ಬೆಂಗಳೂರು:ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರು ಅಭೂತಪೂರ್ವ ಜಯ ಸಾಧಿಸಿದ್ದಾರೆ.
ಆಡಳಿತಾರೂಢ ರಾಜ್ಯ ಮೈತ್ರಿ ಸರ್ಕಾರದ ಜೆಡಿಎಸ್ ಅಭ್ಯರ್ಥಿ ಹಾಗೂ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್.ಕೆ ಹೀನಾಯ ಸೋಲು ಕಂಡಿದ್ದಾರೆ. ಈ ಸೋಲಿಗೆ ಗೌಡರ ಕುಟುಂಬ ರಾಜಕಾರಣ, ನಿಖಲ್ ಅವರ ದೊಡ್ಡಪ್ಪ ಎಚ್.ಡಿ.ರೇವಣ್ಣ ನೀಡಿದ್ದ ಹೇಳಿಕೆಯೇ ಮುಳುವಾಯ್ತಾ ಎಂಬ ಪ್ರಶ್ನೆ ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ನಾಮಪತ್ರ ಸಲ್ಲಿಕೆ ದಿನದಿಂದ ಕೊನೆಯ ವರೆಗೆ ಸುಮಲತಾ ವಿರುದ್ಧ ಇಲ್ಲ ಸಲ್ಲದ ಆರೋಪಗಳು, ವೈಯಕ್ತಿಕ ಟೀಕೆಗಳು ಕೇಳಿಬಂದವು. ಅದರಲ್ಲಿ ಪ್ರಮುಖವಾಗಿ ಮೈತ್ತಿ ಸರ್ಕಾರದ ಸಚಿವ ಎಚ್.ಡಿ.ರೇವಣ್ಣ ಅವರು ದೆಹಲಿಯಲ್ಲಿ ಸುಮಲತಾ ಅವರ ಕುರಿತು, ‘ಗಂಡ ಸತ್ತು ಒಂದೆರಡು ತಿಂಗಳಾಗಿಲ್ಲ. ಸುಮಲತಾ ಅವರಿಗೆ ರಾಜಕೀಯ ಯಾಕೆ ಬೇಕಿತ್ತು’ ಎಂದು ಅವರು ಪ್ರಶ್ನಿಸಿದರು. ಇದು ರಾಜಕೀಯ ವಲಯದಲ್ಲಿ ತೀವ್ರ ಟೀಕೆ, ಚರ್ಚೆಯೂ ಆಗಿತ್ತು. ರಾಜ್ಯದಾದ್ಯಂತ ಮಹಿಳೆಯರೂ ರೇವಣ್ಣ ಅವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು.
ವೈಯಕ್ತಿಕ ನಿಂದನೆಗಳನ್ನೂ ಸಹಿಸಿಕೊಂಡು ಸಮಾಧಾನದಿಂದಲೇ ಮತದಾರರ ಬಳಿಗೆ ತೆರಳಿದ್ದ ಸುಮಲತಾ ಅವರು, ತಾನು ಯಾರು ಎಂದು ಪರಿಚಯಿಸಿಕೊಳ್ಳುತ್ತಾ ಮಂಡ್ಯದ ಸೊಸೆ, ನಿಮ್ಮ ಮನೆ ಮಗಳು, ನನಗೆ ಮತ ಭಿಕ್ಷೆ ಕೊಡಿ ಎಂದು ಸೆರಗೊಡ್ಡಿ ಬೇಡಿದ್ದರು. ಪ್ರಚಾರಕ್ಕೆ ತೆರಳಿದ್ದ ವೇಳೆಯೂ ಜನ ಅವರ ಮಡಿಲಿಗೆ ತಮ್ಮ ಕೈಲಾದ ಹಣಕಾಸು ನೀಡಿ ಇದು ನಮ್ಮ ಕೊಡುಗೆ. ಚುನಾವಣೆಗೆ ಬಳಸಿ ಎಂದು ಮನವಿಯನ್ನೂ ಮಾಡಿದ್ದರು.
ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿರುವ ನಟಿ ಸುಮಲತಾ ವಿರುದ್ಧ ರೇವಣ್ಣ ಹರಿಹಾಯ್ದಿದ್ದರು.
‘ಅಂಬರೀಷ್ ಅವರು ತೀರಿಕೊಂಡಾಗ ಮನೆಯವರೇ ತೀರಿಕೊಂಡಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಂಬನಿ ಮಿಡಿದಿದ್ದರು. ಆದರೆ, ಚುನಾವಣೆ ಸ್ಪರ್ಧೆ ಬಗ್ಗೆ ಸುಮಲತಾ ಅವರು ಸವಾಲು ಹಾಕುವುದರೊಂದಿಗೆ ಜೆಡಿಎಸ್ ಅನ್ನು ಕೆಣಕಿದ್ದಾರೆ’ ಎಂದು ದೂರಿದ್ದರು.
‘ಅವರ ಸವಾಲನ್ನು ಸ್ವೀಕರಿಸುವುದು ನಮಗೂ ಅನಿವಾರ್ಯ ಆಗಿದೆ ಎಂದಿದ್ದ ರೇವಣ್ಣ, ಮೊದಲು ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ಆಲೋಚನೆ ಇರಲಿಲ್ಲ. ಕೃತಜ್ಞತೆ ಇರದ ಸುಮಲತಾ ಅವರ ಸವಾಲನ್ನು ಸ್ವೀಕರಿಸಿ ಸ್ಪರ್ಧೆಯ ವಿಚಾರ ಮಾಡಿದ್ದೇವೆ’ ಎಂದು ಅವರು ತಿಳಿಸಿದ್ದರು.
ಜೋಡೆತ್ತು; ಕಳ್ಳೆತ್ತು
ಸುಮಲತಾ ಪರ ಪ್ರಚಾರಕ್ಕೆ ಬಂದಿದ್ದ ನಟ ದರ್ಶನ್ ಮತ್ತು ಯಶ್ ಅವರ ಬಗ್ಗೆ ಟೀಕೆ ಮಾಡಿದ್ದ ಕುಮಾರಸ್ವಾಮಿ, ‘ಅವು ‘ಜೋಡೆತ್ತು’ ಅಲ್ಲ ‘ಕಳ್ಳೆತ್ತು’ಗಳು’ ಎಂದಿದ್ದರು. ಈ ಎಲ್ಲಾ ಟೀಕೆಗಳಿಗೆ ಇಬ್ಬರು ನಟರು ತಾಳ್ಮೆ ಕಳೆದುಕೊಳ್ಳದೆ ಪ್ರಚಾರ ನಡೆಸಿದ್ದರು.
ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಹಾಗೂ ದೊಡ್ಡಣ್ಣ ಸುಮಲತಾ ಅವರ ಬೆಂಬಲಕ್ಕೆ ನಿಂತರು.
ಪ್ರಚಾರ ವೇಳೆ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಪಕ್ಷಗಳ ಧ್ವಜ ಹಿಡಿದು ಬಹಿರಂಗವಾಗಿಯೇ ಸುಮಲತಾ ಪರ ಪ್ರಚಾರ ನಡೆಸಿ ಅವರ ಪರವಾಗಿ ನಿಂತರು.
ಮುಖಂಡರನ್ನು ವಿಶ್ವಾಸಕ್ಕೆ ಪಡೆಯದ ಜೆಡಿಎಸ್
ಸ್ಥಳೀಯವಾಗಿ ಮುಖಂಡರನ್ನು ವಿಶ್ವಾಸಕ್ಕೆ ಪಡೆಯುವಲ್ಲಿ ಜೆಡಿಎಸ್ ಮುಗ್ಗರಿಸಿದೆ. ಮಂಡ್ಯ ಜಿಲ್ಲೆಯಲ್ಲಿ ನಮಗೆ ಮೂಲ ಕಾಂಗ್ರೆಸ್ಸಿಗರೇ ಸಾಕು. ವಲಸೆ ಬಂದವರ ಅಗತ್ಯವಿಲ್ಲ’ ಎಂದು ಸಿಎಂ ಹೇಳಿದ್ದರು. ಇದೂ ಮತ್ತೊಂದು ಕಡೆ ಒಳಗೊಳಗೇ ಏಟು ನೀಡಿದೆ.
ಈ ಎಲ್ಲಾ ಟೀಕೆ, ನಿಂದನೆಗಳ ನಡುವೆಯೂ ಮಂಡ್ಯದಲ್ಲಿ ’ಸ್ವಾಭಿಮಾನದ ಗೆಲುವು’ ಪಡೆಯುವಲ್ಲಿ ಸುಮಲತಾ ಯಶಸ್ವಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.