ADVERTISEMENT

ಪ್ರಜ್ವಲ್ ಪ್ರಕರಣ | ತುಟಿ ಬಿಚ್ಚದ ಬಿಜೆಪಿ ನಾಯಕಿಯರು: ಪುಷ್ಪಾ ಅಮರನಾಥ್ ಟೀಕೆ

​ಪ್ರಜಾವಾಣಿ ವಾರ್ತೆ
Published 3 ಮೇ 2024, 14:15 IST
Last Updated 3 ಮೇ 2024, 14:15 IST
ಪುಷ್ಪಾ ಅಮರನಾಥ್
ಪುಷ್ಪಾ ಅಮರನಾಥ್   

ರಾಯಚೂರು: ‘ನೇಹಾ ಕೊಲೆ ಪ್ರಕರಣವನ್ನು ರಾಜಕೀಯಕ್ಕೆ ಎಳೆದ ಬಿಜೆಪಿಯವರು ನೂರಾರು ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ ಪ್ರಜ್ವಲ್ ರೇವಣ್ಣನ ಬಗ್ಗೆ ಮಾತನಾಡುತ್ತಿಲ್ಲ. ಬಿಜೆಪಿ ಮಹಿಳಾ ನಾಯಕಿಯರೂ ತುಟಿ ಬಿಚ್ಚುತ್ತಿಲ್ಲ’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಟೀಕಿಸಿದರು.

‘ರಾಜ್ಯ ಸರ್ಕಾರ ನೇಹಾ ಕೊಲೆ ಆರೋಪಿಯನ್ನು ಬಂಧಿಸಿ ತನಿಖೆಗೆ ಆದೇಶ ಮಾಡಿದೆ. ಆದರೆ ಬಿಜೆಪಿ ನಾಯಕರು ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಂಡರು’ ಎಂದು ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಆರೋಪಿಸಿದರು.

‘ಅನೇಕ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ನಡೆಸಿದ್ದಾನೆ ಎಂದು ಬಿಜೆಪಿ ಮುಖಂಡ ದೇವರಾಜೇಗೌಡ ಅವರು ಗೃಹ ಮಂತ್ರಿ ಅಮಿತ್ ಶಾ ಹಾಗೂ ಪ್ರಧಾನಿ ಮೋದಿಗೆ ಪತ್ರ ಬರೆದರೂ ಪ್ರಜ್ವಲ್‌ಗೆ ಟಿಕೆಟ್ ನೀಡಿ ಅವರ ಪರ ಮತ ಯಾಚನೆ ಮಾಡಿ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ. ರಾಷ್ಟ್ರಮಟ್ಟದಲ್ಲಿ ಪ್ರಕರಣದ ಕುರಿತು ಚರ್ಚೆಯಾಗುತ್ತಿದ್ದರೂ ಬಿಜೆಪಿಯ ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ ಸ್ಮೃತಿ ಇರಾನಿ ತುಟಿ ಬಿಚ್ಚಿಲ್ಲ. ಇವರು ಮಹಿಳಾ ಸಮಾಜಕ್ಕೆ ಕಳಂಕಿತರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ADVERTISEMENT

‘ಪ್ರಧಾನಿ ಮೋದಿಯವರು 10 ವರ್ಷದ ಆಡಳಿತದಲ್ಲಿ ಬೆಲೆ ಏರಿಕೆ, ಭ್ರಷ್ಟಾಚಾರ ಮಾಡಿದ್ದಾರೆ. ಹೇಳಿಕೊಳ್ಳುವಂಥ ಕೆಲಸ ಮಾಡಿಲ್ಲ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಕದ್ದು ಮೋದಿ ಗ್ಯಾರಂಟಿ ಎಂದು ಪ್ರಚಾರ ಪಡೆಯುತ್ತಿದ್ದಾರೆ’ ಎಂದರು.

‘ಮಂಗಳ ಸೂತ್ರ, ಹಿಂದೂ–ಮುಸ್ಲಿಂ, ಮಂದಿರ–ಮಸೀದಿಯ ಹೆಸರಲ್ಲಿ ವಿವಾದ ಎಬ್ಬಿಸಿ ಮತ ಕೇಳುತ್ತಿದ್ದಾರೆ. ಚೊಂಬು ನೀಡಿದ ಬಿಜೆಪಿ ಬೇಕೋ, ಗ್ಯಾರಂಟಿ ಕೊಟ್ಟ ಕಾಂಗ್ರೆಸ್ ಬೇಕೋ ಎನ್ನುವುದನ್ನು ರಾಜ್ಯದ ಜನರು ತೀರ್ಮಾನಿಸಬೇಕಿದೆ’ ಎಂದು ಕೈಯಲ್ಲಿ ಚೊಂಬು, ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಪ್ರದರ್ಶಿಸಿದರು.

‘ನಿರುದ್ಯೋಗ, ಬೆಲೆ ಏರಿಕೆ, ನೋಟ್ ಬ್ಯಾನ್‌ನಿಂದ ತತ್ತರಿಸಿ ಅನೇಕರು ಸಾವನ್ನಪ್ಪಿದ್ದು, ಇದರಿಂದ ಲಕ್ಷಾಂತರ ಜನ ತಾಳಿ ಕಳೆದುಕೊಂಡಿದ್ದಾರೆ. ಇದಕ್ಕೆಲ್ಲ ಪ್ರಧಾನಮಂತ್ರಿ ಮೋದಿಯವರ ಅವೈಜ್ಞಾನಿಕ ನೀತಿಯೇ ಕಾರಣ’ ಎಂದು ದೂರಿದರು.

‘ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ ಆಡಳಿತ ವಿರೋಧಿ ಅಲೆಯಿಂದಾಗಿ ಸೋಲು ಅನುಭವಿಸಲಿದ್ದಾರೆ. ಅಧಿಕಾರವಿದ್ದಾಗ ಜನರ ಸಮಸ್ಯೆ ಆಲಿಸಿಲ್ಲ. ಹೊಸ ಯೋಜನೆ ತಂದಿಲ್ಲ. ಜಿಲ್ಲೆಯ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತಿಲ್ಲ. ಇಂಥ ಸಂಸದರ ಬದಲು ಐಎಎಸ್ ಅಧಿಕಾರಿಯಾಗಿ ಸೇವೆ ಮಾಡಿದ ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ ನಾಯಕ ಅವರಿಗೆ ಮತ ಹಾಕಿ ಅಭಿವೃದ್ಧಿಗೆ ಸಹಕರಿಸಬೇಕು’ ಎಂದು ಮನವಿ ಮಾಡಿದರು.

‘ರಾಜ್ಯದಿಂದ 26 ಬಿಜೆಪಿ ಸಂಸದರು ಆಯ್ಕೆಯಾದರೂ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ವಿರುದ್ಧ ಮಾತನಾಡಿಲ್ಲ. ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ಮಾತನಾಡುತ್ತಿಲ್ಲ. ಮೋದಿ ಅಲೆಯಲ್ಲಿ ಗೆಲುವು ಸಾಧಿಸಿದ್ದೆ ಇವರ ಸಾಧನೆ. ಭ್ರಷ್ಟ, ಮಹಿಳಾ ವಿರೋಧಿ ಬಿಜೆಪಿಗೆ ಈ ಬಾರಿ ಮತದಾರರು ಪಾಠ ಕಲಿಸಲಿದ್ದಾರೆ’ ಎಂದು ತಿಳಿಸಿದರು.

ಮಹಿಳಾ ಪದಾಧಿಕಾರಿಗಳಾದ ಜಯಲಕ್ಷ್ಮೀ, ಪದ್ಮಾ, ಶ್ರೀದೇವಿ ನಾಯಕ, ಮಂಜುಳಾ ಅಮರೇಶ, ಶಶಿಕಲಾ ಭೀಮರಾಯ ಹಾಗೂ ಶ್ರೀದೇವಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.