ADVERTISEMENT

ಲೈಂಗಿಕ ದೌರ್ಜನ್ಯ ಪ್ರಕರಣ: ರೇವಣ್ಣಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡದ ಕೋರ್ಟ್

​ಪ್ರಜಾವಾಣಿ ವಾರ್ತೆ
Published 4 ಮೇ 2024, 13:06 IST
Last Updated 4 ಮೇ 2024, 13:06 IST
<div class="paragraphs"><p>ಎಚ್.ಡಿ. ರೇವಣ್ಣ</p></div>

ಎಚ್.ಡಿ. ರೇವಣ್ಣ

   

ಬೆಂಗಳೂರು: ಮಹಿಳೆಯ ಮೇಲಿನ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಹೊಂದಿಕೊಂಡ ಕ್ರಿಮಿನಲ್ ಪ್ರಕರಣದಲ್ಲಿ; ಮಹಿಳೆಯೊಬ್ಬರ ಅಪಹರಣದ ಪ್ರತ್ಯೇಕ ಎಫ್ಐಆರ್‌ಗೆ ಸಂಬಂಧಿಸಿದಂತೆ ಹೊಳೆನರಸೀಪುರ ಶಾಸಕ‌ ಎಚ್.ಡಿ.ರೇವಣ್ಣ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರಾಕರಿಸಿದೆ.

ಈ ಕುರಿತ ಅರ್ಜಿಯನ್ನು ಮಧ್ಯಾಹ್ನ 3 ಗಂಟೆಯಿಂದ 4.30ರವರೆಗೂ ವಿಚಾರಣೆ ಅಲಿಸಿ ಕಾಯ್ದಿರಿಸಿದ್ದ ಆದೇಶವನ್ನು 'ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ'ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಸಂಜೆ 6.23ಕ್ಕೆ ಪ್ರಕಟಿಸಿದರು.

ADVERTISEMENT

ವಿಚಾರಣೆ ವೇಳೆ ರೇವಣ್ಣ ಪರ ಹೈಕೋರ್ಟ್‌ನ ಹಿರಿಯ ವಕೀಲ ಮೂರ್ತಿ ಡಿ.ನಾಯಕ್ ಅವರು, 'ಅರ್ಜಿದಾರ ರೇವಣ್ಣ ಅವರಿಗೆ ಜಾಮೀನು ನೀಡಬೇಕು. ಎಸ್ಐಟಿಯ ನಡೆ ಆತಂಕಕಾರಿ ಆಗಿರುವ ಕಾರಣ ರಕ್ಷಣೆ ಇಲ್ಲದೇ ಹೋದರೆ ಬಂಧಿಸುವ ಸಾಧ್ಯತೆ ಇದೆ' ಎಂದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್, 'ಆರೋಪಿ ಬಲಾಢ್ಯರಿದ್ದಾರೆ. ಅಪಹರಣಕ್ಕೆ ಒಳಗಾಗಿರುವ ಮಹಿಳೆಯ ರಕ್ಷಣೆ ನಮ್ಮ ಮೊದಲ ಆದ್ಯತೆ. ಇಂತಹ ಘಟನೆಗಳು ಬಿಹಾರ, ಉತ್ತರ ಪ್ರದೇಶದಲ್ಲಿ ನಡೆಯುತ್ತವೆ ಎಂದು ನಾವು ಕೇಳಿ ಬಲ್ಲೆವು. ಆದರೆ, ಇಂತಹ ಘಟನೆ ಕರ್ನಾಟಕದಲ್ಲಿ ಆಗಲು ಬಿಡುವುದಿಲ್ಲ. ಈಗಾಗಲೇ ಸಂತ್ರಸ್ತ ಮಹಿಳೆಯ ವಿಡಿಯೊ, ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಆದ್ದರಿಂದ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಬಾರದು' ಎಂದು ಮನವಿ ಮಾಡಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಾಧೀಶರು, ಮಧ್ಯಂತರ ನಿರೀಕ್ಷಣಾ ಜಾಮೀನು ಕೋರಿದ ಅರ್ಜಿಯನ್ನು ತಿರಸ್ಕರಿಸಿದರು. ಪ್ರಕರಣದ ಮುಖ್ಯ ವಿಚಾರಣೆಯನ್ನು ಇದೇ 6ಕ್ಕೆ ಮುಂದೂಡಿದರು.

ಅರ್ಜಿದಾರ ರೇವಣ್ಣ ಪರ ಹೈಕೋರ್ಟ್ ವಕೀಲ ಪವನ್ ಸಾಗರ್ ವಕಾಲತ್ತು ವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.