ADVERTISEMENT

ಕಳವು ತಡೆಗೆ ಗೋರಕ್ಷಣಾ ಸಮಿತಿ ರಚಿಸಿ: ಕರಾವಳಿ ಜಿಲ್ಲಾಧಿಕಾರಿಗಳಿಗೆ ಸಚಿವ ಚವ್ಹಾಣ್

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2022, 6:48 IST
Last Updated 4 ಫೆಬ್ರುವರಿ 2022, 6:48 IST
ಸಚಿವ ಪ್ರಭು ಬಿ.ಚವ್ಹಾಣ್
ಸಚಿವ ಪ್ರಭು ಬಿ.ಚವ್ಹಾಣ್   

ಮಂಗಳೂರು: ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹಲವು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಗೋವುಗಳ ಕಳವು ಪ್ರಕರಣಗಳು ಮುಂದಿನ ದಿನಗಳಲ್ಲಿ ಮರುಕಳಿಸದಂತೆ ಕೂಡಲೇ ಕ್ರಮ ಕೈಗೊಳ್ಳಬೇಕು. ಇದಕ್ಕೆ ಕಡಿವಾಣ ಹಾಕಲು ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಗೋ ರಕ್ಷಣಾ ಸಮಿತಿ ರಚಿಸಬೇಕು ಎಂದು ಪಶು ಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ಅವರು ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದಾರೆ.

ಕರಾವಳಿ ಭಾಗದಲ್ಲಿ ನಿರಂತರವಾಗಿ ಗೋವುಗಳು ಕಳವು ಆಗುತ್ತಿರುವ ಕುರಿತು ಮಾಧ್ಯಮಗಳಲ್ಲಿ ಪ್ರಕಟಗೊಂಡ ವರದಿಯನ್ನು ಸೂಕ್ಷ್ಮವಾಗಿ ಗಮಿನಿಸಿದ್ದೇನೆ. ಈ ಬಗ್ಗೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಗೋ ರಕ್ಷಣಾ ಸಮಿತಿ ರಚಿಸಬೇಕು. ಗೋವುಗಳನ್ನು ಅಕ್ರಮವಾಗಿ ಸಾಗಿಸುವ ವಾಹನಗಳ ಮೇಲೆ ಹದ್ದಿನ ಕಣ್ಣಿಟ್ಟು, ಚಲನ-ವಲನ ಆಧರಿಸಿ, ಈ ಭಾಗದಲ್ಲಿ ರಾತ್ರಿ ಮತ್ತು ಹಗಲು ಪಾಳಿಗಳಲ್ಲಿ ಪೊಲೀಸರ ಬೀಟ್‌ಗಳನ್ನು ಹೆಚ್ಚಿಸಬೇಕು. ಚೆಕ್ ಪೋಸ್ಟ್ಗಳು, ನಾಕಾಬಂದಿಗಳನ್ನು ಪರಿಣಾಮಕಾರಿಯಾಗಿ ಬಲಗೊಳಿಸಬೇಕು. ಕಟ್ಟುನಿಟ್ಟಿನ ತಪಾಸಣೆ ಮಾಡುವ ಮೂಲಕ ಗೋಪಾಲಕರಲ್ಲಿ ಇರುವ ಭಯದ ವಾತಾವರಣವನ್ನು ನಿರ್ಮೂಲನೆ ಮಾಡಬೇಕು. ಸರ್ಕಾರ ನಿಮ್ಮೊಂದಿಗೆ ಸದಾ ಇರಲಿದೆ ಎನ್ನುವ ಸಂದೇಶ ಸಾರಬೇಕಿದೆ ಎಂದು ತಿಳಿಸಿದ್ದಾರೆ.

ಈ ಭಾಗದಲ್ಲಿ ಗೋವುಗಳನ್ನು ಮಾರಾಟ ಮಾಡುವ ಮಾಲೀಕರು ಹಾಗೂ ಕೊಳ್ಳುವವರ ನಡುವೆ ಇ-ಛಾಪಾ ಕಾಗದದಲ್ಲಿ ಮುಚ್ಚಳಿಕೆ ಪ್ರಕ್ರಿಯೆ ಕೈಗೊಂಡು, ಮುಚ್ಚಳಿಕೆ ಪ್ರಮಾಣಪತ್ರದಲ್ಲಿ ಸಮಯ, ಅದಕ್ಕೆ ಸಂಬಂಧಿಸಿದಂತೆ ಮೊಬೈಲ್‌ಗಳಲ್ಲಿರುವ ‘ಡೇಟ್ ಕ್ಯಾಮೆರಾ ಆ್ಯಪ್‌’ಗಳಲ್ಲಿ ಸಮಯ ಸಮೇತ ಭಾವಚಿತ್ರವನ್ನು ಸೆರೆ ಹಿಡಿದುಕೊಂಡು ಗೋವುಗಳನ್ನು ಸಾಗಿಸುವ ವಾಹನಗಳು ಪೊಲೀಸರ ತಪಾಸಣೆ ಸಮಯದಲ್ಲಿ ಹಾಜರುಪಡಿಸಬೇಕು. ಹಾಗೊಂದು ವೇಳೆ ಸಂಶಯ ಬಂದ ಪಕ್ಷದಲ್ಲಿ ಈ ಕುರಿತು ತಪಾಸಣೆ ನಡೆಸಿದ ನಂತರದಲ್ಲಿ ಖಚಿತತೆ ಆಧಾರದ ಮೇರೆಗೆ ವಾಹನಗಳನ್ನು ಬಿಟ್ಟುಕಳುಹಿಸುವ ಬಗ್ಗೆ ಕೂಡಲೇ ಠಾಣಾಧಿಕಾರಿಗಳು ಸ್ಥಳೀಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.

ADVERTISEMENT

ಗೋಹತ್ಯಾ ನಿಷೇಧ ಕಾಯ್ದೆ ಜಾರಿಗೆ ತಂದರೂ ಗೋವುಗಳ ಕಳವು ಪ್ರಕರಣಗಳು ಮತ್ತು ಅಕ್ರಮ ಗೋವುಗಳ ಸಾಗಾಣಿಕೆ ಮುಂದುವರಿದಿದೆ. ನಿರಂತರವಾಗಿ ಗೋವುಗಳನ್ನು ಕಳವು ಮಾಡುವವರ ವಿರುದ್ಧ ಗೂಂಡಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ಗಡೀಪಾರು ಮಾಡುವಂತಹ ಕಠಿಣ ಕ್ರಮಗಳನ್ನು ಕೈಗೊಳ್ಳುವುದರಿಂದ ಗೋವು ಕಳವು ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಮುಂದಿನ‌ ದಿನಗಳಲ್ಲಿ ಗೋವುಗಳ ಕಳವು ಪ್ರಕರಣಗಳು ಮರುಕಳಿಸದಂತೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮುಂಜಾಗ್ರತೆ ವಹಿಸಬೇಕು ಎಂದು ಅವರು ಸೂಚಿಸಿದ್ದಾರೆ.

ಗೋಪಾಲಕರ ಕುಟುಂಬಗಳನ್ನು ಕಳ್ಳರಿಂದ ರಕ್ಷಣೆ ಮಾಡಲು ವಿಫಲವಾದ ಪಕ್ಷದಲ್ಲಿ ಆ ಭಾಗದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಹೊಣೆಗಾರರನ್ನಾಗಿ ಮಾಡಲಾಗುವುದು. ನಿರ್ಲಕ್ಷ್ಯ ತೋರುವವರ ವಿರುದ್ಧ ಸರ್ಕಾರದ ಹಂತದಲ್ಲಿ ಕಠಿಣ ಕ್ರಮಕ್ಕೆ ಶಿಫಾರಸು ಮಾಡಲಾಗುವುದು. ಗೋವುಗಳ ಕಳವು ಪ್ರಕರಣಗಳನ್ನು ತಡೆಗಟ್ಟಲು ಸೂಕ್ತ ಕ್ರಮ ವಹಿಸುವಂತೆ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.