ಬೆಂಗಳೂರು: ಪಿಎಂ ಆವಾಸ್ ಯೋಜನೆಯಡಿ ನಗರಪ್ರದೇಶದ ಕೊಳೆಗೇರಿ ನಿವಾಸಿಗಳಿಗೆ 1,80,253 ಮನೆಗಳ ನಿರ್ಮಾಣ ಯೋಜನೆಗೆ ಫಲಾನುಭವಿಗಳ ವಂತಿಗೆಯಾಗಿ ₹6,170 ಕೋಟಿಯನ್ನು ಪಾವತಿಸಲು ಸರ್ಕಾರ ತೀರ್ಮಾನಿಸಿದೆ.
ಗುರುವಾರ ನಡೆದ ಸಚಿವ ಸಂಪುಟ ಸಭೆ ಬಳಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಸತಿ ಸಚಿವ ಬಿ.ಝೆಡ್. ಜಮೀರ್ ಅಹಮದ್ ಖಾನ್ ಅವರು, ಕೊಳೆಗೇರಿಯಲ್ಲಿ ವಾಸಿಸುವ ಬಡವರಿಗೆ ಮನೆ ನಿರ್ಮಿಸುವ ಕೊಡುವ ಯೋಜನೆ ದಶಕಗಳಿಂದ ಪೂರ್ಣಗೊಂಡಿರಲಿಲ್ಲ. ಫಲಾನುಭವಿಗಳ ಪಾಲಿನ ಹೆಚ್ಚಿನ ಮೊತ್ತವನ್ನು ಸರ್ಕಾರ ಭರಿಸುವ ಮೂಲಕ, ಬಡವರಿಗೆ ಮನೆ ನಿರ್ಮಿಸುವ ಯೋಜನೆಯನ್ನು ಪೂರ್ಣಗೊಳಿಸಲು ನಿರ್ಧರಿಸಲಾಗಿದೆ ಎಂದರು.
ಇದಕ್ಕೆ ಮೊದಲು ಫಲಾನುಭವಿಗಳು ₹4.50 ಲಕ್ಷ ನೀಡಬೇಕಿತ್ತು. ಈಗ ಕಂತಿನ ರೂಪದಲ್ಲಿ ₹1 ಲಕ್ಷ ಪಾವತಿಸಿದರೆ ಸಾಕು ಎಂದೂ ಅವರು ಹೇಳಿದರು.
ಈ ಯೋಜನೆಯಡಿ 1.80 ಲಕ್ಷ ಮನೆಗಳ ಪೈಕಿ 48,796 ಮನೆಗಳನ್ನು ಫೆಬ್ರುವರಿಯಲ್ಲಿ ಫಲಾನುಭವಿಗಳಿಗೆ ಹಸ್ತಾಂತರಿಸಲಾಗುವುದು. ಫಲಾನುಭವಿಗಳು ತಮ್ಮ ಪಾಲಿನ ವಂತಿಗೆ ನೀಡದ ಕಾರಣ ಮನೆಗಳ ನಿರ್ಮಾಣ ಕಾರ್ಯ ವಿವಿಧ ಹಂತಗಳಲ್ಲಿ ಸ್ಥಗಿತಗೊಂಡಿತ್ತು. ಸರ್ಕಾರ ಈಗ ಬೃಹತ್ ಮೊತ್ತ ನೀಡಲು ಒಪ್ಪಿರುವ ಕಾರಣ ಅರ್ಧಕ್ಕೆ ನಿಂತಿರುವ ಕಾಮಗಾರಿಗಳಿಗೆ ಮತ್ತೆ ಚಾಲನೆ ಸಿಗಲಿದೆ ಎಂದರು.
ಈ ಹಿಂದೆ, ಸಿದ್ದರಾಮಯ್ಯ ಸರ್ಕಾರ ಇದ್ದಾಗ 2014–15 ರಲ್ಲಿ ಯೋಜನೆ ಚಾಲನೆ ನೀಡಲಾಗಿತ್ತು. 2018ರ ಬಳಿಕ ಬಂದ ಸರ್ಕಾರಗಳು ಒಂದು ಮನೆಯನ್ನೂ ಪೂರ್ಣಗೊಳಿಸಿ ಹಂಚಿಕೆ ಮಾಡಲಿಲ್ಲ. ಈ ಯೋಜನೆಯಡಿ ಒಂದು ಮನೆಗೆ ₹7.50 ಲಕ್ಷ ಖರ್ಚಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ತಲಾ ₹1.50 ಲಕ್ಷ ನೀಡಬೇಕು. ಫಲಾನುಭವಿಗಳು ₹4.50 ಲಕ್ಷ ನೀಡಬೇಕಿತ್ತು. ಫಲಾನುಭವಿಗಳು ಹಣವನ್ನೇ ಪಾವತಿ ಮಾಡಲಿಲ್ಲ. ಇದರಿಂದ ಮನೆ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತು ಹೋಯಿತು ಎಂದು ಹೇಳಿದರು.
ಕೇಂದ್ರ ಸರ್ಕಾರ ಕೊಡುವ ಹಣ ಜಿಎಸ್‌ಟಿಗೆ ಹೋಗುತ್ತದೆ. ಈ ಬಗ್ಗೆ ಕೇಂದ್ರಕ್ಕೆ ಪತ್ರ ಬರೆಯಲಾಗುವುದು ಎಂದು ಜಮೀರ್ ತಿಳಿಸಿದರು.
*ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರ ಮತ್ತು ಪ್ರಾಂಶುಪಾಲರ ವೃಂದಕ್ಕೆ ಸಂಬಂಧಿಸಿದಂತೆ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡಲು ಒಪ್ಪಿಗೆ. ಇದರ ಅನ್ವಯ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕೆಪಿಎಸ್‌ಸಿ ಅಥವಾ ಕೆಇಎ ಎಂಬುದರ ಬದಲಿಗೆ ಕೆಪಿಎಸ್‌ಸಿ ಅಥವಾ ಸರ್ಕಾರದಿಂದ ವಹಿಸಬಹುದಾದ ಬೇರೆ ಯಾವುದಾದರೂ ಸಂಸ್ಥೆ ಮೂಲಕ ನೇಮಕ ಮಾಡಲು ಈ ತಿದ್ದುಪಡಿ ತರಲಾಗಿದೆ.
*ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ನಿರಂತರವಾಗಿ ರೋಗ ಪತ್ತೆ ಸೇವೆ ಒದಗಿಸಲು ಲಭ್ಯವಿರುವ ಪ್ರಯೋಗಾಲಯ ಉಪಕರಣಗಳಿಗೆ ರಾಸಾಯನಿಕಗಳು ಮತ್ತು ಕಂಪ್ಯೂಟರ್ ರೇಡಿಯಾಗ್ರಫಿ ಸಿಸ್ಟಮ್‌ಗಳಿಗೆ ಡ್ರೈಲೇಸರ್ ಎಕ್ಸ್‌ರೇ ಫಿಲಂ ಮತ್ತು ಪರಿಕರಗಳನ್ನು ಒದಗಿಸಲು ₹50.15 ಕೋಟಿ
*ರಾಜ್ಯದ 8 ಜಿಲ್ಲೆಗಳಲ್ಲಿ ವಾಸಿಸುತ್ತಿರುವ 11 ಬುಡಕಟ್ಟು ಪಂಗಡಗಳಾದ ಕೊರಗ, ಜೇನುಕುರುಬ, ಸೋಲಿಗ, ಎರವ, ಕಾಡುಕುರುಬ, ಮಲೆಕುಡಿಯ, ಸಿದ್ದಿ, ಹಸಲರು, ಗೌಡಲು, ಗೊಂಡ ಮತ್ತು ಬೆಟ್ಟ ಕುರುಬ ಜನಾಂಗದ ಕುಟುಂಬಗಳಿಗೆ ವರ್ಷವಿಡೀ ಪೌಷ್ಟಿಕ ಆಹಾರ ಸರಬರಾಜು ಮಾಡುವ ಯೋಜನೆ ಜಾರಿಗೆ ₹120 ಕೋಟಿ ನೀಡಲು ಒಪ್ಪಿಗೆ
*ಕೆಎಸ್‌ಆರ್‌ಟಿಸಿಯಿಂದ 300 ವಿದ್ಯುತ್‌ಚಾಲಿತ ಬಸ್ಸುಗಳು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ 450 ಎಲೆಕ್ಟ್ರಿಕ್ ಬಸ್ ಕಾರ್ಯಾಚರಣೆಗೊಳಿಸಲು ಒಪ್ಪಿಗೆ.
*ಎಡಿಬಿ ನೆರವಿನಿಂದ ಮಂಗಳೂರು ನಗರದಲ್ಲಿ ಜಾರಿ ಆಗುತ್ತಿರುವ 24x7 ನೀರು ಸರಬರಾಜು ಯೋಜನೆಗೆ 125 ಎಂಎಲ್‌ಡಿ ನೀರು ಶುದ್ಧೀಕರಣ ಘಟಕವನ್ನು ಸ್ಥಾಪಿಸಲು ₹127.70 ಕೋಟಿಗೆ ಅನುಮೋದನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.