ಬೆಂಗಳೂರು: ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ವಿದ್ಯುತ್ ದರ ಪರಿಷ್ಕರಣೆ ಆದೇಶವನ್ನು ಬುಧವಾರ ಪ್ರಕಟಿಸಿದ್ದು, ಎಲ್ಲ ವರ್ಗದ ಗ್ರಾಹಕರಿಗೆ ವಿದ್ಯುತ್ ಬಿಲ್‌ನ ಹೊರೆಯ ಭಾರ ತುಸು ಇಳಿಯಲಿದೆ.
ಗೃಹ ಬಳಕೆಯವರಿಗೆ ಇಂಧನ ಬಳಕೆ ಮೇಲಿನ ದರ ಕಡಿತಗೊಳಿಸಿದರೆ, ಕೈಗಾರಿಕೆ ಮತ್ತು ವಾಣಿಜ್ಯೋದ್ಯಮ ಬಳಕೆದಾರ ವರ್ಗದವರಿಗೆ ನಿಗದಿತ ಶುಲ್ಕದಲ್ಲೂ ಇಳಿಕೆ ಮಾಡಿದೆ.
ಆಯೋಗದ ಈ ಕ್ರಮದಿಂದ ಕೈಗಾರಿಕೆ ಮತ್ತು ವಾಣಿಜ್ಯೋದ್ಯಮಗಳ ಮೇಲಿನ ವಿದ್ಯುತ್ ಹೊರೆ ಅಲ್ಪಪ್ರಮಾಣದಲ್ಲಿ ಕಡಿಮೆಯಾಗಲಿದೆ. ಏಪ್ರಿಲ್ 1 ರಿಂದ ಹೊಸ ದರಗಳು ಜಾರಿಗೆ ಬರಲಿವೆ.
ಯಾರಿಗೆ, ಎಷ್ಟು ಇಳಿಕೆ ?
ಗೃಹ ಬಳಕೆಯಲ್ಲಿ 100 ಯೂನಿಟ್‌ಗಳಿಗಿಂತ ಹೆಚ್ಚು ವಿದ್ಯುತ್ ಬಳಸುವ ಗ್ರಾಹಕರಿಗೆ ಪ್ರತಿ ಯೂನಿಟ್ ಮೇಲೆ ₹1.10 ಇಳಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಯೂನಿಟ್ ದರ ₹7 ಇದೆ. ಸರ್ಕಾರ 200 ಯೂನಿಟ್ ಒಳಗೆ ಬಳಸುವವರಿಗೆ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ನೀಡುವುದರಿಂದ ಈ ಸೌಲಭ್ಯಕ್ಕೆ ಒಳಪಟ್ಟವರಿಗೆ ದರ ಇಳಿಕೆಯ ಪ್ರಯೋಜನ ಸಿಗುವುದಿಲ್ಲ. ಈ ಯೋಜನೆಯ ಸೌಲಭ್ಯ ಪಡೆಯದವರು ಹಾಗೂ ತಿಂಗಳಿಗೆ 100 ಯೂನಿಟ್‌ಗಿಂತ ಹೆಚ್ಚು ವಿದ್ಯುತ್ ಬಳಸುವವರಿಗೆ ಇದರ ಲಾಭ ಸಿಗಲಿದೆ.
ಎಚ್.ಟಿ ವಾಣಿಜ್ಯ ಬಳಕೆದಾರರಿಗೆ ಪ್ರತಿ ಯೂನಿಟ್‌ಗೆ ₹1.25 ಪೈಸೆ ಹಾಗೂ ನಿಗದಿತ ಶುಲ್ಕವನ್ನು ಪ್ರತಿ ಕೆವಿಎಗೆ (ಕಿಲೋವ್ಯಾಟ್) ₹10 ಇಳಿಕೆ ಮಾಡಿದೆ. ಎಚ್.ಟಿ. ವಿದ್ಯುತ್ ಬಳಸುವ ಕೈಗಾರಿಕೆಗಳಿಗೆ ಪ್ರತಿ ಯೂನಿಟ್‌ಗೆ 50 ಪೈಸೆ ಹಾಗೂ ನಿಗದಿತ ಶುಲ್ಕವನ್ನು ಪ್ರತಿ ಕೆವಿಎಗೆ ₹10 ಇಳಿಕೆ ಮಾಡಲಾಗಿದೆ.
ಕೈಗಾರಿಕೆಗಳಿಗೆ ಅನುಕೂಲ:
* ಎಲ್.ಟಿ. ವಿದ್ಯುತ್ ಬಳಸುವ ಕೈಗಾರಿಕಾ ಸ್ಥಾವರಗಳಿಗೆ ಪ್ರತಿ ಯೂನಿಟ್‌ಗೆ ₹1 ಕಡಿತಗೊಳಿಸಿದೆ. ರಾಜ್ಯದಲ್ಲಿ 5.62 ಲಕ್ಷ ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳಿವೆ. 150 ಕೆವಿಎ ಒಳಗೆ ಬರುವ ಎಲ್ಲ ಕೈಗಾರಿಕೆಗಳಿಗೆ ಇದರ ಲಾಭ ಸಿಗುತ್ತದೆ. ಉತ್ಪಾದನಾ ವಲಯದಲ್ಲಿ ಹೆಚ್ಚಿನ ಉತ್ಪಾದನೆಗೆ ಇದು ಸಹಕಾರಿಯಾಗಲಿದೆ. ಎಲ್.ಟಿ. ವಾಣಿಜ್ಯ ಸ್ಥಾವರಗಳ ಬಳಕೆದಾರರಿಗೆ ಪ್ರತಿ ಯೂನಿಟ್‌ಗೆ 50 ಪೈಸೆ ಇಳಿಕೆ ಮಾಡಲಾಗಿದೆ.
* ಖಾಸಗಿ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಪ್ರತಿ ಯೂನಿಟ್‌ಗೆ 40 ಪೈಸೆ ಹಾಗೂ ನಿಗದಿತ ಶುಲ್ಕವನ್ನು ಪ್ರತಿ ಕೆವಿಎಗೆ ₹10 ಕಡಿತಗೊಳಿಸಿದೆ. ಎಚ್.ಟಿ ವಿದ್ಯುತ್ ಬಳಕೆಯ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ನಿಗದಿತ ಶುಲ್ಕ ಪ್ರತಿ ಕೆವಿಎಗೆ ₹10 ಇಳಿಕೆ ಮಾಡಿದೆ.
* ಖಾಸಗಿ ಏತ ನೀರಾವರಿ ಬಳಕೆದಾರರಿಗೆ ಪ್ರತಿ ಯೂನಿಟ್‌ಗೆ ₹2 ಇಳಿಕೆ ಮಾಡಿದೆ. ಎಚ್.ಟಿ. ವಿದ್ಯುತ್ ಬಳಕೆಯ ಕೈಗಾರಿಕೆಗಳಿಗೆ ಪ್ರತಿ ಯೂನಿಟ್‌ಗೆ ₹1 ಹಾಗೂ ಎಲ್.ಟಿ. ವಾಣಿಜ್ಯೋದ್ಯಮ ಬಳಕೆದಾರರಿಗೆ ಪ್ರತಿ ಯೂನಿಟ್‌ಗೆ 50 ಪೈಸೆ ಇಳಿಕೆ ಮಾಡಿದೆ.
ಎಸ್ಕಾಂಗಳು ವಾರ್ಷಿಕ ಕಂದಾಯ ಅಗತ್ಯತೆಗಾಗಿ ದರ ಪರಿಷ್ಕರಣೆಯ ಅರ್ಜಿಯಲ್ಲಿ ₹69,474.75 ಕೋಟಿಗಳಿಗೆ ಅನುಮೋದನೆ ನೀಡುವಂತೆ (ಶೇ7.53ರಷ್ಟು ದರ ಹೆಚ್ಚಳಕ್ಕೆ) ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು. ಆಯೋಗವು ಅರ್ಜಿಗಳ ಪರಿಶೀಲನೆ ನಂತರ, ₹64,944.54 ಕೋಟಿಗೆ ಅನುಮೋದನೆ ನೀಡಿದೆ.
ಎಲ್ಲ ಎಸ್ಕಾಂಗಳೂ ₹4863.85 ಕೋಟಿ ಕೊರತೆ ತುಂಬಲು ಪ್ರತಿ ಯೂನಿಟ್‌ಗೆ ₹ 49 ರಿಂದ ₹163 ಪೈಸೆ ವರೆಗೆ ದರ ಏರಿಕೆಗಾಗಿ ಮನವಿ ಸಲ್ಲಿಸಿದ್ದವು. ಕಂಪನಿಗಳ ಮನವಿಯನ್ನು ಆಯೋಗ ಮಾನ್ಯ ಮಾಡಿಲ್ಲ. ಆಯೋಗದ ಆದೇಶದಂತೆ 2024-25 ರಲ್ಲಿ ₹565.39 ಕೋಟಿ ಹೆಚ್ಚುವರಿ ಆದಾಯ ಸಂಗ್ರಹವಾಗಲಿದೆ.
ಎಲ್ಲರಿಗೂ ಒಂದೇ ಸ್ಲ್ಯಾಬ್ ದರ
ಹಿಂದೆ 100 ಯೂನಿಟ್ ಒಳಗೆ ಬಳಸುವ ಪ್ರತಿ ಯೂನಿಟ್‌ಗೆ
₹ 4.50, ನಂತರದ ಪ್ರತಿ ಯೂನಿಟ್‌ಗೆ ₹7 ದರ ಇತ್ತು. ಈಗ ಎರಡು ಹಂತವನ್ನು ತೆಗೆದು ಒಂದೇ ಸ್ಲ್ಯಾಬ್ ಮಾಡಿ, ಪ್ರತಿ ಯೂನಿಟ್‌ಗೆ ₹5.90 ನಿಗದಿಪಡಿಸಲಾಗಿದೆ. ಇಂಧನ ಬಳಕೆ ಶುಲ್ಕಗಳಿಗೆ ಒಂದೇ ಸ್ಲ್ಯಾಬ್(ಹಂತ) ಪರಿಚಯಿಸಿರುವುದರಿಂದ ಈಗ ಎಲ್‌ಟಿ ಬಳಕೆದಾರರು ಒಂದಕ್ಕಿಂತ ಹೆಚ್ಚು ಮೀಟರ್ ಪಡೆಯಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.