ADVERTISEMENT

ಪ್ರಜ್ವಲ್ ಪ್ರಕರಣ: ಭವಾನಿ ರೇವಣ್ಣಗೆ ನಿರೀಕ್ಷಣಾ ಜಾಮೀನು ನೀಡಿದ ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 18 ಜೂನ್ 2024, 6:33 IST
Last Updated 18 ಜೂನ್ 2024, 6:33 IST
<div class="paragraphs"><p>ಭವಾನಿ ರೇವಣ್ಣ </p></div>

ಭವಾನಿ ರೇವಣ್ಣ

   

ಬೆಂಗಳೂರು: ಮಾಜಿ ಸಂಸದ ‍‍ಪ್ರಜ್ವಲ್‌ ರೇವಣ್ಣ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಸಂತ್ರಸ್ತೆಯೊಬ್ಬರ ಅಪಹರಣದ ಆರೋಪಕ್ಕೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್‌ ತಾಯಿ ಭವಾನಿ ರೇವಣ್ಣ ಅವರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಈ ಕುರಿತಂತೆ ಅರ್ಜಿ ಮೇಲಿನ ಕಾಯ್ದಿರಿಸಿದ್ದ ಆದೇಶವನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ಪೀಠದಲ್ಲಿದ್ದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ಪ್ರಕಟಿಸಿತು.

ADVERTISEMENT

‘ಮಹಿಳೆಯರ ರಕ್ಷಣೆ ವಿಚಾರದಲ್ಲಿ ಅವರನ್ನು ಅನಗತ್ಯವಾಗಿ ವಶಕ್ಕೆ ಪಡೆಯುವ ಅಗತ್ಯವಿಲ್ಲ. ಆದಾಗ್ಯೂ ಅವರನ್ನು ತನಿಖೆಗಾಗಿ ಮೈಸೂರು ಮತ್ತು ಹಾಸನ ಹಾಗೂ ಅಗತ್ಯವಿದ್ದ ಕಡೆ ಕರೆದುಕೊಂಡು ಹೋಗಬಹುದಾಗಿದೆ. ಈಗಾಗಲೇ ಅರ್ಜಿದಾರರು ತನಿಖೆಗೆ ಸಹಕಾರ ನೀಡಿದ್ದಾರೆ. ಅವರಿಗೆ ತನಿಖೆಯ ವೇಳೆ 85 ಪ್ರಶ್ನೆಗಳನ್ನು ಕೇಳಲಾಗಿದೆ. ಅವರು ಎಲ್ಲವಕ್ಕೂ ಉತ್ತರಿಸಿದ್ದಾರೆ. ಪೊಲೀಸರು ಕೇಳಿದ ರೀತಿಯಲ್ಲೇ ಉತ್ತರಿಸಬೇಕು ಎಂದು ಹೇಳಲಾಗುವುದಿಲ್ಲ’ ಎಂದು ನ್ಯಾಯಪೀಠ ಹೇಳಿದೆ.

‘ಸಾಮಾನ್ಯ ಜನರು ಮಾಧ್ಯಮಗಳನ್ನು ಗಮನಿಸಿ ಚರ್ಚೆ ನಡೆಸುತ್ತಾರೆ. ಆದರೆ, ಈ ಬಗ್ಗೆ ಯಾರೂ ನಿರ್ಧಾರ ಮಾಡುವುದಕ್ಕೆ ಸಾಧ್ಯವಿಲ್ಲ ಪತ್ರಿಕೆಗಳನ್ನು ನೋಡಿ ನಾವು ಆದೇಶ ನೀಡಲಾಗದು. ನಾಗರಿಕ ಸಮಾಜ ಸ್ವಲ್ಪ ಸಂಯಮ ಪ್ರದರ್ಶನ ಮಾಡಬೇಕು’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

‘ಸ್ತ್ರೀಯರು ಈ ರೀತಿಯ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಅಂಶಗಳಿರುವಾಗ ವಾರ್ತಾ ಪತ್ರಿಕೆಗಳು, ಎಲೆಕ್ಟ್ರಾನಿಕ್ ಮಾಧ್ಯಮಗಳು ಸಂಯಮದಿಂದ ಇರಬೇಕಾಗುತ್ತದೆ. ಈಗಲೇ ಅಪರಾಧಿ ಎಂದರೆ ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆಯಾಗಲಿದೆ. ಮಾಧ್ಯಮಗಳ ವಿಚಾರಣೆ ಪರಿಗಣಿಸಲಾಗದು’ ಎಂಬ ಸುಪ್ರೀಂಕೋರ್ಟ್ ತೀರ್ಪನ್ನು ನ್ಯಾಯಪೀಠ ಉಲ್ಲೇಖಿಸಿದೆ.

ಏನಿದು ಪ್ರಕರಣ?: ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪದ ಪ್ರಕರಣದಲ್ಲಿ ಸಂತ್ರಸ್ತೆಯನ್ನು ಅಪಹರಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಪ್ರಕರಣದ ಮೊದಲ ಆರೋಪಿ ಎಚ್‌.ಡಿ.ರೇವಣ್ಣ ಬಂಧನಕ್ಕೊಳಗಾಗಿದ್ದರು. ನಂತರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಪ್ರಕರಣದಲ್ಲಿ ಭವಾನಿ ಅವರ ಹೆಸರೂ ಕೇಳಿ ಬಂದ ಕಾರಣ ಭವಾನಿ ನಿರೀಕ್ಷಣಾ ಜಾಮೀನು ಕೋರಿದ್ದರು. ಅವರನ್ನು ಬಂಧಿಸದಂತೆ ಹೈಕೋರ್ಟ್‌ನ ಜನಪ್ರತಿನಿಧಿಗಳ ವಿಶೇಷ ನ್ಯಾಯಪೀಠ ಮಧ್ಯಂತರ ಜಾಮೀನು ನೀಡಿತ್ತು. ತನಿಖಾಧಿಕಾರಿ ಮುಂದೆ ಹಾಜರಾಗಿ ತನಿಖೆಗೆ ಸಹಕರಿಸುವಂತೆ ಇದೇ 7ರಂದು ಸೂಚಿಸಿತ್ತು.

ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯದ ಆರೋಪಕ್ಕೆ ಸಂಬಂಧಿಸಿದಂತೆ ಹೊಳೆನರಸೀಪುರ ಟೌನ್‌ ಪೊಲೀಸ್ ಠಾಣೆಯಲ್ಲಿ 2024ರ ಏಪ್ರಿಲ್ 28 ರಂದು ಪ್ರಕರಣ ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.