ADVERTISEMENT

ಪೆನ್‌ ಡ್ರೈವ್‌ ಪ್ರಕರಣ: ತುರ್ತು ವಿಚಾರಣೆಗೆ ನಕಾರ

​ಪ್ರಜಾವಾಣಿ ವಾರ್ತೆ
Published 14 ಮೇ 2024, 16:00 IST
Last Updated 14 ಮೇ 2024, 16:00 IST
<div class="paragraphs"><p>ಹೈಕೋರ್ಟ್</p></div>

ಹೈಕೋರ್ಟ್

   

ಬೆಂಗಳೂರು: ‘ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಪ್ರಕರಣವನ್ನು ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಲು ನಿರ್ದೇಶಿಸಬೇಕು’ ಎಂದು ಕೋರಿದ್ದ ಅರ್ಜಿಯ ತುರ್ತು ವಿಚಾರಣೆಗೆ ಹೈಕೋರ್ಟ್‌ ನಿರಾಕರಿಸಿದೆ.

ಈ ಸಂಬಂಧ ‘ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ’ (ಕೆಆರ್‌ಎಸ್‌ಪಿ) ಉಪಾಧ್ಯಕ್ಷ ಎಸ್‌.ಎಚ್‌.ಲಿಂಗೇಗೌಡ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ರಜಾಕಾಲದ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಮಂಗಳವಾರ ವಿಚಾರಣೆ ನಡೆಸಿದರು. 

ADVERTISEMENT

ಅರ್ಜಿದಾರರ ಪರ ವಕೀಲ ಜಿ.ಆರ್.ಮೋಹನ್, ‘ಹಲವು ಮಹಿಳೆಯರನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಸಾಕ್ಷ್ಯ ನಾಶ ಮಾಡಲಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಲು ರಾಜ್ಯ ಸರ್ಕಾರಕ್ಕೆ  ನಿರ್ದೇಶಿಸಬೇಕು’ ಎಂದು ಮನವಿ ಮಾಡಿದರು. ಆದರೆ, ಇದಕ್ಕೆ ನ್ಯಾಯಪೀಠ, ‘ತುರ್ತು ವಿಚಾರಣೆಯ ಅವಶ್ಯಕತೆ ಇಲ್ಲ’ ಎಂದು ಪ್ರತಿಕ್ರಿಯಿಸಿ ಮುಂದೂಡಿತು.

ಪ್ರಕರಣದಲ್ಲಿ ಗೃಹ ಇಲಾಖೆ, ರಾಜ್ಯ ಪೊಲೀಸ್ ಮಹಾ ನಿರ್ದೇಶಕ, ಎಸ್ಐಟಿ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ, ಹೊಳೆನರಸೀಪುರ ಟೌನ್ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್‌, ಬಿಜೆಪಿ ಮುಖಂಡ ಹಾಗೂ ವಕೀಲ ಜಿ.ದೇವರಾಜೇಗೌಡ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ಏನಿದು ಅರ್ಜಿ?: ಪ್ರಕರಣ ಸಂಬಂಧ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಕೆಆರ್‌ಎಸ್‌ ದೂರು ದಾಖಲಿಸಿತ್ತು. ಹೊಳೆನರಸೀಪುರ ಪೊಲೀಸರು, ‘ಈಗಾಗಲೇ ದೂರು ದಾಖಲಾಗಿದ್ದು, ಮತ್ತೊಂದು ದಾಖಲಿಸಿಕೊಳ್ಳುವುದಿಲ್ಲ’ ಎಂಬ ಹಿಂಬರಹ ನೀಡಿದ್ದರು. ‘ಈ ಹಿಂಬರಹ ರದ್ದುಪಡಿಸಿ ದೂರು ದಾಖಲಿಸಲು ಪೊಲೀಸರಿಗೆ ನಿರ್ದೇಶಿಸಬೇಕು’ ಎಂದು ಕೋರಿ ಕೆಆರ್‌ಎಸ್‌ಪಿ ಈ ಅರ್ಜಿ ಸಲ್ಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.