ADVERTISEMENT

ಹುಬ್ಬಳ್ಳಿಯಲ್ಲಿ ಎಡ್ಯುವರ್ಸ್ ಮೇಳ: ಕೋರ್ಸ್‌ಗಳ ಆಯ್ಕೆಗೆ ಸಿಕ್ಕಿತು ಮಾರ್ಗದರ್ಶನ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2024, 0:30 IST
Last Updated 14 ಏಪ್ರಿಲ್ 2024, 0:30 IST
ಹುಬ್ಬಳ್ಳಿಯಲ್ಲಿ ಶನಿವಾರ ‘ಎಡ್ಯುವರ್ಸ್’ ಶೈಕ್ಷಣಿಕ ಮೇಳದಲ್ಲಿ ವಿದ್ಯಾರ್ಥಿಗಳು ಮಳಿಗೆಗಳಲ್ಲಿ ಅಗತ್ಯ ಮಾಹಿತಿ ಪಡೆದರು
ಹುಬ್ಬಳ್ಳಿಯಲ್ಲಿ ಶನಿವಾರ ‘ಎಡ್ಯುವರ್ಸ್’ ಶೈಕ್ಷಣಿಕ ಮೇಳದಲ್ಲಿ ವಿದ್ಯಾರ್ಥಿಗಳು ಮಳಿಗೆಗಳಲ್ಲಿ ಅಗತ್ಯ ಮಾಹಿತಿ ಪಡೆದರು   

ಹುಬ್ಬಳ್ಳಿ: ಇಲ್ಲಿನ ಹೊಸೂರು ಸಮೀಪದ ರಾಯ್ಕರ್ ಮೈದಾನದಲ್ಲಿ ಶನಿವಾರ ಆರಂಭಗೊಂಡ 14ನೇ ‘ಎಡ್ಯುವರ್ಸ್’ ಶೈಕ್ಷಣಿಕ ಮೇಳದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳು, ಕೋರ್ಸ್‌ಗಳ ಕುರಿತು ಉತ್ತಮ ಮಾಹಿತಿ ಸಿಕ್ಕಿತು. ಹಲವಾರು ವಿದ್ಯಾರ್ಥಿಗಳು, ಪೋಷಕರು ವಿವಿಧ ವಿಷಯಗಳ ಬಗ್ಗೆ ತಜ್ಞರು, ಉಪನ್ಯಾಸಕರೊಂದಿಗೆ ಚರ್ಚಿಸಿದರು.

ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ವತಿಯಿಂದ ಆಯೋಜಿಸಲಾದ ಈ ಶೈಕ್ಷಣಿಕ ಮೇಳದಲ್ಲಿ ರಾಜ್ಯದ ವಿವಿಧೆಡೆಯಿಂದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಪಾಲ್ಗೊಂಡಿವೆ. ವಿದ್ಯಾರ್ಥಿಗಳಿಗೆ ಮತ್ತು ಅವರ ಪೋಷಕರಿಗೆ ಅಗತ್ಯ ಸಲಹೆ, ಸೂಚನೆ ಮತ್ತು ಮಾರ್ಗದರ್ಶನ ನೀಡಬಲ್ಲ 50ಕ್ಕೂ ಹೆಚ್ಚು ಮಳಿಗೆಗಳು ಇವೆ.

ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ನಡೆದ ಮೇಳಕ್ಕೆ ಬೇರೆ ಬೇರೆ ಜಿಲ್ಲೆಗಳಿಂದ ಬಂದ ವಿದ್ಯಾರ್ಥಿಗಳಿಗೆ ಮಳಿಗೆಗಳಿಗೆ ಭೇಟಿ ನೀಡಿ, ಆಯಾ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳಿಂದ ಅಗತ್ಯ ಮಾಹಿತಿ ಪಡೆದರು. ಮಳಿಗೆಗಳ ಸಿಕ್ಕ ಮಾಹಿತಿ ಕರಪತ್ರಗಳನ್ನು ಸಂಗ್ರಹಿಸಿ, ಕೋರ್ಸ್‌ಗಳು ಯಾವುದೆಲ್ಲ ಪ್ರಯೋಜನವಾಗಲಿದೆ ಎಂಬುದನ್ನು ಅರಿತರು.

ADVERTISEMENT

ಎಂಜಿನಿಯರಿಂಗ್‌, ವೈದ್ಯಕೀಯ, ಆರ್ಕಿಟೆಕ್ಟ್‌, ಪ್ರವಾಸೋದ್ಯಮ, ಎಂಬಿಎ, ಫ್ಯಾಷನ್‌ ಡಿಸೈನಿಂಗ್‌ ಸೇರಿದಂತೆ ದ್ವಿತೀಯ ಪಿಯುಸಿ ನಂತರ ಆಯ್ಕೆ ಮಾಡಿಕೊಳ್ಳಬಹುದಾದ ಕೋರ್ಸ್‌ಗಳ ಬಗ್ಗೆ ತಜ್ಞರು, ಪರಿಣತರು ಮಾಹಿತಿ ನೀಡಿದರು.

ಮೇಳವನ್ನು ಉದ್ಘಾಟಿಸಿದ ಬೆಳಗಾವಿಯ ಏಕಸ್ ಸಂಸ್ಥೆಯ ಮುಖ್ಯ ತಂತ್ರಜ್ಞಾನ ಅಧಿಕಾರಿ ರವಿ ಗುತ್ತಲ್ ಮಾತನಾಡಿ, ‘ಇಂತಿಂಥ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಹೇಳುವ ಮೊದಲು ಪೋಷಕರು ಮಕ್ಕಳೊಂದಿಗೆ ಚರ್ಚಿಸಬೇಕು. ಅವರ ಪ್ರತಿಭೆ, ಆಸಕ್ತಿ ತಕ್ಕಂತೆ ಕೋರ್ಸ್‌ ಆಯ್ಕೆಗೆ ಹೇಳಬೇಕೆ ಹೊರತು ಒತ್ತಡ ಹೇರಬಾರದು’ ಎಂದರು.

ಕಾಮೆಡ್‌–ಕೆ ಕುರಿತು ವಿಶೇಷ ಉಪನ್ಯಾಸ ನೀಡಿದ ಧಾರವಾಡದ ಧರ್ಮಸ್ಥಳ ಮಂಜುನಾಥೇಶ್ವರ ಎಂಜಿನಿಯರಿಂಗ್‌ ಕಾಲೇಜಿನ ಎಡ್ಮಿಷನ್‌ ವಿಭಾಗದ ಪ್ರೊ. ಶ್ರವಣ ನಾಯಕ ಮಾತನಾಡಿ, ‘ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದರೆ ಸಾಲದು. ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಸಿಇಟಿಯಲ್ಲೂ ಉತ್ತಮ ಅಂಕ ಪಡೆಯಬೇಕು. ಕೋರ್ಸ್ ಮತ್ತು ಕಾಲೇಜುಗಳ ಆಯ್ಕೆ ಸಂದರ್ಭದಲ್ಲಿ ಸಾಕಷ್ಟು ಜಾಗ್ರತೆ ವಹಿಸಬೇಕು’ ಎಂದರು.

ಬಾಲನಟಿ ಶಾರ್ವರಿ ಮತ್ತು ವಿವಿಧ ಶಿಕ್ಷಣ ಸಂಸ್ಥೆಯ ಪ್ರತಿನಿಧಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಸಿಇಟಿ ಮತ್ತು ನೀಟ್‌ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಅಣಕು ಪರೀಕ್ಷೆ ನಡೆಯಿತು.

ಹುಬ್ಬಳ್ಳಿಯಲ್ಲಿ ಶನಿವಾರ ‘ಎಡ್ಯುವರ್ಸ್’ ಶೈಕ್ಷಣಿಕ ಮೇಳದಲ್ಲಿ ವಿದ್ಯಾರ್ಥಿಗಳು ಮಳಿಗೆಗಳಲ್ಲಿ ಅಗತ್ಯ ಮಾಹಿತಿ ಪಡೆದರು
ಎಡ್ಯುವರ್ಸ್ ಲೋಗೋ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.