ADVERTISEMENT

ಪ್ರತಿ ಶನಿವಾರ ಬ್ಯಾಗ್‌ರಹಿತ ದಿನ? | ಸಾರ್ವಜನಿಕ ಶಿಕ್ಷಣ ಇಲಾಖೆ ಚಿಂತನೆ

ವಾರಾಂತ್ಯ ಪಠ್ಯೇತರ ಚಟುವಟಿಕೆ: ಎಸ್‌. ಸುರೇಶ್‌ ಕುಮಾರ್‌

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2019, 20:30 IST
Last Updated 7 ಸೆಪ್ಟೆಂಬರ್ 2019, 20:30 IST
‘ನೇರ ಫೋನ್‌– ಇನ್‌’ ಕಾರ್ಯಕ್ರಮದಲ್ಲಿ ಸಚಿವ ಎಸ್‌.ಸುರೇಶ್‌ ಕುಮಾರ್
‘ನೇರ ಫೋನ್‌– ಇನ್‌’ ಕಾರ್ಯಕ್ರಮದಲ್ಲಿ ಸಚಿವ ಎಸ್‌.ಸುರೇಶ್‌ ಕುಮಾರ್   

ಬೆಂಗಳೂರು: ಶಾಲಾ ವಿದ್ಯಾರ್ಥಿಗಳೇ, ನಿತ್ಯವೂ ಮಣಭಾರದ ಬ್ಯಾಗ್‌ ಹೊತ್ತು ಹೈರಾಣಾಗಿದ್ದೀರಾ? ವಾರವಿಡೀ ಪಾಠ ಕೇಳಿ ಬೇಸರವಾಗಿದೆಯೇ? ಹಾಗಿದ್ದರೆ, ಇನ್ನು ಮುಂದೆ ಶನಿವಾರ ಒಂದು ದಿನದ ಮಟ್ಟಿಗಾದರೂ ಇದರಿಂದ ಮುಕ್ತಿ ಸಿಗಲಿದೆ.

ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಪಠ್ಯೇತರ ಚಟುವಟಿಕೆ ದಿನ ಹಾಗೂ ಬ್ಯಾಗ್‌ ರಹಿತ ದಿನವನ್ನಾಗಿ ಆಚರಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.

‘ಪ್ರಜಾವಾಣಿ’ ಶನಿವಾರ ಏರ್ಪಡಿಸಿದ್ದ ‘ನೇರ ಪೋನ್‌–ಇನ್‌’ ಕಾರ್ಯಕ್ರಮದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಈ ವಿಷಯ ಪ್ರಕಟಿಸಿದರು.

ADVERTISEMENT

‘ವಿದ್ಯಾರ್ಥಿಗಳ ಬ್ಯಾಗ್‌ ಹೊರೆ ಕಡಿಮೆ ಮಾಡಬೇಕು. ಎಲ್ಲಾ ಶಾಲೆಗಳಲ್ಲಿ ಪ್ರತಿ ಶನಿವಾರವನ್ನು ಬ್ಯಾಗ್‌ರಹಿತ ದಿನವನ್ನಾಗಿ ಆಚರಿಸಬೇಕು’ ಎಂದು ಹೊಳಲ್ಕೆರೆ ನಾಗರಾಜ್‌ ನೀಡಿದ ಸಲಹೆಗೆ ಪ್ರತಿಕ್ರಿಯಿಸಿದ ಸಚಿವರು, ‘ಇದೊಂದು ಒಳ್ಳೆಯ ಸಲಹೆ. ಇದನ್ನು ಜಾರಿಗೊಳಿಸುತ್ತೇವೆ. ಅಷ್ಟೇ ಅಲ್ಲ, ಪ್ರತಿ ಶನಿವಾರ ಪಾಠದ ಬದಲು, ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಪ್ರಜ್ಞೆ ರೂಪಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಪರಿಸರ, ಆರೋಗ್ಯ, ಲಿಂಗಸೂಕ್ಷ್ಮತೆ ಕುರಿತು ಜಾಗೃತಿ ಮೂಡಿಸುವುದಕ್ಕೆ ಹಾಗೂ ನೀತಿ ಶಿಕ್ಷಣಕ್ಕೆ ಈ ದಿನದ ಚಟುವಟಿಕೆಗಳನ್ನು ಬಳಸಿಕೊಳ್ಳಬೇಕು ಎಂಬ ತೀರ್ಮಾನ ಕೈಗೊಂಡಿದ್ದೇವೆ. ಶೀಘ್ರವೇ ಇದು ಜಾರಿಗೆ ಬರಲಿದೆ’ ಎಂದರು.

ಎಸ್‌ಎಸ್‌ಎ ಶಿಕ್ಷಕರಿಗೆ ವೇತನ: ಸರ್ವ ಶಿಕ್ಷಣ ಅಭಿಯಾನ (ಎಸ್‌ಎಸ್ಎ) ಹಾಗೂ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ (ಆರ್‌ಎಂಎಸ್‌ಎ) ಶಿಕ್ಷಕರಿಗೆ ವೇತನ ಪಾವತಿ ವಿಳಂಬವಾಗುವ ಕುರಿತು ಅನೇಕ ಶಿಕ್ಷಕರು ಅಳಲು ತೋಡಿಕೊಂಡರು. ‘ಈ ಶಿಕ್ಷಕರಿಗೆ ಬೇರೆ ಲೆಕ್ಕ ಶೀರ್ಷಿಕೆ ಅಡಿ ವೇತನ ಪಾವತಿ ಆಗುತ್ತಿರುವುದರಿಂದ ಈ ಸಮಸ್ಯೆ ಉಂಟಾಗುತ್ತಿದೆ. ಇವರಿಗೂ ರಾಜ್ಯ ವಲಯದ ಇತರ ಶಿಕ್ಷಕರ ಲೆಕ್ಕ ಶೀರ್ಷಿಕೆಯಡಿಯಲ್ಲೇ ವೇತನ ಪಾವತಿ ಆಗುವಂತೆ ನೋಡಿಕೊಳ್ಳುತ್ತೇವೆ. ಶೀಘ್ರವೇ ಈ ಸಮಸ್ಯೆ ಬಗೆಹರಿಯಲಿದೆ’ ಎಂದು ಸಚಿವರು ಭರವಸೆ ನೀಡಿದರು.

‘ಆರ್‌ಎಂಎಸ್ಎ ಅಡಿ 3 ಸಾವಿರ ಹಾಗೂ ಎಸ್‌ಎಸ್‌ಎ ಅಡಿ 20 ಸಾವಿರ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪೈಕಿ, 150 ಮಂದಿಯನ್ನು ಬಿಟ್ಟು ಉಳಿದೆಲ್ಲರಿಗೂ ಆಗಸ್ಟ್‌ ತಿಂಗಳ ವರೆಗಿನ ವೇತನ ಪಾವತಿ ಮಾಡಲಾಗಿದೆ’ ಎಂದು ಸರ್ವ ಶಿಕ್ಷಣದ ರಾಜ್ಯ ಯೋಜನಾ ನಿರ್ದೇಶಕ ಎಂ.ಟಿ.ರೇಜು ತಿಳಿಸಿದರು.

ಬೆಳಗಾವಿಯ ಸಂಗಪ್ಪ ಕರಡಿ ಹಾಗೂ ಮೂಡುಬಿದಿರೆಯ ಪ್ರಸನ್ನ ಶೆಣೈ ಈ ಬಗ್ಗೆ ಗಮನ ಸೆಳೆದರು.

‘ಗ್ರಾಮೀಣ ಪರಿಹಾರ ಭತ್ಯೆ ನೀಡಿ’

‘ಹಳ್ಳಿಗಳಲ್ಲಿ ಕರ್ತವ್ಯ ನಿರ್ವಹಿಸುವ ಶಿಕ್ಷಕರಿಗೆ ನಾಲ್ಕನೇ ಮತ್ತು ಐದನೇ ವೇತನ ಆಯೋಗದ ಶಿಫಾರಸುಗಳ ಪ್ರಕಾರ ಗ್ರಾಮೀಣ ಪರಿಹಾರ ಭತ್ಯೆ ನೀಡಲಾಗುತ್ತಿತ್ತು. ಆದರೆ, ಆರನೇ ವೇತನ ಆಯೋಗದಲ್ಲಿ ಇದರ ಬಗ್ಗೆ ಉಲ್ಲೇಖವೇ ಇಲ್ಲ. ಇದನ್ನು ಮತ್ತೆ ಆರಂಭಿಸಬೇಕು’ ಎಂದು ರಾಜ್ಯ ಗ್ರಾಮೀಣ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಕೆ.ನಾಗರಾಜ್‌ ಒತ್ತಾಯಿಸಿದರು.

ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಸಚಿವ ಸುರೇಶ್‌ ಕುಮಾರ್‌ ಭರವಸೆ ನೀಡಿದರು.

ವಿಶೇಷ ಶಾಲಾ ಶಿಕ್ಷಕರ ಹುದ್ದೆ ಭರ್ತಿ ಯಾವಾಗ?

‘ವಿಶೇಷ ಶಾಲೆಗಳ ಶಿಕ್ಷಕರ ನೇಮಕಾತಿ ಸ್ಥಗಿತಗೊಂಡಿದೆ. ಗುತ್ತಿಗೆ ಆಧಾರದಲ್ಲಿ ಕೆಲವರನ್ನು ನೇಮಕ ಮಾಡಿಕೊಂಡಿದ್ದಾರೆ. ಇಂತಹ 347 ಹುದ್ದೆಗಳು ಖಾಲಿ ಇವೆ. ಇವುಗಳನ್ನು ಭರ್ತಿ ಮಾಡಬೇಕು’ ಎಂದು ರೋಣ ತಾಲ್ಲೂಕಿನ ಶಶಿಧರ ಒತ್ತಾಯಿಸಿದರು.

‘ಈ ವಿಚಾರ ಇಲಾಖೆ ಗಮನಕ್ಕೆ ಬಂದಿದೆ. ಹುದ್ದೆ ಭರ್ತಿಗೆ ಶೀಘ್ರವೇ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಸಚಿವರು ತಿಳಿಸಿದರು.

‘ವೈದ್ಯನಾಥನ್‌ ವರದಿ ಜಾರಿ ಪರಿಶೀಲನೆ’

‘ದೈಹಿಕ ಶಿಕ್ಷಣ ಶಿಕ್ಷಕರನ್ನೂ ಇತರ ಸಹಶಿಕ್ಷಕರಂತೆಯೇ ಪರಿಗಣಿಸಬೇಕು ಹಾಗೂ ಅವರಿಗೂ ಬಡ್ತಿ ಅವಕಾಶಗಳು ಸಿಗಬೇಕು ಎಂದು ವೈದ್ಯನಾಥನ್‌ ವರದಿಯಲ್ಲಿ ಶಿಫಾರಸು ಮಾಡಲಾಗಿತ್ತು. ಆದರೆ ಅದಿನ್ನೂ ಜಾರಿಯಾಗಿಲ್ಲ. 36 ವರ್ಷಗಳಿಂದ ದೈಹಿಕ ಶಿಕ್ಷಣ ಶಿಕ್ಷಕನಾಗಿರುವ ನಾನು, ಇನ್ನೆರಡು ವರ್ಷಗಳಲ್ಲಿ ಬಡ್ತಿ ಇಲ್ಲದೆಯೇ ನಿವೃತ್ತಿಯಾಗಲಿದ್ದೇನೆ. ಈ ತಾರತಮ್ಯ ನಿವಾರಿಸಲು ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಅಗತ್ಯ’ ಎಂದು ಚಿತ್ರದುರ್ಗದ ಓಂಕಾರಪ್ಪ ಅಳಲು ತೋಡಿಕೊಂಡರು.

ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.

‘ರಾಜ್ಯದಲ್ಲಿ 48 ಸಾವಿರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ದೈಹಿಕ ಶಿಕ್ಷಣದ ಪಠ್ಯಪುಸ್ತಕ ಪೂರೈಕೆ ಆಗುತ್ತದೆ. ಆದರೆ ದೈಹಿಕ ಶಿಕ್ಷಣ ಶಿಕ್ಷಕರು ಇರುವುದು 4,500 ಶಾಲೆಗಳಲ್ಲಿ ಮಾತ್ರ’ ಎಂದೂ ಓಂಕಾರಪ್ಪ ಗಮನ ಸೆಳೆದರು.

‘ಫಿಟ್‌ ಇಂಡಿಯಾ ಜಾರಿಗೆ ದೈಹಿಕ ಶಿಕ್ಷಣ ಶಿಕ್ಷಕರ ನೇಮಕ’

ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡದೆ ಎರಡು ದಶಕಗಳೇ ಕಳೆದಿವೆ ಎಂದು ಅನೇಕ ಶಿಕ್ಷಕರು ಸಚಿವರ ಗಮನಕ್ಕೆ ತಂದರು.

‘ಕಾಲಕಾಲಕ್ಕೆ ಶಿಕ್ಷಕರ ನೇಮಕಾತಿ ಸಮರ್ಪಕವಾಗಿ ನಡೆಯುವಂತೆ ನೀತಿ ರೂಪಿಸಲಿದ್ದೇವೆ. ಆ ಸಂದರ್ಭದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಯನ್ನೂ ಪರಿಗಣಿಸುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ‘ಫಿಟ್‌ ಇಂಡಿಯಾ’ ಕಾರ್ಯಕ್ರಮವನ್ನು ಘೋಷಿಸಿದ್ದಾರೆ. ಅದರ ಅನುಷ್ಠಾನದಲ್ಲೂ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಮಹತ್ವದ್ದು’ ಎಂದು ಸುರೇಶ್‌ ಕುಮಾರ್‌ ಅಭಿಪ್ರಾಯಪಟ್ಟರು.

‘ರಂಗ ಶಿಕ್ಷಕರನ್ನು ನೇಮಿಸಿ’

‘ಈ ಹಿಂದೆ ಶಾಲೆಗಳಲ್ಲಿ ರಂಗ ಶಿಕ್ಷಕರನ್ನು ನೇಮಿಸಿಕೊಳ್ಳುವ ಪರಿಪಾಠ ಇತ್ತು. 2001ರ ನಂತರ ಇದು ನಿಂತೇ ಹೋಗಿದೆ. ನಾನು ‘ನೀನಾಸಂ’ನಲ್ಲಿ ತರಬೇತಿ ಪಡೆದು ಕೆಲವು ಶಾಲೆಗಳಲ್ಲಿ ನಾಟಕಗಳ ಕುರಿತು ತರಬೇತಿ ನೀಡುತ್ತಿದ್ದೇನೆ. ರಂಗ ಶಿಕ್ಷಕರ ನೇಮಕಾತಿಯನ್ನು ಮತ್ತೆ ಆರಂಭಿಸಿ’ ಎಂದು ಹೊಳೆನರಸೀಪುರದ ಶಿವಶಂಕರ್‌ ಒತ್ತಾಯಿಸಿದರು.

‘ರಂಗ ಚಟುವಟಿಕೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುತ್ತದೆ. ಇದೊಂದು ಉತ್ತಮ ಸಲಹೆ. ಇದನ್ನು ಪರಿಗಣಿಸುತ್ತೇವೆ’ ಎಂದು ಶಿಕ್ಷಣ ಸಚಿವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.