ADVERTISEMENT

ಮಗ ಸಾಯಲೆಂದೇ ವಿದೇಶಕ್ಕೆ ಕಳಿಸಿದ್ದೀರಾ: ಸಿಎಂ ಸಿದ್ದರಾಮಯ್ಯಗೆ ಎಚ್‌ಡಿಕೆ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 25 ಮೇ 2024, 8:25 IST
Last Updated 25 ಮೇ 2024, 8:25 IST
ಎಚ್‌.ಡಿ.ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ
ಎಚ್‌.ಡಿ.ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ   

ಬೆಂಗಳೂರು: ʼನಿಮ್ಮ ಮನೆಯಲ್ಲೂ ಒಂದು ಘಟನೆ ನಡೆದಿದೆ. ಆಗ ಮಗ ಸಾಯಲೆಂದೇ ನೀವೇ ವಿದೇಶಕ್ಕೆ ಕಳಿಸಿದ್ದಿರಾʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.

ʼಪ್ರಜ್ವಲ್‌ ರೇವಣ್ಣ ಅವರನ್ನು ಎಚ್.ಡಿ. ʼದೇವೇಗೌಡರೇ ವಿದೇಶಕ್ಕೆ ಕಳಿಸಿದ್ದಾರೆ’ ಎಂಬ ಸಿದ್ದರಾಮಯ್ಯ ಹೇಳಿಕೆ ಕುರಿತು ಸುದ್ದಿಗಾರರಿಗೆ ಶನಿವಾರ ಪ್ರತಿಕ್ರಿಯಿಸಿದ ಅವರು, ʼಯಾರಿಗೆ ಆದರೂ ನೋವು, ನೋವೆ. ಮಗ ಸಾಯಲಿ ಎಂದೇ ವಿದೇಶಕ್ಕೆ ಕಳಿಸಿದ್ದಿರಿ, ಮಗನ ಸಾವಿಗೆ ನೀವೇ ಕಾರಣವಾ? ಎನ್ನಬಹುದೆ’ ಎಂದು ಕೇಳಿದರು.

ರಾಜತಾಂತ್ರಿಕ ಪಾಸ್ ಪೋರ್ಟ್ ಬಗ್ಗೆ ಇವರೆಲ್ಲಾ ಮಾತನಾಡುತ್ತಿದ್ದಾರೆ. ಆದರೆ ಇವರಿಗೆ ಕಾನೂನಿನ ತಿಳಿವಳಿಕೆಯೇ ಇಲ್ಲ. ಈಗ ಪ್ರಜ್ವಲ್ ವಾಪಸ್ ಕರೆದುಕೊಂಡು ಬರಲು ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದು ಮಾಡುವಂತೆ ಕೋರಿ ಪತ್ರ ಬರೆದಿದ್ದಾರೆ. ತಕ್ಷಣಕ್ಕೆ ಅದು ಸಾಧ್ಯವಿಲ್ಲ ಎಂದು ಹೇಳಿದರು.

ADVERTISEMENT

ದೇವೇಗೌಡರ ಬಗ್ಗೆ ತಿಳಿದಿಲ್ಲವೆ?:

ಈ ಪ್ರಕ್ರಿಯೆಗಳು ತಡ ಆಗಬಹುದು ಎನ್ನುವ ಕಾರಣಕ್ಕೆ ತಕ್ಷಣ ವಾಪಸ್‌ ಬಂದು ತನಿಖೆಗೆ ಹಾಜರಾಗುವಂತೆ ಪ್ರಜ್ವಲ್‌ಗೆ ಸಂದೇಶ ಕೊಟ್ಟಿದ್ದೇವೆ. ದೇವೇಗೌಡರು ಕೂಡ ಕೊನೆಯ ಎಚ್ಚರಿಕೆ ಕೊಟ್ಟಿದ್ದಾರೆ. ಆದರೆ ದೇವೇಗೌಡರು ಮಾಧ್ಯಮದ ಮೂಲಕ ನೀಡಿದ ಎಚ್ಚರಿಕೆ ಕುರಿತು ಸಿದ್ದರಾಮಯ್ಯ‌ ಹಗುರವಾಗಿ ಮಾತನಾಡಿದ್ದಾರೆ. ದೀರ್ಘ ಕಾಲ ದೇವೇಗೌಡರ ಜತೆ ಇದ್ದ ಸಿದ್ದರಾಮಯ್ಯ ಅವರಿಗೆ ಅವರು ಏನು ಎಂಬುದು ಗೊತ್ತಿಲ್ಲವೆ ಎಂದು ಪ್ರಶ್ನಿಸಿದರು.

ನಿಮ್ಮ ಕುಟುಂಬಕ್ಕೂ ಇದನ್ನು ಅನ್ವಯಿಸಿಕೊಂಡು ನೋಡಿ. ಆ ನೋವು ಏನು ಎನ್ನುವುದು ಗೊತ್ತಾಗುತ್ತದೆ. ನಿಮಗೆ ನಾಚಿಕೆ ಆಗುವುದಿಲ್ಲವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಲ್ಲಾಳಿ ಜತೆ ಮಾತನಾಡಿದ್ದು ಏಕೆ?:

ʼಸಿ.ಡಿ ಶಿವು ತನ್ನ ಪಾತ್ರ ಇಲ್ಲ ಎನ್ನುತ್ತಾರೆ. ಆದರೆ, ದಲ್ಲಾಳಿ ಶಿವರಾಮೇಗೌಡ ಜತೆ ಮಾತನಾಡಿದ್ದು ಏಕೆ? ದೇವರಾಜೇಗೌಡ, ಶಿವರಾಮೇಗೌಡ, ಡಿ.ಕೆ. ಶಿವಕುಮಾರ್‌ ಏಕೆ ಮಾತನಾಡಿದರು. ತನ್ನ ಪಾತ್ರವೇ ಇಲ್ಲ ಎನ್ನುವವರು ಏನಾದರೂ ಸಾಕ್ಷ್ಯ ಇದೆಯಾ ಎಂದು ಕೇಳಿದ್ದು ಏಕೆ’ ಎಂದು ಹರಿಹಾಯ್ದರು.

ಗೃಹ ಸಚಿವರು ತನಿಖೆ ನಿಷ್ಪಕ್ಷಪಾತವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ನಿಜವಾದ ಅಪರಾಧಿ ವಿರುದ್ಧ ಕ್ರಮ ಕೈಗೊಳ್ಳಲಿ. ನಮ್ಮದೇನೂ ತಕರಾರು ಇಲ್ಲ. ನಿಮಗೂ ತಂದೆ, ತಾಯಿ ಇದ್ದಾರೆ. ಒಡಹುಟ್ಟಿದ ಅಕ್ಕ, ತಂಗಿಯರಿದ್ದಾರೆ. ಅರ್ಥ ಮಾಡಿಕೊಳ್ಳಿ ಎಂದರು.

ಅಧಿಕಾರಿಗಳಿಗೆ ನಿಯಂತ್ರಣ ಇಲ್ಲ: ಚನ್ನಗಿರಿಯಲ್ಲಿ ಪೊಲೀಸ್‌ ಠಾಣೆ ಮೇಲಿನ ದಾಳಿ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ʼಸರ್ಕಾರ ಮತ್ತು ಅಧಿಕಾರಿಗಳಿಗೆ ಯಾರೂ ಗೌರವ ಕೊಡುತ್ತಿಲ್ಲ. ಪೊಲೀಸ್‌ ಅಧಿಕಾರಿಗಳನ್ನು ಆ ರೀತಿ ಬಳಸಿಕೊಳ್ಳುತ್ತಿರುವುದರಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ಈ ಸರ್ಕಾರದ ಮೇಲೆ ಅಧಿಕಾರಿಗಳು, ಜನತೆ ಇಬ್ಬರಿಗೂ ವಿಶ್ವಾಸವಿಲ್ಲ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.