ಬೆಂಗಳೂರು: ‘ಯರಮರಸ್ ಉಷ್ಣ ವಿದ್ಯತ್ ಸ್ಥಾವರ ಮತ್ತು ರಾಯಚೂರು ಪವರ್ ಕಾರ್ಪೊರೇಷನ್ ಲಿಮಿಟೆಡ್ ವಿದ್ಯುತ್ ಯೋಜನೆಗಾಗಿ ಜಮೀನು ಬಿಟ್ಟುಕೊಟ್ಟಿರುವ ಭೂ-ನಷ್ಟದಾರರ ಉದ್ಯೋಗ ಅರ್ಜಿಗಳನ್ನು ಮೂರು ತಿಂಗಳ ಒಳಗಾಗಿ ಪರಿಶೀಲಿಸಿ’ ಎಂದು ಹೈಕೋರ್ಟ್ ಆದೇಶಿಸಿದೆ.
ಈ ಸಂಬಂಧ ರಾಯಚೂರು ಜಿಲ್ಲೆಯ ಚಿಕ್ಕಸೂಗೂರಿನ ಜಿ.ಗುರುರಾಜ್ ಪಾಟೀಲ್ ಮತ್ತು ಜಿ.ಸುರೇಶ್ ಪಾಟೀಲ್ ಸಲ್ಲಿಸಿದ್ದ ರಿಟ್ ಅರ್ಜಿಗಳನ್ನು ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಕಲಬುರ್ಗಿ ಪೀಠವು ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿದೆ.
ವಿದ್ಯುತ್ ಯೋಜನೆಗಾಗಿಭೂಮಿ ಕಳೆದುಕೊಂಡಿರುವ ಅರ್ಜಿದಾರರಿಗೆ ಉದ್ಯೋಗ ನೀಡುವ ಕುರಿತಂತೆ ಕಂಪನಿ ಸೂಕ್ತ ಆದೇಶ ಹೊರಡಿಸಲು ನ್ಯಾಯಪೀಠ, ಮೂರು ತಿಂಗಳ ಕಾಲಾವಕಾಶ ನೀಡಿದೆ.
ಪ್ರಕರಣವೇನು?: ರಾಯಚೂರಿನಲ್ಲಿ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಮತ್ತು ಯರಮರಸ್ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಗಾಗಿ ಇಂಧನ ಇಲಾಖೆ ಮತ್ತು ಕಂಪನಿಗಳು ರೈತರ ಜಮೀನು ಸ್ವಾಧೀನಪಡಿಸಿಕೊಂಡಿದ್ದವು. ನಂತರಕಂಪನಿ ರೂಪಿಸಿದ ಸ್ಕೀಂ ಅಡಿ ಯಲ್ಲಿ ಜಮೀನು ನೀಡಿದವರ ಕುಟುಂಬಗಳ ಸದಸ್ಯರಿಗೆ ಅವರ ಅರ್ಹತೆಯ ಆಧಾರದಲ್ಲಿ ಉದ್ಯೋಗ ನೀಡುವುದಾಗಿ ಪ್ರಕಟಿಸಲಾಗಿತ್ತು. ಇದರನ್ವಯ ಅರ್ಜಿದಾರರು2015 ಮತ್ತು 2016ರಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಈ ತನಕ ಅವುಗಳನ್ನು ಪರಿಗಣಿಸಿಲ್ಲ ಎಂದು ಆಕ್ಷೇಪಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಲೇವಾರಿ ಮಾಡಿರುವ ನ್ಯಾಯಪೀಠ, ‘ಕಾನೂನು ಪ್ರಕಾರ ಅರ್ಜಿದಾರರ ಮನವಿಯನ್ನು ಸೂಕ್ತ ರೀತಿಯಲ್ಲಿ ಪರಿಗಣಿಸುವಂತೆ ಆದೇಶಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.