ADVERTISEMENT

ಪ್ರಜ್ವಲ್ ಪ್ರಕರಣ: ಸಾಹಿತಿಗಳ ಪತ್ರವನ್ನು ಗಂಭೀರವಾಗಿ ಪರಿಗಣಿಸುತ್ತೇವೆ –ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 15 ಮೇ 2024, 15:40 IST
Last Updated 15 ಮೇ 2024, 15:40 IST
ಜಿ. ಪರಮೇಶ್ವರ
ಜಿ. ಪರಮೇಶ್ವರ   

ಬೆಂಗಳೂರು: ‘ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಹಿತಿಗಳು ಮುಖ್ಯಮಂತ್ರಿಯವರಿಗೆ ಬರೆದಿರುವ ಪತ್ರವನ್ನು ಗಂಭೀರವಾಗಿ ಪರಿಗಣಿಸುತ್ತೇವೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.

ಈ ಕುರಿತು ಸುದ್ದಿಗಾರರ ಜತೆ ಬುಧವಾರ ಮಾತನಾಡಿದ ಅವರು, ‘ಸಾಹಿತಿಗಳು ಮುಖ್ಯಮಂತ್ರಿಯವರಿಗೆ ಬರೆದಿರುವ ಪತ್ರವನ್ನು ತರಿಸಿಕೊಂಡು ನೋಡುತ್ತೇನೆ. ಪತ್ರದಲ್ಲಿ ಉಲ್ಲೇಖಿಸಿರುವ ಸಂಗತಿಗಳ ಕುರಿತು ವಿಶೇಷ ತನಿಖಾ ತಂಡ (ಎಸ್‌ಐಟಿ) ಕೂಡ ಪರಿಗಣಿಸಲಿದೆ’ ಎಂದರು.

‘ಪೆನ್‌ ಡ್ರೈವ್‌ ಪ್ರಕರಣದ ಹಿಂದೆ ದೊಡ್ಡ ತಿಮಿಂಗಿಲ ಇದೆ’ ಎಂಬ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆ ಕುರಿತು ಕೇಳಿದಾಗ, ‘ತಿಮಿಂಗಿಲ ಯಾರು ಎಂಬುದನ್ನು ಕುಮಾರಸ್ವಾಮಿ ಹೇಳಲಿ. ಅವರಿಗೆ ಗೊತ್ತಿದ್ದರೆ ಹೇಳದಿರುವುದು ದೊಡ್ಡ ತಪ್ಪು. ಅವರು ಮೊದಲು ದಾಖಲೆ ಕೊಡಲಿ, ಆ ಬಳಿಕ ತನಿಖೆ ನಡೆಸುತ್ತೇವೆ’ ಎಂದು ಹೇಳಿದರು.

ADVERTISEMENT

‘ಕುಮಾರಸ್ವಾಮಿ ಪ್ರತಿ ದಿನವೂ ಏನಾದರೂ ಹೇಳುತ್ತಿರುತ್ತಾರೆ. ದಾಖಲೆ ಕೊಡದೆ ಆರೋಪ ಮಾಡಿದರೆ ಹೇಗೆ? ಅವರು ದಾಖಲೆ ಕೊಟ್ಟರೆ ತನಿಖೆ ಮಾಡಿಸಬಹುದು’ ಎಂದರು.

ಪ್ರಜ್ವಲ್‌ ಮಾಹಿತಿಯಿಲ್ಲ: ಪ್ರಜ್ವಲ್‌ ರೇವಣ್ಣ ಎಲ್ಲಿದ್ದಾರೆ ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಮಾಹಿತಿ ಸಂಗ್ರಹಿಸಲು ಎಸ್‌ಐಟಿ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು.

ಕಾನೂನು ಪ್ರಕಾರ ಕ್ರಮ: ಸಾಹಿತಿಗಳ ಪತ್ರ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, ‘ಸುಮ್ಮನೆ ಪತ್ರ ಬರೆದರು ದೂರು ದಾಖಲಿಸಿಕೊಳ್ಳುವುದು ಕಷ್ಟ. ಎಸ್‌ಐಟಿ ಕಾನೂನು ‍ಪ್ರಕಾರವೇ ಕ್ರಮ ಜರುಗಿಸಬೇಕಾಗುತ್ತದೆ’ ಎಂದರು.

‘ಸಂತ್ರಸ್ತೆಯರಿಗೆ ನ್ಯಾಯ ದೊರಕಬೇಕು. ಆದರೆ, ಅವರ ಗುರುತು ಬಹಿರಂಗವಾಗದಂತೆಯೂ ಎಚ್ಚರಿಕೆ ವಹಿಸಬೇಕು. ಸಂತ್ರಸ್ತೆಯರನ್ನು ಬಹಿರಂಗವಾಗಿ ಕರೆತಂದು ತನಿಖೆ ನಡೆಸಲು ಆಗುವುದಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.