ಬೆಂಗಳೂರು: ಸರ್ಕಾರದ ಬೊಕ್ಕಸದ ಮೇಲಿನ ಹೊರೆಯನ್ನು ತಗ್ಗಿಸಲು ಕೈಗೆತ್ತಿಕೊಂಡಿರುವ ಸರ್ಕಾರಿ– ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಕೈಗೆತ್ತಿಕೊಂಡಿದ್ದ ಬಹುತೇಕ ಕಾಮಗಾರಿಗಳು ಕುಂಟುತ್ತಾ ಸಾಗಿವೆ. ಸ್ಥಳೀಯ ಜನಪ್ರತಿನಿಧಿಗಳು ಲಂಚಕ್ಕಾಗಿ ಅಡಿಗಡಿಗೂ ಅಡ್ಡಿಪಡಿಸುತ್ತಿರುವುದೇ ಪಿಪಿಪಿ ಕಾಮಗಾರಿಗಳ ವಿಳಂಬಕ್ಕೆ ಕಾರಣ ಎಂಬುದು ಗುತ್ತಿಗೆದಾರರ ದೂರು.
ನಗರ ಸ್ಥಳೀಯ ಸಂಸ್ಥೆಗಳು ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳ ಅಡಿಯಲ್ಲಿ ಪಿಪಿಪಿ ಮಾದರಿಯ ಕಾಮಗಾರಿಗಳಿಗೆ ಆದ್ಯತೆ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ನಿರ್ದೇಶನ ನೀಡಿದ್ದರು. ಬಳಿಕ ರಾಜ್ಯದ ಹಲವು ಮಹಾನಗರ ಪಾಲಿಕೆಗಳು, ನಗರ ಸಭೆಗಳು ಮತ್ತು ಸ್ಮಾರ್ಟ್ ಸಿಟಿಗಳಲ್ಲಿ ಪಿಪಿಪಿ ಮಾದರಿಯಲ್ಲಿ ಸಹಸ್ರಾರು ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಬಿಬಿಎಂಪಿ ವ್ಯಾಪ್ತಿಯೂ ಸೇರಿದಂತೆ ರಾಜ್ಯದ ಹಲವು ಮಹಾನಗರ ಪಾಲಿಕೆಗಳಲ್ಲಿ ಪಿಪಿಪಿ ಕಾಮಗಾರಿಗಳನ್ನೇ ಆದ್ಯತೆಯ ಮೇಲೆ ಆರಂಭಿಸಲಾಗಿತ್ತು. ರಸ್ತೆ ನಿರ್ಮಾಣ, ಒಳಚರಂಡಿ ವ್ಯವಸ್ಥೆ, ಕುಡಿಯುವ ನೀರು ಪೂರೈಕೆ, ಬೀದಿ ದೀಪಗಳ ಅಳವಡಿಕೆ, ಸಂಚಾರ ವ್ಯವಸ್ಥೆಯ ಸುಧಾರಣೆಯ ಕಾಮಗಾರಿಗಳನ್ನು ಬಹುತೇಕ ಎಲ್ಲ ನಗರಗಳಲ್ಲೂ ಖಾಸಗಿ ಸಹಭಾಗಿತ್ವದಲ್ಲೇ ಆರಂಭಿಸಲಾಗಿದೆ. ಕೆಲವು ಕಾಮಗಾರಿಗಳು ದೀರ್ಘ ಅವಧಿಯ ಬಳಿಕವೂ ಮುಂದಡಿ ಇಟ್ಟಿಲ್ಲ. ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ಕಿರುಕುಳವೇ ಈ ಸ್ಥಿತಿಗೆ ಕಾರಣ ಎಂಬುದು ಗುತ್ತಿಗೆದಾರರ ಅಳಲು.
‘ಪಿಪಿಪಿ ಕಾಮಗಾರಿಗಳಲ್ಲಿ ಸರ್ಕಾರ ಅನುದಾನ ನೀಡುವುದಿಲ್ಲ. ನಾವೇ ಪೂರ್ಣ ಹೂಡಿಕೆ ಮಾಡಬೇಕು. ಕಾನೂನು ಪ್ರಕಾರ ಟೆಂಡರ್‌ನಲ್ಲಿ ಗುತ್ತಿಗೆ ಪಡೆದು, ಬಂಡವಾಳ ತಂದು ವಿನಿಯೋಗಿಸಿದರೂ ಕೆಲಸ ಮಾಡಲು ಅವಕಾಶ ನೀಡುವುದಿಲ್ಲ. ಮಹಾನಗರ ಪಾಲಿಕೆಗಳ ಹಂತದಲ್ಲಿ ಚುನಾಯಿತ ಪ್ರತಿನಿಧಿಗಳು ತಮ್ಮ ‘ಪಾಲು’ ನೀಡಿದ ಬಳಿಕವೇ ಕೆಲಸ ಮಾಡುವಂತೆ ಬೆದರಿಸುತ್ತಾರೆ. ಹಣ ನೀಡದಿದ್ದರೆ ಅಧಿಕಾರಿಗಳ ಮೂಲಕ ಪರೋಕ್ಷವಾಗಿ ಕಿರುಕುಳ ನೀಡುತ್ತಾರೆ. ರಾಜ್ಯದ ಬಹುತೇಕ ಸ್ಮಾರ್ಟ್ ಸಿಟಿಗಳಲ್ಲಿ ಈ ದುರವಸ್ಥೆ ಇದೆ’ ಎಂದು ವಿವಿಧ ಸ್ಮಾರ್ಟ್ ಸಿಟಿಗಳಲ್ಲಿ ಕಾಮಗಾರಿಗಳ ಗುತ್ತಿಗೆ ಪಡೆದಿರುವ ಸಂಸ್ಥೆಯೊಂದರ ಪಾಲುದಾರರು ‘ಪ್ರಜಾವಾಣಿ’ಗೆ ತಿಳಿಸಿದರು.
ಪಿಪಿಪಿ ಮಾದರಿಯ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಂಡರೆ ಸರ್ಕಾರದ ಬೊಕ್ಕಸಕ್ಕೆ ಉಳಿತಾಯವಾಗುತ್ತದೆ. ಅದು ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇಬ್ಬರಿಗೂ ಇಷ್ಟವಿಲ್ಲ. ಹಳೆಯ ಮಾದರಿಯಲ್ಲೇ ಹಣ ಕೊಳ್ಳೆ ಹೊಡೆಯಬೇಕಾದರೆ ಪಿಪಿಪಿ ಮಾದರಿ ಕಾಮಗಾರಿಗಳನ್ನು ವಿಫಲಗೊಳಿಸಬೇಕು. ಅದಕ್ಕಾಗಿ ಗುತ್ತಿಗೆದಾರರಿಗೆ ನಿರಂತರ ಕಿರುಕುಳ ನೀಡುವ ಸಂಘಟಿತ ಪ್ರಯತ್ನ ಬಹುತೇಕ ಕಡೆಗಳಲ್ಲಿದೆ ಎಂದು ಗುತ್ತಿಗೆದಾರ ಉಮೇಶ್ ದೂರಿದರು.
ಸಮಾಲೋಚಕರ ನೇಮಕದಲ್ಲೂ ಅಕ್ರಮ
‘ಪಿಪಿಪಿ ಸೇರಿದಂತೆ ಸರ್ಕಾರಿ ಕಾಮಗಾರಿಗಳ ನಿರ್ವಹಣೆಗೆ ಸಮಾಲೋಚಕರನ್ನು ನೇಮಿಸಿಕೊಳ್ಳುವುದರಲ್ಲೂ ಅಕ್ರಮ ನಡೆಯುತ್ತಿದೆ. ಅರ್ಹತೆ ಇಲ್ಲದವರು, ಅಧಿಕಾರಿಗಳು ಮತ್ತು ರಾಜಕಾರಣಿಗಳ ಜತೆ ನಿಕಟ ನಂಟು ಹೊಂದಿದವರಿಗೆ ಆದ್ಯತೆ ನೀಡಲಾಗುತ್ತಿದೆ. ಅವರನ್ನೇ ಬಳಸಿಕೊಂಡು ಗುತ್ತಿಗೆದಾರರನ್ನು ಹಿಂಸಿಸುವ ವ್ಯವಸ್ಥೆಯೂ ಇದೆ’ ಎಂದು ಸಮಾಲೋಚಕರಾಗಿ ದೀರ್ಘ ಕಾಲ ಕೆಲಸ ಮಾಡಿದ ಅನುಭವವಿರುವ ಹಿರಿಯ ಎಂಜಿನಿಯರ್ ಒಬ್ಬರು ತಿಳಿಸಿದರು.
ಪ್ರಭಾವ ಬಳಸಿ ಸಮಾಲೋಚಕರಾದವರು ಕೆಲವರ ಅನುಕೂಲಕ್ಕೆ ತಕ್ಕಂತೆ ಯೋಜನೆಗಳನ್ನು ವಿನ್ಯಾಸಗೊಳಿಸುತ್ತಾರೆ. ಅಧಿಕಾರಿಗಳ ರಕ್ಷಣೆಗೆ ಪೂರಕವಾಗಿ ಕೆಲಸ ಮಾಡುತ್ತಾರೆ. ಗುಣಮಟ್ಟ ಪರೀಕ್ಷೆಯಲ್ಲೂ ಅಕ್ರಮ ನಡೆಸುತ್ತಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.