ADVERTISEMENT

ಬಾಂಡ್‌ ಪೇಪರ್ ಬರೆದುಕೊಟ್ಟ ಪ್ರಜಾಕೀಯ ಅಭ್ಯರ್ಥಿಗಳು

ಕೆಲಸ ಮಾಡಲಾಗದಿದ್ದರೆ ಶಾಸಕ ಸ್ಥಾನ ತ್ಯೆಜಿಸುವ ಷರತ್ತು

​ಪ್ರಜಾವಾಣಿ ವಾರ್ತೆ
Published 1 ಮೇ 2023, 22:13 IST
Last Updated 1 ಮೇ 2023, 22:13 IST
ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳೊಂದಿಗೆ ಉಪೇಂದ್ರ –ಪ್ರಜಾವಾಣಿ ಚಿತ್ರ
ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳೊಂದಿಗೆ ಉಪೇಂದ್ರ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಉತ್ತಮ ಪ್ರಜಾಕೀಯ ಪಕ್ಷದಿಂದ 110 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಚುನಾಯಿತರಾದ ಬಳಿಕ ಜನರ ಕೆಲಸ ಮಾಡಲು ಸಾಧ್ಯವಾಗದಿದ್ದರೆ ಸ್ಥಾನ ತ್ಯಜಿಸುವುದಾಗಿ ಬಾಂಡ್‌ ಪೇಪರ್‌ನಲ್ಲಿ ಬರೆದುಕೊಟ್ಟಿದ್ದಾರೆ’ ಎಂದು ಪಕ್ಷದ ಸಂಸ್ಥಾಪಕ ಹಾಗೂ ನಟ ಉಪೇಂದ್ರ ತಿಳಿಸಿದರು.

ಪಕ್ಷದ ಎಲ್ಲ ಅಭ್ಯರ್ಥಿಗಳೊಂದಿಗೆ ಸುದ್ದಿಗೋಷ್ಠಿ ನಡೆಸಿದ ಅವರು, ‘ಅಭ್ಯರ್ಥಿಗಳನ್ನು ಹುಡುಕಿ ಟಿಕೆಟ್ ನೀಡುವ ಪದ್ಧತಿ ಪ್ರಜಾಕೀಯದಲ್ಲಿ ಇಲ್ಲ. 110 ಕ್ಷೇತ್ರಗಳಲ್ಲಿ ಪ್ರಜಾ ಕಾರ್ಮಿಕನಾಗಿ ಕೆಲಸ ಮಾಡಲು ಆಸಕ್ತಿ ಇದ್ದವರು ಮುಂದೆ ಬಂದಿದ್ದಾರೆ. ಇವರು ಸೂಕ್ತವೇ ಎಂಬುದನ್ನು ತೀರ್ಮಾನಿಸಲು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದೆವು. ಜನ ಯಾರ ಪರ ಹೆಚ್ಚು ಒಲವು ವ್ಯಕ್ತಪಡಿದರೋ ಅವರಿಗೆ ಟಿಕೆಟ್ ನೀಡಲಾಗಿದೆ’ ಎಂದರು.

‘ಚುನಾಯಿತರಾದವರು ಪ್ರಜಾ ಕಾರ್ಮಿಕರಾಗಿ ಕೆಲಸ ಮಾಡಬೇಕು. ಆ ಕ್ಷೇತ್ರದ ಜನರ ಆಶೋತ್ತರಗಳಿಗೆ ತಕ್ಕಂತೆ ಕೆಲಸ ಮಾಡಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಿ ವಾಪಸ್ ಹೋಗಬೇಕು. ಆರು ತಿಂಗಳಿಗೊಮ್ಮೆ ಜನರಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಅಲ್ಲಿ ಬರುವ ಅಭಿಪ್ರಾಯ ಆಧರಿಸಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಈ ಎಲ್ಲಾ ಷರತ್ತುಗಳನ್ನು ಒಳಗೊಂಡ ಬಾಂಡ್‌ ಪೇಪರ್‌ ಸಿದ್ಧಪಡಿಸಿಕೊಂಡು ತಂದಿದ್ದಾರೆ. ಇದನ್ನು ಇಟ್ಟುಕೊಂಡೇ ಜನರಿಗೆ ಮನವರಿಕೆ ಮಾಡಿಸುತ್ತಿದ್ದಾರೆ’ ಎಂದು ಹೇಳಿದರು.

ADVERTISEMENT

‘ಕೆಲಸ ಮಾಡಲು ಸಾಧ್ಯವಾಗದಿದ್ದರೆ ಆರು ತಿಂಗಳಲ್ಲಿ ಶಾಸಕ ಸ್ಥಾನ ತ್ಯಜಿಸಬೇಕು ಎಂಬ ಅಂಶವನ್ನು ಸಂವಿಧಾನದಲ್ಲಿ ಸೇರ್ಪಡೆ ಮಾಡುವ ಅಗತ್ಯವಿದೆ’ ಎಂದು ಅವರು ಪ್ರತಿಪಾದಿಸಿದರು.

‘ಯಾವ ಅಭ್ಯರ್ಥಿ ಪರವೂ ನಾನು ಪ್ರಚಾರಕ್ಕೆ ಹೋಗುವುದಿಲ್ಲ. ಯಾವುದೇ ಚಿತ್ರನಟರನ್ನೂ ಪ್ರಚಾರಕ್ಕೆ ಕರೆಯುವುದಿಲ್ಲ. ಏಕೆಂದರೆ ಜನರೇ ನಿಜವಾದ ಸ್ಟಾರ್‌ಗಳು. ಅವರ ಪರ ಕೆಲಸ ಮಾಡುವ ವ್ಯಕ್ತಿಯನ್ನು ಅವರೇ ಆಯ್ಕೆ ಮಾಡಿಕೊಳ್ಳಬೇಕು. ಪ್ರಜಾಕೀಯದ ಅಭ್ಯರ್ಥಿ ಸೂಕ್ತ ಎನಿಸಿದರೆ ಅವರೇ ಮತ ಹಾಕುತ್ತಾರೆ’ ಎಂದರು.

’ಯಾವ ಅಭ್ಯರ್ಥಿಯೂ ಇಷ್ಟವಿಲ್ಲ ಎಂದು ನೋಟಾಗೆ ಮತ ಹಾಕುವುದರಿಂದ ಯಾವ ಪ್ರಯೋಜನವೂ ಇಲ್ಲ. ಆದ್ದರಿಂದ ನೋಟಾಗೆ ಮತ ಹಾಕಬಾರದು’ ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.