ADVERTISEMENT

ಶಿಕ್ಷೆ ಆಗಲಿ ಎನ್ನುವವರೇ, ಆರೋಪಿಯ ರಕ್ಷಣೆಗೆ ನಿಂತಿದ್ದಾರೆ: HDK ಕಾಲೆಳೆದ ಸಿಎಂ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಮೇ 2024, 11:06 IST
Last Updated 3 ಮೇ 2024, 11:06 IST
ಸಿದ್ದರಾಮಯ್ಯ ಮತ್ತು ಎಚ್.ಡಿ. ಕುಮಾರಸ್ವಾಮಿ
ಸಿದ್ದರಾಮಯ್ಯ ಮತ್ತು ಎಚ್.ಡಿ. ಕುಮಾರಸ್ವಾಮಿ   

ಬೆಂಗಳೂರು: ಅತ್ಯಾಚಾರ, ಕೊಲೆ ಬೆದರಿಕೆಯಂತಹ ಗಂಭೀರ ಸ್ವರೂಪದ ಪ್ರಕರಣಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ಅವರ ರಕ್ಷಣೆಗೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ವಕೀಲರ ಜೊತೆ ಚರ್ಚೆ ನಡೆಸಿರುವುದು ನಾಚಿಕೆಗೇಡು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿಬಂದಿರುವ ಅತ್ಯಾಚಾರ ಪ್ರಕರಣ ಕುರಿತು ‘ಎಕ್ಸ್‌’ನಲ್ಲಿ ಸರಣಿ ಪೋಸ್ಟ್ ಮಾಡಿರುವ ಅವರು, ‘ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎನ್ನುವವರೂ ಅವರೇ, ಆರೋಪಿಯ ರಕ್ಷಣೆಗೆ ನಿಂತಿರುವವರೂ ಅವರೇ’ ಎಂದು ಕುಮಾರಸ್ವಾಮಿ ವಿರುದ್ಧ ಗುಡುಗಿದ್ದಾರೆ.

‘ಅಂತರರಾಷ್ಟ್ರೀಯ ಪ್ರಯಾಣ ಮಾಡುವಾಗ ಎಲ್ಲರ ಪಾಸ್‌ಪೋರ್ಟ್, ವೀಸಾ ಚೆಕ್ ಆಗುತ್ತದೆ. ಕೇಂದ್ರ ಬಿಜೆಪಿ ಸರ್ಕಾರಕ್ಕೆ ತಿಳಿಯದಂತೆ ಯಾರೂ ದೇಶದ ಹೊರಗೆ ಹೋಗಲು ಸಾಧ್ಯವಿಲ್ಲ. ಪ್ರಜ್ವಲ್ ರೇವಣ್ಣ ದುಬೈ ಬಿಟ್ಟು ಇನ್ನು ಯಾವುದೇ ದೇಶದಲ್ಲಿದ್ದರೂ ಕರೆತರುತ್ತೇವೆ. ಅವರು ದೇಶಕ್ಕೆ ಬರಲೇಬೇಕು. ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ಅನ್ನು ರದ್ದು ಮಾಡಲು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದೇನೆ. ಪ್ರಜ್ವಲ್ ರೇವಣ್ಣ ಅವರ ಕೃತ್ಯದ ಬಗ್ಗೆ ತಿಳಿದೂ ಬಿಜೆಪಿ ಪಕ್ಷ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದೆ’ ಎಂದು ಕುಟುಕಿದ್ದಾರೆ.

ADVERTISEMENT

‘ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯರಿಗೆ ರಕ್ಷಣೆ ನೀಡಲು ಸೂಚಿಸಿದ್ದೇನೆ. ವಿಪರ್ಯಾಸವೆಂದರೆ ಕೇಂದ್ರ ಬಿಜೆಪಿ ಸರ್ಕಾರ ಆರೋಪಿಯ ರಕ್ಷಣೆಗೆ ನಿಂತಿದೆ. ತಮಗೂ ರೇವಣ್ಣನ ಕುಟುಂಬಕ್ಕೂ ಸಂಬಂಧವಿಲ್ಲ ಎನ್ನುತ್ತಿದ್ದ ಕುಮಾರಸ್ವಾಮಿ ಹಾಗೂ ದೇವೇಗೌಡರು ತಮ್ಮ ಮನೆಗೆ ವಕೀಲರನ್ನು ಕರೆಸಿ ಚರ್ಚೆ ಮಾಡಿದ್ದಾರೆ. ಚುನಾವಣಾ ಪ್ರಚಾರಕ್ಕಾಗಿ ಹೋದಾಗ ನಾನು ಬೇರೆಯಲ್ಲ, ಪ್ರಜ್ವಲ್ ರೇವಣ್ಣ ಬೇರೆಯಲ್ಲ ಎಂದಿದ್ದರು. ರಾಜಕೀಯ ಹಾಗೂ ಪಾಪ ಕೃತ್ಯಗಳನ್ನು ಅವರೆಲ್ಲರೂ ಒಟ್ಟಿಗೆ ಮಾಡುತ್ತಾರೆ’ ಎಂದು ಕಿಡಿಕಾರಿದ್ದಾರೆ.

‘ಹುಬ್ಬಳ್ಳಿಯಲ್ಲಿ ನಡೆದ ನೇಹಾ ಕೊಲೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜಕೀಯ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕೊಲೆ ನಡೆದ ದಿನವೇ ಆರೋಪಿಯನ್ನು ಬಂಧಿಸಲಾಗಿದೆ. ಪ್ರಕರಣವನ್ನು ಸಿಐಡಿಗೆ ವಹಿಸಿ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಲಾಗಿದೆ. ಕಾನೂನಿನ ಪ್ರಕಾರ ಕಠಿಣ ಶಿಕ್ಷೆಗೆ ಗುರಿಯಾಗಿಸಲು ಪ್ರಯತ್ನಿಸಲಾಗಿದೆ. ನೊಂದ ಕುಟುಂಬಕ್ಕೆ ನ್ಯಾಯ ಕೊಡಿಸಲು ಒಂದು ಸರ್ಕಾರವಾಗಿ ನಾವು ನಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದೇವೆ. ಸುಳ್ಳು ಸುಳ್ಳೇ ಲವ್ ಜಿಹಾದ್ ಎನ್ನುವ ಅಮಿತ್ ಶಾ ಮಣಿಪುರದಲ್ಲಿ ಏನು ಕ್ರಮ ಕೈಗೊಂಡಿದ್ದಾರೆ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.