ಬೆಂಗಳೂರು: 2024ನೇ ಸಾಲಿನ ಪ್ರತಿಷ್ಠಿತ ‘ಪ್ರಜಾವಾಣಿ ದೀಪಾವಳಿ ಕಥೆ ಮತ್ತು ಕವನ ಸ್ಪರ್ಧೆ’ಯ ಫಲಿತಾಂಶ ಪ್ರಕಟವಾಗಿದೆ. ನಾಗತಿಹಳ್ಳಿ ಚಂದ್ರಶೇಖರ ಅವರ ಕಥೆ ‘ಒಳಚರಂಡಿ’ ಹಾಗೂ ಸದಾಶಿವ ಸೊರಟೂರು ಅವರ ಕವನ ‘ಮಲ್ಲಿಗೆಕೊಂಡ ಬುದ್ಧ...’ ಆಯಾ ಸ್ಪರ್ಧೆಯಲ್ಲಿ ಮೊದಲ ಬಹುಮಾನವನ್ನು ಪಡೆದುಕೊಂಡಿವೆ.
ಕಥಾಸ್ಪರ್ಧೆಯಲ್ಲಿ ಜಯಪ್ರಕಾಶ ಮಾವಿನಕುಳಿ ಅವರ ‘ಕೋಡಗನ ಕೋಳಿ ನುಂಗಿತ್ತಾ...’ ಹಾಗೂ ಮಂಜುನಾಥ ವಿ.ಎಂ. ಅವರ ‘ಬೆತ್ತಲ ಮೀನು’ ಕಥೆಗಳು ಕ್ರಮವಾಗಿ ಎರಡು ಮತ್ತು ಮೂರನೇ ಬಹುಮಾನಕ್ಕೆ ಭಾಜನವಾಗಿವೆ. ಸುಧಾ ಆಡುಕಳ ಅವರ ‘ಸಲ್ಲೇಖನ’, ಟಿ.ಗೋವಿಂದರಾಜು ಅವರ ‘ಅಗ್ನಿ ಬಿದ್ದದ್ದು...!’,ಪ್ರಕಾಶ್ ಪುಟ್ಟಪ್ಪ ಅವರ ‘ಗಾಂಧಿ ಜೋಡಿನ ಮಳಿಗೆ’, ಪ್ರಸಾದ ಶೆಣೈ ಆರ್.ಕೆ. ಅವರ ‘ಲಾಂಬು’ ಹಾಗೂ ಪ್ರೊ.ಎಂ.ಡಿ.ಚಿತ್ತರಗಿ ಅವರ ‘ಉಫ್’ ಕಥೆಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ.
ಕವನ ಸ್ಪರ್ಧೆಯಲ್ಲಿ ಚಂದ್ರಿಕಾ ಹೆಗಡೆ ಅವರ ‘ಉಳುಮೆಯ ಸದ್ದು.’ ಮತ್ತು ಮಂಜುನಾಥ ನಾಯ್ಕ್ ಅವರ ‘ಅಮೂರ್ತವಾಗುವಲ್ಲಿ’ ಕವನಗಳು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದಿವೆ. ಡಾ.ಲಕ್ಷ್ಮಣ ವಿ.ಎ. ಅವರ ‘ಪರಿಮಳದ ಬಾಕಿ ಮೊತ್ತ’, ಅಕ್ಷತಾ ಕೃಷ್ಣಮೂರ್ತಿ ಅವರ ‘ನದಿ ಹಾದಿ ತಪ್ಪಿದರೆ’, ಶಂಕರರಾವ್ ಉಭಾಳೆ ಅವರ ‘ರಂಜಕವಾದ ನಕಾಶೆ’, ಲಿಂಗರಾಜ ಸೊಟ್ಟಪ್ಪನವರ ಅವರ ‘ಮನುಷ್ಯರು’ ಹಾಗೂ ಸುಧಾ ಆಡುಕಳ ಅವರ ‘ಕಿನ್ನರಿ’ ಕವಿತೆಗಳು ತೀರ್ಪುಗಾರರ ಮೆಚ್ಚುಗೆ ಗಳಿಸಿವೆ.
ಕಥೆಗಾರ ಅಮರೇಶ ನುಗಡೋಣಿ ಹಾಗೂ ವಿಮರ್ಶಕಿ ಆರ್. ತಾರಿಣಿ ಶುಭದಾಯಿನಿ ಅವರು ಕಥಾಸ್ಪರ್ಧೆಯ ತೀರ್ಪುಗಾರರಾಗಿದ್ದರು. ಕವಯತ್ರಿ ಚ.ಸರ್ವಮಂಗಳಾ ಹಾಗೂ ಕವಿ ಸತ್ಯಾನಂದ ಪಾತ್ರೋಟ ಅವರು ಕವನ ಸ್ಪರ್ಧೆಯ ತೀರ್ಪುಗಾರರಾಗಿದ್ದರು.
ಕಥಾ ಸ್ಪರ್ಧೆಯಲ್ಲಿ ಮೊದಲ ಮೂರು ಸ್ಥಾನ ಪಡೆದ ಕಥೆಗಳಿಗೆ ಕ್ರಮವಾಗಿ ₹20 ಸಾವಿರ, ₹15 ಸಾವಿರ ಹಾಗೂ ₹10 ಸಾವಿರ ನಗದು ಮತ್ತು ಪ್ರಶಸ್ತಿ ಪತ್ರ ಲಭಿಸಲಿದೆ. ಕವನ ಸ್ಪರ್ಧೆ ಮೊದಲ ಮೂರು ಸ್ಥಾನ ಪಡೆದ ಕವನಗಳಿಗೆ ಕ್ರಮವಾಗಿ ₹5,000, ₹3,000 ಹಾಗೂ ₹2,500 ನಗದು ಹಾಗೂ ಪ್ರಶಸ್ತಿ ಪತ್ರ ದೊರೆಯಲಿದೆ.
ತೀರ್ಪುಗಾರರ ಟಿಪ್ಪಣಿ
ಈ ಎರಡೂವರೆ ದಶಕಗಳ ಕಥಾಸಾಹಿತ್ಯದಲ್ಲಿ ಕಾರ್ಪೋರೇಟ್ ಜಗತ್ತಿನ ಹೊಸ ಬೆಳವಣಿಗೆಗಳಿವೆ. ವೃತ್ತಿ ಸ್ವರೂಪ, ಕುಟುಂಬ-ದಾಂಪತ್ಯ, ಜೀವನ ಶೈಲಿ ಎಲ್ಲದರಲ್ಲೂ ಹೊಸತನವಿದೆ. ಇದು ಕತೆಗಳಲ್ಲಿ ಕಾಣಿಸಿಕೊಳ್ಳುತ್ತಿದೆ.-ಅಮರೇಶ ನುಗಡೋಣಿ, ಕಥಾ ಸ್ಪರ್ಧೆ ತೀರ್ಪುಗಾರರು
ಸಮುದಾಯಗಳನ್ನು ಗ್ರಹಿಸುವ ಕ್ರಮವು ನೆಲದ ಮಿಡಿತ, ಪರಂಪರೆ ಎನ್ನಿಸುವ ಅರಿವು ಖಂಡಿತವಾಗಿ ಬದಲಾಗಿದೆ. ಇದನ್ನು ಈ ಹೊತ್ತಿನ ಕತೆಗಳು ಬಿಂಬಿಸುತ್ತಿವೆ.–ಆರ್.ತಾರಿಣಿ ಶುಭದಾಯಿನಿ, ಕಥಾ ಸ್ಪರ್ಧೆ ತೀರ್ಪುಗಾರರು
ಈ ಬಹುತೇಕ ಕವನಗಳು ಕನ್ನಡ ಕಾವ್ಯದ ಭರವಸೆಯ ಭವಿಷ್ಯದ ದನಿಗಳು. ಸಮಾನತೆ, ಸೌಹಾರ್ದತೆ, ಸಹಿಷ್ಣುತೆಯ ಬೆಳಕನ್ನು ಹಂಬಲಿಸುವ ಬದುಕಿನ ಮಾತುಗಳು ಪ್ರಸ್ತುತ ಪ್ರಕ್ಷುಬ್ಧ ಸಂದರ್ಭದಲ್ಲಿ ಬಹಳ ಅಗತ್ಯ ಅನಿವಾರ್ಯ.–ಚ.ಸರ್ವಮಂಗಳಾ, ಕವನ ಸ್ಪರ್ಧೆ ತೀರ್ಪುಗಾರರು
ಸ್ಪರ್ಧಿಗಳಲ್ಲಿ ಕೆಲವರಿಗೆ ಅಭಿವ್ಯಕ್ತಿ ವಿಧಾನ ಸಿದ್ಧಿಸಿದರೆ, ಇನ್ನು ಕೆಲವರಿಗೆ ಭಾಷೆ, ಶೈಲಿ ಸಿದ್ಧಿಸಿದೆ. ಬಹುತೇಕರು ತಮ್ಮದೇ ದಾರಿ ಕಂಡುಕೊಳ್ಳಲು ಪ್ರಯತ್ನಿಸಿದ್ದಾರೆ. ಇದು ಒಳ್ಳೆಯ ಬೆಳವಣಿಗೆ.–ಸತ್ಯಾನಂದ ಪಾತ್ರೋಟ, ಕವನ ಸ್ಪರ್ಧೆ ತೀರ್ಪುಗಾರರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.