ಬೆಂಗಳೂರು: ಕೋವಿಡ್ ಮೂರನೇ ಅಲೆಯ ಭೀತಿಯಲ್ಲಿರುವ ಸಂದರ್ಭದಲ್ಲೇ ರಾಜಕೀಯ ಪಕ್ಷಗಳು ರ್‍ಯಾಲಿ, ಯಾತ್ರೆಗಳನ್ನು ಆರಂಭಿಸಿವೆ. ಕೋವಿಡ್ ಹರಡುವಿಕೆ ತಡೆಯಲು ಜಾಗೃತಿ ಮೂಡಿಸಬೇಕಾದ ರಾಜಕಾರಣಿಗಳೇ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿರುವುದು ಸರಿಯೇ?
ಈ ಕುರಿತು ‘ಪ್ರಜಾವಾಣಿ’ ಸೋಮವಾರ ಹಮ್ಮಿಕೊಂಡಿದ್ದ ‘ಕೊರೊನಾ ಕಾಲದಲ್ಲಿ ರಾಜಕಾರಣಿಗಳ ಯಾತ್ರೆ’ ಎಂಬ ವಿಷಯ ಕುರಿಯ ಸಂವಾದದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣಗೌಡ, ಕಾಂಗ್ರೆಸ್ ವಕ್ತಾರೆ ಭವ್ಯ ನರಸಿಂಹಮೂರ್ತಿ, ರಾಜಕೀಯ ವಿಶ್ಲೇಷಕ ಎ.ನಾರಾಯಣ, ಸಾಮಾಜಿಕ ಕಾರ್ಯಕರ್ತ ಡಾ. ಬಿ.ಆರ್.ಮಂಜುನಾಥ್ ಅವರು ಹಂಚಿಕೊಂಡ ಅಭಿಪ್ರಾಯಗಳ ಸಂಕ್ಷಿಪ್ತ ವಿವರ ಇಲ್ಲಿದೆ.
ಸಚಿವರ ಪರಿಚಯಕ್ಕಾಗಿ ರ್‍ಯಾಲಿ
ಕರ್ನಾಟಕದಿಂದ ಕೇರಳ ಮತ್ತು ಮಹಾರಾಷ್ಟ್ರಕ್ಕೆ ಕೋವಿಡ್ ಹರಡಿಲ್ಲ. ಈ ಎರಡು ರಾಜ್ಯಗಳಿಂದಲೇ ರಾಜ್ಯಕ್ಕೆ ಕೋವಿಡ್ ಹರಡಿದ್ದು, ಅಲ್ಲಿ ಬಿಜೆಪಿ ಆಡಳಿತ ನಡೆಸುತ್ತಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ 17 ಸಾವಿರ ಜನರನ್ನು ಸೇರಿಸಿ ಸಭೆ ನಡೆಸಿದ್ದಾರೆ. ಹೊಸದಾಗಿ ಕೇಂದ್ರ ಸಚಿವರಾದವರನ್ನು ಸಂಸತ್‌ನಲ್ಲಿ ಪರಿಚಯ ಮಾಡಿಕೊಳ್ಳಲು ವಿರೋಧ ಪಕ್ಷಗಳು ಅವಕಾಶ ನೀಡಲಿಲ್ಲ. ಹೀಗಾಗಿ, ಸಚಿವರು ಜನಾಶೀರ್ವಾದ ರ್‍ಯಾಲಿಗಳನ್ನು ನಡೆಸಿದ್ದಾರೆ. ನರೇಂದ್ರ ಮೋದಿ ಕಾರ್ಯಕ್ರಮಗಳಿಗೆ ಜನ ಸೇರುತ್ತಾರೆ, ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಜನರೇ ಬರುವುದಿಲ್ಲ. ಕೋವಿಡ್ ನಿಲಯ ಪಾಲನೆ ಮಾಡಿಕೊಂಡೆ ಸಭೆಗಳನ್ನು ಬಿಜೆಪಿ ನಡೆಸಿದ್ದೇವೆ. ಖುಷಿಯಾದಾಗ ಗುಂಡು ಹಾರಿಸುವುದು ಬಂಜಾರ ಸಮುದಾಯದ ಸಂಪ್ರದಾಯ. ಕೊರೊನಾ ಸೋಂಕನ್ನು ಭಾರತ ಸಮರ್ಥವಾಗಿ ನಿಭಾಯಿಸಿದೆ.
–ಅಶ್ವತ್ಥನಾರಾಯಣಗೌಡ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ
ಕೋವಿಡ್‌ಗೆ ಆಡಳಿತ ಪಕ್ಷದ ಕೊಡುಗೆ ಹೆಚ್ಚು
ಕೋವಿಡ್ ಹರಡಲು ಕಾರಣವಾಗುವ ರ್‍ಯಾಲಿಗಳನ್ನು ರಾಜಕೀಯ ಪಕ್ಷಗಳು ನಡೆಸುವುದು ತಪ್ಪು ಎಂಬುದನ್ನು ಒಪ್ಪಿಕೊಳ್ಳಲೇಬೇಕಿದೆ. ಐದು ರಾಜ್ಯಗಳ ಚುನಾವಣೆ ಘೋಷಣೆ ಮಾಡಿದಾಗಿನಿಂದ ಇದು ಆರಂಭವಾಯಿತು. ಪ್ರಧಾನಿ ನರೇಂದ್ರ ಮೋದಿಯವರೇ ರಾಜಕೀಯ ರ್‍ಯಾಲಿಗಳ ಮೂಲಕ ಕೋವಿಡ್ ಹರಡಿದರು ಎಂದು ಭಾರತೀಯ ವೈದ್ಯಕೀಯ ಸಂಘ(ಐಎಂಎ) ಹೇಳಿದೆ. ಕೋವಿಡ್ ನಿಯಂತ್ರಣ ಮಾಡುವ ಬದಲು, ಹರಡಲು ಎಲ್ಲರಿಗಿಂತ ಹೆಚ್ಚಿನ ಕೊಡುಗೆ ನೀಡಿದ್ದೇ ಆಡಳಿತ ಪಕ್ಷ. ಈಗ ಜನಾಶೀರ್ವಾದ ರ್‍ಯಾಲಿ ನಡೆಸುತ್ತಿದೆ. ಈ ರ್‍ಯಾಲಿಯಲ್ಲಿ ಗುಂಡು ಹಾರಿಸಿದ್ದನ್ನು ಸರ್ಕಾರ ಸಮರ್ಥನೆ ಮಾಡಿಕೊಳ್ಳುತ್ತಿದೆ. ಇನ್ನೊಂದೆಡೆ ಮೂವರು ಪೊಲೀಸರನ್ನು ಅಮಾನತು ಮಾಡಿದೆ. ಲಸಿಕೆ ಹಾಕಿಸಿಕೊಳ್ಳಲು ಮೊದಲಿಗೆ ಪ್ರಧಾನಿಯೇ ಹಿಂದೇಟು ಹಾಕಿದರು. ಇದು ಲಸಿಕಾ ಅಭಿಯಾನದ ಹಿನ್ನಡೆಗೆ ಕಾರಣವಾಯಿತು.
–ಭವ್ಯ ನರಸಿಂಹಮೂರ್ತಿ, ಕಾಂಗ್ರೆಸ್ ವಕ್ತಾರೆ
ಪರಿಚಯ ಇಲ್ಲದೆ ಸಂಸದರಾದರೆ?
ಯಾವುದೇ ನಿಯಮ ಸಾಮಾನ್ಯ ಜನರಿಗೆ ಮಾತ್ರ ರಾಜಕಾರಣಿಗಳಿಗೆ ಅಲ್ಲ ಎಂಬಂತಾಗಿದೆ. ರಾಜಕೀಯ ಪಕ್ಷಗಳ ಈ ದೋರಣೆ ಎರಡು ರೀತಿಯ ಸಾಂಕ್ರಾಮಿಕವನ್ನು ಹರಡುತ್ತದೆ. ಕೋವಿಡ್ ಹರಡುವುದು ಒಂದೆಡೆಯಾದರೆ, ಅಧಿಕಾರದಲ್ಲಿ ಇರುವವರು ನಿಯಮ ಪಾಲಿಸದೆ ನಡೆದುಕೊಂಡಾಗ ಜನರೂ ಅದನ್ನೇ ಅನುಸರಿಸುತ್ತಾರೆ. ರಾಜಕೀಯವಾಗಿ ಸ್ವಲ್ಪ ಪ್ರಬಲವಾದರೆ ನಿಯಮ ಮೀರಬಹುದು ಎಂಬ ಮನೋಭಾವ ಸಮಾಜದಲ್ಲಿ ಬೆಳೆಯುತ್ತದೆ.ಇದು ಇನ್ನೊಂದು ರೀತಿಯ ಸಾಂಕ್ರಾಮಿಕ. ಕೇಂದ್ರ ಸಚಿವರನ್ನು ಪರಿಚಯಿಸಲು ಜನಾಶೀರ್ವಾದ ಯಾತ್ರೆ ಮಾಡಲಾಗುತ್ತಿದೆ ಎಂಬ ಸಮರ್ಥನೆ ಆ ಕ್ಷೇತ್ರದ ಮತ್ತು ರಾಜ್ಯದ ಜನರಿಗೆ ಮಾಡುವ ಅವಮಾನ. ಕ್ಷೇತ್ರದ ಜನರಿಗೆ ಪರಿಚಯ ಇರುವುದರಿಂದಲೇ ಅವರನ್ನು ಸಂಸರಾಗಿ ಆಯ್ಕೆ ಮಾಡಿದ್ದಾರೆ. ಕೋವಿಡ್ ಕಾಲದಲ್ಲಿ ಚುನಾವಣಾ ರ್‍ಯಾಲಿಗಳು ಹೇಗಿರಬೇಕು ಎಂಬುದರ ಬಗ್ಗೆ ಚುನಾವಣಾ ಆಯೋಗವೇ ನಿಯಮಗಳನ್ನು ರೂಪಿಸಬೇಕು.
–ಎ.ನಾರಾಯಣ, ರಾಜಕೀಯ ವಿಶ್ಲೇಷಕ
ಎಲ್ಲಾ ಪಕ್ಷಗಳು ಆತ್ಮವಿಮರ್ಶೆ ಮಾಡಿಕೊಳ್ಳಲಿ
ಕೋವಿಡ್‌ನಿಂದಾಗಿ ದೇಶದಲ್ಲಿ 40 ಲಕ್ಷ ಜನ ಮೃತಪಟ್ಟಿದ್ದಾರೆ. ಇದಕ್ಕೆ ಯಾರಿಗೂ ದುಃಖವಿಲ್ಲ. ಬದಲಿಗೆ ಸಚಿವರಾದವರ ಸಂಭ್ರಮವೇ ಹೆಚ್ಚಾಗಿದೆ. ಭಾರತ ಸರ್ಕಾರ ಎಂದರೆ ಅದಕ್ಕಿರುವುದು ಇಬ್ಬರ ಮುಖಗಳಷ್ಟೇ. ಮೂರನೇ ಮುಖವೇ ಇಲ್ಲ. ಕೇಂದ್ರ ಸಚಿವರಾದವರು ಪರಿಚಯ ಮಾಡಿಕೊಳ್ಳಬೇಕಾದ ಸ್ಥಿತಿ ಇರುವುದು ವಿಪರ್ಯಾಸ. ಇದಕ್ಕಾಗಿ ಜನಾಶೀರ್ವಾದ ಯಾತ್ರೆ ಮಾಡಿದ್ದು ದೊಡ್ಡ ತಪ್ಪು. ರಾಜಕಾರಣಿಗಳ ಈ ರೀತಿಯ ಬೇಜವಾಬ್ದಾರಿ ವರ್ತನೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಬೇಕಿದೆ. ಇಂತಹ ಯಾತ್ರೆ ಮತ್ತು ಬೇಜವಾಬ್ದಾರಿ ನಡವಳಿಕೆಗಳನ್ನು ಜನರೇ ವಿರೋಧಿಸುವಂತಾಗಬೇಕು. ಸಂಸತ್ ಕಲಾಪ ಎದುರಿಸಲು ಆಡಳಿತ ಪಕ್ಷವೇ ಸಿದ್ಧವಿಲ್ಲ. ಕೋವಿಡ್ ಕಾಲದಲ್ಲಿ ಸಣ್ಣಪುಟ್ಟ ಸ್ವಯಂ ಸೇವಾ ಸಂಸ್ಥೆಗಳು ಮಾಡಿದ ಕೆಲಸವನ್ನು ಸರ್ಕಾರ ಅಥವಾ ರಾಜಕೀಯ ಪಕ್ಷಗಳು ಮಾಡಲಿಲ್ಲ. ತಮ್ಮ ನಡವಳಿಕೆಗಳ ಬಗ್ಗೆ ಆ ಪಕ್ಷಗಳೇ ಆತ್ಮವಿಮರ್ಶೆ ಮಾಡಿಕೊಳ್ಳಬೇಕು.
–ಡಾ. ಬಿ.ಆರ್.ಮಂಜುನಾಥ್, ಸಾಮಾಜಿಕ ಕಾರ್ಯಕರ್ತ
ಪೂರ್ಣ ಸಂವಾದ ವೀಕ್ಷಿಸಲು: https://www.facebook.com/prajavani.net/videos
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.