ್ ಬಳಕೆ ಹೆಚ್ಚಿಸಿ: ಸೌರವಿದ್ಯುತ್ ಉತ್ಪಾದನೆ, ಬಳಕೆಯಲ್ಲಿನ ಹೊಸ ತಂತ್ರಜ್ಞಾನಗಳನ್ನು ರೈತರು ಬಳಸಿಕೊಳ್ಳಬೇಕು. ಸೌರವಿದ್ಯುತ್ ಚಾಲಿತ ಪಂಪ್‌ಗಳ ಬಳಕೆಗೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಇಂಧನ ಸಚಿವ ಕೆ.ಜೆ. ಜಾರ್ಜ್, ‘ಪ್ರಧಾನಮಂತ್ರಿ ಕುಸುಮ್ ಯೋಜನೆಯಡಿ ಕೃಷಿ ನೀರಾವರಿಗೆ ಸೌರವಿದ್ಯುತ್ ಚಾಲಿತ ಪಂಪ್ ಅಳವಡಿಕೆಗೆ ವೆಂಡರ್‌ಗಳನ್ನು ಗುರುತಿಸಲಾಗಿದೆ. ಮೊಬೈಲ್ ಆ್ಯಪ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು’ ಎಂದರು.
ಪ್ರಾತ್ಯಕ್ಷಿಕೆ: ಸೌರವಿದ್ಯುತ್ ಚಾಲಿತ ಪಂಪ್‌ಗಳ ಪ್ರಾತ್ಯಕ್ಷಿಕೆಯನ್ನು ಆಯೋಜಿಸಲಾಗಿತ್ತು. 20ಕ್ಕೂ ಹೆಚ್ಚು ಕಂಪನಿಗಳು ಸೌರವಿದ್ಯುತ್ ಉತ್ಪಾದನಾ ಕಿರು ಘಟಕಗಳು, ಅವುಗಳಿಂದ ನೀರೆತ್ತುವ ಪಂಪ್‌ಗಳ ಕಾರ್ಯನಿರ್ವಹಣೆಯ ಪ್ರಾತ್ಯಕ್ಷಿಕೆ ಒದಗಿಸಿದ್ದವು. ಸಾವಿರಾರು ರೈತರು ಮಾಹಿತಿ ಪಡೆದರು.
ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ಡಿ. ರಾಜೇಗೌಡ ಮಾತನಾಡಿದರು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಕೆ. ಗೋವಿಂದರಾಜು, ನಸೀರ್ ಅಹಮದ್ , ವಿಧಾನ ಪರಿಷತ್ ಸದಸ್ಯ ಸುಧಾಮ್ ದಾಸ್, ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಸೇರಿದಂತೆ ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
‘ದುಡ್ಡು ನಮ್ಮದು; ಹೆಸರು ಪ್ರಧಾನಿಗೆ’
‘ಪ್ರಧಾನ ಮಂತ್ರಿ ಕುಸುಮ್ ಯೋಜನೆಯಲ್ಲಿ ರಾಜ್ಯ ಸರ್ಕಾರ ಶೇ 50ರಷ್ಟು ಅನುದಾನ ನೀಡಲಿದೆ. ಕೇಂದ್ರ ಸರ್ಕಾರದ್ದು ಶೇ 30ರಷ್ಟಾದರೆ ಶೇ 20 ಫಲಾನುಭವಿಗಳ ವಂತಿಗೆ. ಹಣ ರಾಜ್ಯ ಸರ್ಕಾರದ್ದು ಹೆಸರು ಪ್ರಧಾನಿಗೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.
ಮೂರು ಯೋಜನೆಗಳಿಗೆ ಚಾಲನೆ 40000 ಕೃಷಿ ನೀರಾವರಿ ಪಂಪ್‌ಗಳಿಗೆ ಸೌರವಿದ್ಯುತ್ ಸಂಪರ್ಕ ಕಲ್ಪಿಸುವುದು 248 ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ 806 ಫೀಡರ್‌ಗಳಿಗೆ ಸೌರವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆಗಳಿಗೆ ಚಾಲನೆ 24 ವಿದ್ಯುತ್ ಉಪ ಕೇಂದ್ರಗಳ ಉದ್ಘಾಟನೆಯನ್ನು ಮುಖ್ಯಮಂತ್ರಿ ನೆರವೇರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.