ADVERTISEMENT

Prajavani Phone In Live | ‘ಸಾರಿಗೆ ಸೌಲಭ್ಯಕ್ಕೆ ನವ ಸ್ಪರ್ಶ’

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2022, 17:33 IST
Last Updated 14 ನವೆಂಬರ್ 2022, 17:33 IST
‘ಪ್ರಜಾವಾಣಿ’ ಫೋನ್‌–ಇನ್‌ ಕಾರ್ಯಕ್ರಮದಲ್ಲಿ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್‌ ಜತೆ, ಉಪಮುಖ್ಯ ಸಂಚಾರ ವ್ಯವಸ್ಥಾಪಕ ಎಂ. ದೀಪಕ್‌ ಕುಮಾರ್‌, ಮುಖ್ಯ ಸಂಚಾರ ವ್ಯವಸ್ಥಾಪಕ ಆ್ಯಂಟನಿ ಜಾರ್ಜ್‌, ಮುಖ್ಯ ಯಾಂತ್ರಿಕ ಎಂಜಿನಿಯರ್‌ ಎಂ. ರಮೇಶ್‌, ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಟಿ.ಎಸ್‌. ಲತಾ, ಸಹಾಯಕ ಸಂಚಾರ ವ್ಯವಸ್ಥಾಪಕ ಜಿ.ಎಸ್‌. ಅಶ್ವತ್ಥ ರೆಡ್ಡಿ ಇದ್ದರು.  – ಪ್ರಜಾವಾಣಿ ಚಿತ್ರ
‘ಪ್ರಜಾವಾಣಿ’ ಫೋನ್‌–ಇನ್‌ ಕಾರ್ಯಕ್ರಮದಲ್ಲಿ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್‌ ಜತೆ, ಉಪಮುಖ್ಯ ಸಂಚಾರ ವ್ಯವಸ್ಥಾಪಕ ಎಂ. ದೀಪಕ್‌ ಕುಮಾರ್‌, ಮುಖ್ಯ ಸಂಚಾರ ವ್ಯವಸ್ಥಾಪಕ ಆ್ಯಂಟನಿ ಜಾರ್ಜ್‌, ಮುಖ್ಯ ಯಾಂತ್ರಿಕ ಎಂಜಿನಿಯರ್‌ ಎಂ. ರಮೇಶ್‌, ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಟಿ.ಎಸ್‌. ಲತಾ, ಸಹಾಯಕ ಸಂಚಾರ ವ್ಯವಸ್ಥಾಪಕ ಜಿ.ಎಸ್‌. ಅಶ್ವತ್ಥ ರೆಡ್ಡಿ ಇದ್ದರು. – ಪ್ರಜಾವಾಣಿ ಚಿತ್ರ   

ಬೆಂಗಳೂರು: ಕೋವಿಡ್‌ ನಂತರ ಸ್ಥಗಿತಗೊಳಿಸಿರುವ ಮಾರ್ಗಗಳಲ್ಲಿ ಬಸ್‌ಗಳನ್ನು ಪುನರಾರಂಭಿಸಿ, ಗ್ರಾಮೀಣ ಪ್ರದೇಶದಲ್ಲಿ ಬಸ್‌ಗಳ ಸೌಲಭ್ಯಗಳಿಲ್ಲದೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ, ಹಲವು ಮಾರ್ಗಗಳಲ್ಲಿ ಕಡಿಮೆ ಬಸ್‌ಗಳು ಸಂಚರಿಸುತ್ತವೆ, ನೇಮಕಾತಿಗೆ ಕ್ರಮಕೈಗೊಳ್ಳಿ....

ಇಂತಹ ಹಲವಾರು ಪ್ರಶ್ನೆಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌ಆರ್‌ಟಿಸಿ) ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್‌ ಸಮಾಧಾನದಿಂದ ಉತ್ತರಿಸಿದರು.

‘ಪ್ರಜಾವಾಣಿ’ ಕಚೇರಿಯಲ್ಲಿ ಸೋಮವಾರ ನಡೆದ ‘ಫೋನ್‌ –ಇನ್‌’ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧೆಡೆಯಿಂದ ದೂರವಾಣಿ ಕರೆ ಮಾಡಿದ ಪ್ರಯಾಣಿಕರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡುವ ಭರವಸೆ ನೀಡಿದರು. ಬಸ್‌ ಸೌಲಭ್ಯಗಳು ಇಲ್ಲದ ಮಾರ್ಗದಲ್ಲಿ ಶೀಘ್ರದಲ್ಲೇ ಪರಿಹಾರ ಒದಗಿಸುವುದಾಗಿ ತಿಳಿಸಿದರು.

ADVERTISEMENT

‘ಕೋವಿಡ್‌ನಿಂದ ಆರ್ಥಿಕ ಸಮಸ್ಯೆ ಯಾಯಿತು. ಶೀಘ್ರದಲ್ಲಿ ಹೆಚ್ಚಿನ ಬಸ್‌ ಸೌಲಭ್ಯ ಕಲ್ಪಿಸುತ್ತೇವೆ. ಡಿಸೇಲ್‌ ಬಸ್‌ಗಳ ಖರೀದಿಗೆ ₹220 ಕೋಟಿ ಸಾಲ ಪಡೆಯಲು ಸರ್ಕಾರ ಅನುಮೋದನೆ ನೀಡಿದ್ದು, ಮುಂದಿನ ವಾರ ಟೆಂಡರ್‌ ಕರೆಯಲಾಗುವುದು. ನಾಲ್ಕು ತಿಂಗಳಲ್ಲಿ 600 ಬಸ್‌ಗಳು ದೊರೆಯಲಿವೆ. ಇನ್ನು ಮೂರ್ನಾಲ್ಕು ತಿಂಗಳಲ್ಲಿ ಕೆಎಸ್‌ಆರ್‌ಟಿಸಿಯಲ್ಲಿ ಸಾಕಷ್ಟು ಬದಲಾವಣೆಗಳಲಿದ್ದು, ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳು ದೊರೆಯಲಿವೆ. ಪ್ರಯಾಣಿಕರ ಜತೆ ಸಭೆಗಳನ್ನು ನಡೆಸಿ ಅಗತ್ಯ ಇರುವ ಮಾರ್ಗಗಳಲ್ಲಿ ಬಸ್‌ ಸೌಲಭ್ಯಗಳನ್ನು ಕಲ್ಪಿಸಲಾಗುವುದು’ ಎಂದು ಅವರು ಹೇಳಿದರು.

‘ಎಲೆಕ್ಟ್ರಿಕ್‌ ಬಸ್‌’
‘ಹೊಸ ಎಲೆಕ್ಟ್ರಿಕಲ್‌ ಬಸ್‌ಗಳ ಖರೀದಿ ಆರಂಭವಾಗಿದೆ. ಮೊದಲ ಬಸ್‌ ಈ ತಿಂಗಳ ಅಂತ್ಯಕ್ಕೆ ದೊರೆಯಲಿದೆ’ ಎಂದು ಅನ್ಬುಕುಮಾರ್‌ ತಿಳಿಸಿದರು.

‘ಡಿಸೆಂಬರ್‌ ಅಂತ್ಯಕ್ಕೆ 25 ಎಲೆಕ್ಟ್ರಿಕಲ್‌ ಬಸ್‌ಗಳು ಸೇರ್ಪಡೆಯಾಗಲಿವೆ. ಜನವರಿ ಅಂತ್ಯಕ್ಕೆ ಮತ್ತೆ 25 ಬಸ್‌ಗಳು ದೊರೆಯಲಿವೆ. ಜನವರಿ 1ಕ್ಕೆ ನಗರಗಳ ನಡುವೆ ಎಲೆಕ್ಟ್ರಿಕಲ್‌ ಬಸ್‌ಗಳು ಸಂಚರಿಸಲಿವೆ.ದೇಶದಲ್ಲೇ ಸರ್ಕಾರಿ ಸಾರಿಗೆ ನಿಗಮದ ಎಲೆಕ್ಟ್ರಿಕಲ್‌ ಬಸ್‌ಗಳು ಸಂಚರಿಸುತ್ತಿರುವುದು ಇದೇ ಮೊದಲ ಬಾರಿಯಾಗಿದೆ.ಪುಣೆ– ಮುಂಬೈ ನಡುವೆ ಖಾಸಗಿ ಸಂಸ್ಥೆಗಳ ಎಲೆಕ್ಟ್ರಿಕಲ್‌ ಬಸ್‌ಗಳು ಸಂಚರಿಸುತ್ತಿವೆ. ಮಡಿಕೇರಿ, ಚಿತ್ರದುರ್ಗ, ಮೈಸೂರು, ಕೋಲಾರ ನಗರಗಳಿಗೆ ಬಸ್‌ಗಳನ್ನು ಓಡಿಸುವ ಉದ್ದೇಶವಿದೆ’ ಎಂದು ವಿವರಿಸಿದರು.

ಪ್ರಯಾಣಿಕರ ಪ್ರಶ್ನೆಗಳಿಗೆ ವಿ. ಅನ್ಬುಕುಮಾರ್‌ ನೀಡಿರುವ ಉತ್ತರಗಳ ವಿವರ ಇಲ್ಲಿದೆ:

* ಅಂತರ್ಜಾಲದಲ್ಲಿ ಬಸ್‌ಗಳ ವೇಳಾಪಟ್ಟಿ ಲಭ್ಯವಾಗಬೇಕು. ಬಸ್‌ಗಳು ಎಲ್ಲಿ ಸಂಚರಿಸುತ್ತಿವೆ ಎನ್ನುವ ವಿವರಗಳು ಪ್ರಯಾಣಿಕರಿಗೆ ಲಭ್ಯವಾಗಬೇಕು
– ಅಮೃತಪ್ರಭು,ಮುಂಬೈ

ರೈಲುಗಳಲ್ಲಿ ಜಿಪಿಎಸ್‌ ವ್ಯವಸ್ಥೆ ಇದೆ. ಬಸ್‌ಗಳಲ್ಲಿ ಸದ್ಯ ಜಿಪಿಎಸ್‌ ನಿಗಾ ವ್ಯವಸ್ಥೆ ಇಲ್ಲ. ಈ ವ್ಯವಸ್ಥೆಯನ್ನು ಅಳವಡಿಸುವ ಪ್ರಯತ್ನದಲ್ಲಿದ್ದೇವೆ. ಈಗಾಗಲೇ ಕೇಂದ್ರ ಸರ್ಕಾರಕ್ಕೆ ಈ ಯೋಜನೆಯ ಪ್ರಸ್ತಾವ ಕಳುಹಿಸಿದ್ದೇವೆ. ಮೂರ್ನಾಲ್ಕು ತಿಂಗಳಲ್ಲಿ ಈ ವ್ಯವಸ್ಥೆ ಜಾರಿಯಾಗುವ ಸಾಧ್ಯತೆ ಇದೆ.

* ಚಳ್ಳಕೆರೆ– ಪರಶುರಾಮಪುರ– ಪಿ. ಓಬವ್ವನಹಳ್ಳಿ ಮಾರ್ಗದಲ್ಲಿ ಬಸ್‌ಗಳ ಸೌಲಭ್ಯ ಇಲ್ಲ. ಇದರಿಂದ ತೊಂದರೆಯಾಗುತ್ತಿದೆ.
– ಹಾಲರಾಮೇಶ್ವರ,ಚಿತ್ರದುರ್ಗ

ಕೋವಿಡ್‌ ನಂತರ ಕಡಿಮೆ ಆದಾಯ ಇರುವ ಮಾರ್ಗಗಳಲ್ಲಿ ಕೆಲವು ಬಸ್‌ಗಳನ್ನು ಸ್ಥಗಿತಗೊಳಿಸಲಾಗಿತ್ತು. ಸುಮಾರು600 ಮಾರ್ಗಗಳಲ್ಲಿ ಬಸ್‌ಗಳ ಸಂಚಾರವನ್ನುಸ್ಥಗಿತಗೊಳಿಸಲಾಗಿದೆ. ಬೇಡಿಕೆ ಇರುವ ಮಾರ್ಗಗಳಲ್ಲಿ ಮತ್ತೆ ಸಂಚಾರ ಆರಂಭಿಸಿಸುತ್ತೇವೆ.

* 2018ರಲ್ಲಿ ತಾಂತ್ರಿಕ ಸಹಾಯಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಈ ಬಗ್ಗೆ ನಡೆದ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದೆ. ದೈಹಿಕ ಪರೀಕ್ಷೆಗೆ ಕಾಯುತ್ತಿದ್ದೇವೆ. ನಾವು ಮನವಿಯನ್ನು ಸಹ ಸಲ್ಲಿಸಿದ್ದೇವೆ.
–ಹುಸೇನ್‌ ಭಟ್ಟ

ಕೋವಿಡ್‌ ನಂತರ ಸಂಸ್ಥೆಯ ಆರ್ಥಿಕತೆ ಇನ್ನೂ ಚೇತರಿಸಿಗೊಂಡಿಲ್ಲ. ಹೀಗಾಗಿ, ಹೊಸ ನೇಮಕಾತಿಗೆ ಅನುಮತಿ ನೀಡಿಲ್ಲ. ಆದರೂ, ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ.

* ‘ನಿಮ್ಮಲ್ಲಿ ಹೊಸ ಬಸ್‌ಗಳು ಇಲ್ಲ. ಹೇಗೆ ಬಸ್‌ ಸೌಲಭ್ಯ ಕಲ್ಪಿಸುತ್ತೀರಿ’?
–ತಿಮ್ಮಪ್ಪ, ಹೊಸವನಹಳ್ಳಿ,ನ್ಯಾಮತಿ ತಾಲ್ಲೂಕು

ನಮ್ಮ ಹತ್ತಿರ ಹೆಚ್ಚುವರಿ ಬಸ್‌ಗಳಿರುತ್ತವೆ. 8200 ಬಸ್‌ಗಳಲ್ಲಿ 7600 ಬಸ್‌ಗಳು ನಿತ್ಯ ಕಾರ್ಯನಿರ್ವಹಿಸುತ್ತವೆ. ಉಳಿದ ಬಸ್‌ಗಳಲ್ಲಿ ಕೆಲವು ದುರಸ್ತಿಯಲ್ಲಿರುತ್ತವೆ. ಇನ್ನುಳಿದ ಬಸ್‌ಗಳನ್ನು ಅಗತ್ಯ ಇರುವ ಮಾರ್ಗಕ್ಕೆ ಬಳಸುತ್ತೇವೆ.

* ವೇತನ ತಾರತಮ್ಯ ಯಾವಾಗ ಸರಿಪಡಿಸಲಾಗುತ್ತದೆ?
–ದಾದಾಪೀರ್‌,ಧಾರವಾಡ

ವೇತನ ಪರಿಷ್ಕರಣೆ ಗಮನದಲ್ಲಿದೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪ್ರಕ್ರಿಯೆಗಳು ನಡೆಯುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.