ADVERTISEMENT

ಬದುಕು ಬೀದಿಗೆ ತಂದ ಕೋವಿಡ್– ಸರಣಿ| ಗಾರ್ಮೆಂಟ್ಸ್‌ ಕಾರ್ಮಿಕರ ಬದುಕು ಮೂರಾಬಟ್ಟೆ

ಲಾಕ್‌ಡೌನ್: ಕಾರ್ಮಿಕರಿಗೆ ಮಾಸದ ಗಾಯವಾಗಿ ಉಳಿದ ನೋವುಗಳು

ವಿಜಯಕುಮಾರ್ ಎಸ್.ಕೆ.
Published 12 ಸೆಪ್ಟೆಂಬರ್ 2021, 19:36 IST
Last Updated 12 ಸೆಪ್ಟೆಂಬರ್ 2021, 19:36 IST
ಗಾರ್ಮೆಂಟ್ಸ್ ಕಾರ್ಖಾನೆ
ಗಾರ್ಮೆಂಟ್ಸ್ ಕಾರ್ಖಾನೆ   

ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ತಳ ಸಮುದಾಯ ಗಳ ಬದುಕು ನೆಲಕಚ್ಚಿತ್ತು. ಈಗ ಪರಿಸ್ಥಿತಿ ಕೊಂಚ ಸುಧಾರಿಸಿದ್ದರೂ ಅವರ ಬದುಕಿನ ಸ್ಥಿತಿಗತಿ ಹೇಗಿದೆ ಎಂಬುದರ ಮೇಲೆ ಬೆಳಕು ಚೆಲ್ಲುವ ಸರಣಿ ವರದಿಗಳು ಇಂದಿನಿಂದ ಪ್ರಕಟವಾಗಲಿವೆ.

ಬೆಂಗಳೂರು: ಗಾರ್ಮೆಂಟ್ಸ್ ಉದ್ಯಮಗಳ ಕಾರ್ಮಿಕರಲ್ಲಿ ಹಲವರ ಬದುಕು ಕೋವಿಡ್ ಅಡಕತ್ತರಿಯಲ್ಲಿ ಸಿಲುಕಿ ಅಕ್ಷರಶಃ ಚಿಂದಿಯಾಗಿದೆ. ಬೆಂಗಳೂರು, ಮೈಸೂರು, ರಾಮನಗರ ಸೇರಿ ಇತರ ಪ್ರಮುಖ ನಗರ ಗಳಲ್ಲಿ ಗಾರ್ಮೆಂಟ್ಸ್ ಉದ್ಯಮ ನೆಚ್ಚಿಕೊಂಡವರ ಬದುಕು ಮೂರಾಬಟ್ಟೆಯಾಗಿದೆ.

‌2020ರ ಮಾರ್ಚ್‌ನಲ್ಲಿ ಬೆಂಗಳೂರಿನಲ್ಲಿ ವ್ಯಾಪಿಸುತ್ತಿದ್ದ ಕೋವಿಡ್‌ನಿಂದ ತಪ್ಪಿಸಿಕೊಂಡರೆ ಸಾಕು ಎಂದು ಹಲವರು ದಿಢೀರ್‌ ಮನೆ ಖಾಲಿ ಮಾಡಿ ಹಳ್ಳಿಗಳಿಗೆ ತೆರಳಿದ್ದರು. ಹೀಗೇ ತೊರೆದವರಲ್ಲಿ ಗಾರ್ಮೆಂಟ್ಸ್ ಕಾರ್ಖಾನೆಗಳ ಕಾರ್ಮಿಕರೂ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಹಳ್ಳಿಯಲ್ಲಿ ಬದುಕು ದುಸ್ತರವಾಗಿ ಬೆಂಗಳೂರಿಗೆ ಬಂದು ಹೊಸ ಬದುಕು ಕಟ್ಟಿಕೊಂಡಿದ್ದವರು ಮತ್ತೆ ಅದೇ ಸ್ಥಿತಿಗೆ ಮರಳಬೇಕಾಯಿತು.

ADVERTISEMENT

ಲಾಕ್‌ಡೌನ್ ತೆರವಾದ ಬಳಿಕ ಕೆಲವರು ವಾಪಸ್ ಬಂದಿದ್ದರೆ, ಬಹುತೇಕ ಮಂದಿ ಇನ್ನೂ ಬೆಂಗಳೂರಿನತ್ತ ಮುಖ ಮಾಡಿಯೇ ಇಲ್ಲ. ವಾಪಸ್ ಬಾರದವರಲ್ಲಿ ಕೆಲವರು ಹಳ್ಳಿಯಲ್ಲೇ ಬದುಕು ಕಟ್ಟಿಕೊಂಡಿದ್ದರೆ, ಮತ್ತೆ ಕೆಲವರ ಬದುಕು ಈಗಲೂ ತೂಗುಯ್ಯಾಲೆಯಲ್ಲೇ ಇದೆ.

ಮ್ಯಾಕ್ಸಿಕ್ಯಾಬ್ ಚಾಲಕನಾಗಿ ವೃತ್ತಿ ಆರಂಭಿಸಿ ಕೆಲ ವರ್ಷಗಳಲ್ಲಿ ಅದೇ ವಾಹನ ಖರೀದಿಸಿ ಹೊಸ ಬದುಕು ಆರಂಭಿಸಿದ್ದ ಹೊಳೆನರಸೀಪುರದ ಚಂದ್ರಶೇಖರ್ ಎಂಬುವರು ಬೆಂಗಳೂರಿನ ಗಾರ್ಮೆಂಟ್ಸ್ ಕಾರ್ಖಾನೆ ಯತ್ತ ಮುಖ ಮಾಡಿದ್ದು ಒಂದು ಕತೆಯಾದರೆ, ಕೋವಿಡ್ ಲಾಕ್‌ಡೌನ್‌ ಬಳಿಕ ಎದುರಿಸಿರುವ ಸಂಕಷ್ಟ ಇನ್ನೊಂದು ದುರಂತಮಯ ಕತೆ.

‘ವಾಹನ ಮಾಲೀಕನಾದ ಕೆಲವೇ ದಿನಗಳಲ್ಲಿ ಅಪಘಾತಕ್ಕೀಡಾಗಿ ಲಕ್ಷಾಂತರ ರೂಪಾಯಿ ಸಾಲ ತಲೆ ಮೇಲೆ ಬಂತು. ಸಾಲಗಾರರ ಕಾಟ ತಾಳಲಾರದೆ ರಾತ್ರೋರಾತ್ರಿ ಹೆಂಡತಿ–ಮಕ್ಕಳೊಂದಿಗೆ ಊರುಬಿಟ್ಟು ಬೆಂಗಳೂರಿಗೆ ಬಂದಿದ್ದೆ. ಗಂಡ–ಹೆಂಡತಿ ಇಬ್ಬರೂ ಗಾರ್ಮೆಂಟ್ಸ್ ಕಾರ್ಖಾನೆಗೆ ಸೇರಿಕೊಂಡು ಮೂರ್ನಾಲ್ಕು ವರ್ಷಗಳಲ್ಲಿ ಸಾಲ ತೀರಿಸಿದೆವು. ಜಿಂದಾಲ್ ಕಂಪನಿ ತೆರೆದಿರುವ ಶಾಲೆಯಲ್ಲಿ ಮಕ್ಕಳು ಕಲಿಯುತ್ತಿದ್ದರು. ಎಲ್ಲವೂ ಸರಿಯಾಯಿತು ಎನ್ನುವ ಸಂತಸ ಹೆಚ್ಚು ಕಾಲ ಉಳಿಯಲಿಲ್ಲ. ಕೋವಿಡ್‌ ಮೊದಲ ಅಲೆಯ ವೇಳೆ ಮನೆ ಖಾಲಿ ಮಾಡಿ ಊರು ಸೇರಿದೆವು. ಅಲ್ಲಿಗೆ 10 ವರ್ಷದ ಸುಂದರ ಬದುಕಿನ ಅಧ್ಯಾಯ ಮುಗಿಯಿತು’ ಎಂದು ರುಕ್ಮಿಣಿನಗರದಲ್ಲಿ ಮನೆ ಮಾಡಿಕೊಂಡಿದ್ದ ಹೊಳೆನಸೀಪುರದ ಚಂದ್ರಶೇಖರ್ ತಮ್ಮ ಬವಣೆಯನ್ನು ವಿವರಿಸಿದರು.

‘ಕೈಯಲ್ಲಿದ್ದ ಬಿಡಿಗಾಸು ಖಾಲಿ ಆಯಿತು. ಬೆಂಗಳೂರಿಗೆ ಮತ್ತೆ ಬಂದು ಬಾಡಿಗೆ ಮನೆ ಹಿಡಿದು ಮತ್ತೆ ಜೀವನ ಆರಂಭಿಸಲು ಕನಿಷ್ಠ ₹1 ಲಕ್ಷವಾದರೂ ಬೇಕು. ಆದ್ದರಿಂದ ಲಾಕ್‌ಡೌನ್ ತೆರವಾದರೂ ವಾಪಸ್ ಬರಲು ಸಾಧ್ಯವಾಗಲಿಲ್ಲ. ದುಡಿಮೆಗೆ ಬೇರೆ ದಾರಿ ಇಲ್ಲದೆ ‍ಮನೆಯಲ್ಲೇ ಕದ್ದುಮುಚ್ಚಿ ಮದ್ಯ ಮಾರಾಟ ಆರಂಭಿಸಿದೆ. ಪೊಲೀಸರು ಕಣ್ಣಿಗೆ ಬಿದ್ದು ಜೈಲಿಗೆ ಹೋಗಿ ಬಂದೆ. ಇದೇ ಆಘಾತಕ್ಕೋ ಏನೋ ಹೃದಯಾಘಾತ ಆಗಿ ಮೈಸೂರಿನ ಜಯದೇವ ಆಸ್ಪತ್ರೆ ಸೇರಿದೆ. ಅದರಿಂದ ಚೇತರಿಸಿಕೊಂಡ ಕೆಲವೇ ದಿನಗಳಲ್ಲಿ ಬೈಕ್ ಅಪಘಾತಕ್ಕೀಡಾಗಿ ನಾನು ಸೊಂಟ ಮುರಿದುಕೊಂಡೆ, ಹೆಂಡತಿಯ ಬೆನ್ನು ಮೂಳೆ ಮುರಿಯಿತು’ ಎಂದು ಅವರು ಹೇಳುವಾಗ ಕಣ್ಣಾಲಿ ತುಂಬಿಕೊಂಡರು.

‘ಹಾಸಿಗೆಯಿಂದ ಮೇಲೇಳಲು ಇನ್ನೂ ಮೂರ್ನಾಲ್ಕು ತಿಂಗಳು ಬೇಕು. ಪ್ರೌಢಶಾಲೆ ಹಂತದಲ್ಲಿರುವ ಮಕ್ಕಳೇ ಈಗ ನಮಗೆ ತಂದೆ–ತಾಯಿಯಂತಾಗಿದ್ದಾರೆ. ಇಬ್ಬರೂ ಕೃಷಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಊಟಕ್ಕೆ ನ್ಯಾಯಬೆಲೆ ಅಂಗಡಿಯಲ್ಲಿ ಸಿಗುವ ದವಸವನ್ನೇ ನೆಚ್ಚಿಕೊಂಡಿದ್ದೇವೆ. ವೈದ್ಯಕೀಯ ವೆಚ್ಚಕ್ಕೆ ಮಕ್ಕಳ ದುಡಿಮೆಯೇ ಗತಿಯಾಗಿದೆ’ ಎಂದು ಹೇಳುವಾಗ ಚಂದ್ರಶೇಖರ್ ಗದ್ಗದಿತರಾದರು.

ರಾಜಗೋಪಾಲನಗರದ ಸುಜಾತಾ ಅವರದು ಇನ್ನೊಂದು ಕತೆ. ‘ಮನೆ ಬಿಟ್ಟು ಬಂದು ಮದುವೆ ಮಾಡಿಕೊಂಡು ಇಬ್ಬರೂ ಗಾರ್ಮೆಂಟ್ಸ್ ಸೇರಿ ಬದುಕು ಕಟ್ಟಿಕೊಂಡೆವು. ಕೋವಿಡ್ ಲಾಕ್‌ಡೌನ್ ವೇಳೆ ದುಡಿಮೆ ಇಲ್ಲದಂತಾಯಿತು. ಮನೆಯವರ ವಿರೋಧ ಕಟ್ಟಿಕೊಂಡು ಬೆಂಗಳೂರಿಗೆ ಬಂದಿದ್ದರಿಂದ ಮತ್ತೆ ಊರಿಗೆ ಹೋಗಲು ದಾರಿ ಇಲ್ಲವಾಗಿತ್ತು. ದಾನಿಗಳು ಕೊಡುತ್ತಿದ್ದ ಆಹಾರದ ಪೊಟ್ಟಣವೇ ಮೂವರ ಜೀವಕ್ಕೂ ಆಧಾರವಾಯಿತು. ಆ ಸಂಕಷ್ಟದ ದಿನಗಳಲ್ಲಿ ಜೀವನೋತ್ಸಾವವೇ ಕಮರಿ ಹೋಗಿತ್ತು’ ಎಂದು ಕಣ್ಣೀರಿಟ್ಟರು.

ಹೀಗೆ ಕೋವಿಡ್ ಅಬ್ಬರದಲ್ಲಿ ಬದುಕು ಕಳೆದುಕೊಂಡ ಒಬ್ಬೊಬ್ಬ ಗಾರ್ಮೆಂಟ್ಸ್ ಕಾರ್ಮಿಕರ ಒಂದೊಂದು ಕತೆಗಳೂ ಕರುಣಾಜನಕವಾಗಿವೆ. ಗಾರ್ಮೆಂಟ್ಸ್ ಉದ್ಯಮ ಈಗ ಚೇತರಿಕೆ ಹಾದಿಯಲ್ಲಿದೆ. ದುಡಿಯುವ ಕೈಗಳಿಗೆ ಕಾರ್ಖಾನೆಗಳಲ್ಲಿ ಈಗ ಕೈತುಂಬ ಕೆಲಸವಿದೆ. ಸಾಕಷ್ಟು ಕಾರ್ಮಿಕರು ಇನ್ನೂ ವಾಪಸ್ ಆಗದಿರುವುದರಿಂದ ಉದ್ಯಮ ಕಾರ್ಮಿಕರ ಕೊರತೆ ಎದುರಿಸುತ್ತಿದೆ. ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ ಹೊರ ರಾಜ್ಯಗಳ ವಲಸೆ ಕಾರ್ಮಿಕರು ಈಗ ಮೈಸೂರು, ರಾಮನಗರ, ಹಾಸನ ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲೂ ಕೆಲಸ ಪಡೆಯುತ್ತಿದ್ದಾರೆ. ಮೂರನೇ ಅಲೆಯ ಭಯದಲ್ಲಿರುವ ಕಾರ್ಮಿಕರಲ್ಲಿ ಎರಡು ಲಾಕ್‌ಡೌನ್ ಅವಧಿಯ ನೋವು ಮಾಸದ ಗಾಯವಾಗಿ ಉಳಿದು ಹೋಗಿದೆ.

ಸಾಲದ ಸುಳಿಯಲ್ಲಿ ಬಿಡಿಭಾಗ ಪೂರೈಕೆದಾರರು

ಗಾರ್ಮೆಂಟ್ಸ್‌ ಉದ್ಯಮ ಈಗ ಚೇತರಿಕೆ ಹಾದಿಗೆ ಮರಳಿದ್ದರೂ ಕೋವಿಡ್ ಎರಡೂ ಅಲೆಗಳು ಗಾರ್ಮೆಂಟ್ಸ್‌ ಕಾರ್ಖಾನೆಗಳಿಗೆ ಬಿಡಿಭಾಗ ಪೂರೈಸುವವರನ್ನು ಸಾಲದ ಸುಳಿಯಲ್ಲಿ ಸಿಲುಕಿಸಿವೆ.

ಬಿಡಿಭಾಗ ಸರಬರಾಜು ವಹಿವಾಟು ನಡೆಯುವುದು ಸಂಪೂರ್ಣ ಸಾಲದ ವ್ಯವಹಾರದ ಮೂಲಕ. ಗಾರ್ಮೆಂಟ್ಸ್‌ ಉದ್ದಿಮೆ ಚೆನ್ನಾಗಿ ನಡೆಯುತ್ತಿದ್ದಾಗ ಈ ವಹಿವಾಟು ಕೂಡ ಸರಾಗವಾಗಿಯೇ ನಡೆಯತ್ತಿತ್ತು. ಲಾಕ್‌ಡೌನ್ ನಂತರ ಎಲ್ಲವೂ ತಲೆಕೆಳಗಾಗಿದೆ.

‘ನಾನು ಸುಮಾರು 150 ಗಾರ್ಮೆಂಟ್ಸ್‌ ಕಾರ್ಖಾನೆಗಳಿಗೆ ಬಿಡಿಭಾಗ ಪೂರೈಸುತ್ತಿದ್ದೆ. ಇವುಗಳಲ್ಲಿ 40 ರಿಂದ 50 ಗಾರ್ಮೆಂಟ್ಸ್‌ ಕಾರ್ಖಾನೆಗಳು ಇನ್ನೂ ಬಾಗಿಲು ತೆರೆದಿಲ್ಲ. ಒಬ್ಬೊಬ್ಬರಿಂದಲೂ ₹50 ಸಾವಿರದಿಂದ ₹3 ಲಕ್ಷ ತನಕ ಸಾಲ ಬಾಕಿ ಉಳಿದುಕೊಂಡಿದೆ. ಕನಿಷ್ಠ ₹40 ಲಕ್ಷ ಬಾಕಿ ಇದೆ. ವಸೂಲಿ ಮಾಡುವುದು ಹೇಗೆ ಎಂದೇ ಗೊತ್ತಾಗುತ್ತಿಲ್ಲ’ ಎಂದು ಗಾರ್ಮೆಂಟ್ಸ್‌ ಕಾರ್ಖಾನೆಗಳಿಗೆ ಬಿಡಿಭಾಗ ಪೂರೈಸುವ ರಮೇಶ್ ಪರಿಸ್ಥಿತಿ ವಿವರಿಸಿದರು.

ಮೊದಲ ಲಾಕ್‌ಡೌನ್ ವೇಳೆಯಲ್ಲೇ ಯಂತ್ರಗಳನ್ನು ಮಳಿಗೆಯಲ್ಲೇ ಬಿಟ್ಟು ಹೋದವರು ವಾಪಸ್ ಬರಲಿಲ್ಲ. ಪೊಲೀಸರ ಸಮ್ಮುಖದಲ್ಲೇ ಬಾಗಿಲು ತೆಗೆಸಿ ಕಟ್ಟಡಗಳ ಮಾಲೀಕರು ಹೊಲಿಗೆ ಯಂತ್ರಗಳನ್ನು ಮಾರಾಟ ಮಾಡಿ ಬಾಕಿ ಬಾಡಿಗೆಗೆ ಜಮಾ ಮಾಡಿಕೊಂಡಿದ್ದಾರೆ. ಈಗ ಗಾರ್ಮೆಂಟ್ಸ್ ಕಾರ್ಖಾನೆಯೇ ಇಲ್ಲವಾಗಿದ್ದು, ಯಾರ ಬಳಿ ಬಾಕಿ ವಸೂಲಿ ಮಾಡುವುದು ಎಂಬುದೇ ತಿಳಿಯುತ್ತಿಲ್ಲ ಎಂದರು.

‘ಲಾಕ್‌ಡೌನ್ ತೆರವಾದ ಬಳಿಕ ಆರಂಭವಾಗಿರುವ ಕಾರ್ಖಾನೆಗಳಿಗೆ ಬಿಡಿಭಾಗ ಪೂರೈಕೆ ಮಾಡುತ್ತಿದ್ದೇವೆ. ಆದರೆ, ಈ ಹಿಂದಿನಂತೆ ಯಾರಿಗೂ ಸಾಲ ನೀಡುತ್ತಿಲ್ಲ. ಸಾಲ ನೀಡುವ ಸ್ಥಿತಿಯಲ್ಲೂ ನಾವಿಲ್ಲ. ಆಗಿರುವ ನಷ್ಟ ಪರಿಹಾರಿಸಿಕೊಳ್ಳಲು ಯಾವುದೇ ದಾರಿ ಕಾಣಿಸುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.


ಅಂಕಿ–ಅಂಶ

950: ರಾಜ್ಯದಲ್ಲಿರುವ ಗಾರ್ಮೆಂಟ್ಸ್‌ ಕಾರ್ಖಾನೆಗಳ ಸಂಖ್ಯೆ

776: ಬೆಂಗಳೂರಿನಲ್ಲಿ ಇರುವ ಗಾರ್ಮೆಂಟ್ಸ್‌ ಕಾರ್ಖಾನೆಗಳು

4 ಲಕ್ಷ: ರಾಜ್ಯದ ಗಾರ್ಮೆಂಟ್ಸ್‌ ಕಾರ್ಖಾನೆಗಳಲ್ಲಿ ಇರುವ ಒಟ್ಟು ಕಾರ್ಮಿಕರ ಸಂಖ್ಯೆ

3 ಲಕ್ಷ: ಬೆಂಗಳೂರಿನ ಗಾರ್ಮೆಂಟ್ಸ್‌ ಕಾರ್ಖಾನೆಗಳಲ್ಲಿರುವ ನೌಕರರು

50 ಸಾವಿರ: ಲಾಕ್‌ಡೌನ್ ವೇಳೆ ಊರಿಗೆ ಹೋಗಿ ವಾಪಸ್ ಬಾರದ ಕಾರ್ಮಿಕರು

***

ಮೊದಲನೇ ಲಾಕ್‌ಡೌನ್ ವೇಳೆ ಮನೆಯಲ್ಲಿದ್ದ ಕಾರ್ಮಿಕರಿಗೆ ಕಾರ್ಖಾನೆಗಳು ವೇತನ ಪಾವತಿಸಿದವು. ಎರಡನೇ ಅವಧಿಯಲ್ಲಿ ಯಾವುದೇ ಕಾರ್ಮಿಕರಿಗೆ ಬಾಕಿ ವೇತನ ಪಾವತಿಸಲಿಲ್ಲ. ಸರ್ಕಾರ ಕನಿಷ್ಠ ವೇತನವನ್ನೂ ಹೆಚ್ಚಿಸುತ್ತಿಲ್ಲ
- ಕೆ.ಆರ್‌.ಜಯರಾಂ, ಗಾರ್ಮೆಂಟ್ ಆ್ಯಂಡ್ ಟೆಕ್ಸ್‌ಟೈಲ್ ವರ್ಕರ್ಸ್ ಯೂನಿಯನ್‌ನ ಸಲಹೆಗಾರ

ಲಾಕ್‌ಡೌನ್ ವೇಳೆ ಊರಿಗೆ ಹೋಗಿದ್ದವರಲ್ಲಿ ಕೆಲವರು ಇನ್ನೂ ವಾಪಸ್ ಬಂದಿಲ್ಲ. ಸದ್ಯ ಕಾರ್ಮಿಕರ ಕೊರತೆ ಇದೆ. ದೊಡ್ಡ ಕಂಪನಿಗಳು ಮನೆ–ಮನೆಗಳಿಗೆ ಕರಪತ್ರ ಹಂಚಿ ಕಾರ್ಮಿಕರನ್ನು ಕೆಲಸಕ್ಕೆ ಕರೆಯುತ್ತಿದ್ದಾರೆ
- ಗುರುಲಿಂಗಪ್ಪ(ರಾಜು), ಗಾರ್ಮೆಂಟ್ಸ್‌ ಕಾರ್ಖಾನೆ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.