ADVERTISEMENT

ಲೈಂಗಿಕ ದೌರ್ಜನ್ಯ ಪ್ರಕರಣ: ದೇವೇಗೌಡರ ಮನೆಯಲ್ಲಿ ಎಚ್‌.ಡಿ.ರೇವಣ್ಣ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 4 ಮೇ 2024, 23:50 IST
Last Updated 4 ಮೇ 2024, 23:50 IST
ಎಚ್‌.ಡಿ.ರೇವಣ್ಣ
ಎಚ್‌.ಡಿ.ರೇವಣ್ಣ   

ಬೆಂಗಳೂರು: ‘ಅತ್ಯಾಚಾರ ಪ್ರಕರಣದ ಸಂತ್ರಸ್ತೆಯನ್ನು ಅಪಹರಿಸಿ, ಅಕ್ರಮ ಬಂಧನದಲ್ಲಿಟ್ಟು ಹಲ್ಲೆ ಮಾಡಿದ್ದರು’ ಎಂಬ ಆರೋಪದಡಿ ದಾಖಲಾಗಿರುವ ಪ್ರಕರಣದಲ್ಲಿ ಹೊಳೆನರಸೀಪುರ ಕ್ಷೇತ್ರದ ಜೆಡಿಎಸ್ ಶಾಸಕ ಎಚ್‌.ಡಿ.ರೇವಣ್ಣ (65) ಅವರನ್ನು ಎಸ್‌ಐಟಿ ಅಧಿಕಾರಿಗಳು ಶನಿವಾರ ಸಂಜೆ ಬಂಧಿಸಿದ್ದಾರೆ.

ಮೈಸೂರು ಜಿಲ್ಲೆಯ ಕೆ.ಆರ್. ನಗರ ಠಾಣೆಯಲ್ಲಿ ದಾಖಲಾಗಿದ್ದಪ್ರಕರಣದಲ್ಲಿ ಬಂಧನ ಭೀತಿಯಲ್ಲಿದ್ದಎಚ್‌.ಡಿ. ರೇವಣ್ಣ ಗುರುವಾರದಿಂದಲೇ ತಲೆಮರೆಸಿಕೊಂಡಿದ್ದರು. ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ತಂದೆ ಎಚ್‌.ಡಿ.ದೇವೇಗೌಡ ಅವರ ಪದ್ಮನಾಭನಗರ ಮನೆಯಲ್ಲಿ ರೇವಣ್ಣ ಆಶ್ರಯ ಪಡೆದುಕೊಂಡಿದ್ದರು.

ಈ ಬಗ್ಗೆ ಮಾಹಿತಿ ಕಲೆಹಾಕಿದ್ದ ಎಸ್‌ಐಟಿ ಅಧಿಕಾರಿಗಳ ತಂಡ, ಮನೆಗೆ ತೆರಳಿ ರೇವಣ್ಣ ಅವರನ್ನು ಸೆರೆ ಹಿಡಿದಿದೆ.

ADVERTISEMENT

ಅಪಹರಣ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಎಚ್‌.ಡಿ. ರೇವಣ್ಣ, ನ್ಯಾಯಾಲಯದ ತೀರ್ಪಿಗಾಗಿ ಕಾಯುತ್ತಿದ್ದರು. ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ್ದ ನ್ಯಾಯಾಲಯ, ಶನಿವಾರ ಸಂಜೆ 5.30ರೊಳಗೆ ಎಸ್ಐಟಿ ಮುಂದೆ ಹಾಜರಾಗುವಂತೆ ಗಡುವು ನೀಡಿ, ಆದೇಶವನ್ನು ಕಾಯ್ದಿರಿಸಿತ್ತು. ರೇವಣ್ಣ ಎಸ್ಐಟಿ ಮುಂದೆ ಹಾಜರಾಗಲಿಲ್ಲ. ಗಡುವು ಮುಗಿಯುತ್ತಿದ್ದಂತೆ ಕೋರ್ಟ್‌ ಹಾಲ್‌ಗೆ ಬಂದ ನ್ಯಾಯಾಧೀಶರು, ಜಾಮೀನು ಅರ್ಜಿಯನ್ನು ತಿರಸ್ಕರಿಸಿರುವುದಾಗಿ ಪ್ರಕಟಿಸಿದರು.

ಅದರ ಬೆನ್ನಲ್ಲೇ, ದೇವೇಗೌಡರ ಮನೆಗೆ ದೌಡಾಯಿಸಿದ ಎಸ್ಐಟಿ ಅಧಿಕಾರಿಗಳು ಬಾಗಿಲು ಬಡಿದರು. 15 ನಿಮಿಷ ಬಾಗಿಲು ತೆಗೆಯಲಿಲ್ಲ. ಬಳಿಕ, ರೇವಣ್ಣ ಅವರೇ ಬಾಗಿಲು ತೆರೆದು ಹೊರಬಂದರು. ತಕ್ಷಣವೇ, ಅವರನ್ನು ವಶಕ್ಕೆ ಪಡೆದ ತನಿಖಾ ತಂಡ, ಸಿಐಡಿ ಕಚೇರಿಗೆ ಆವರಣದಲ್ಲಿರುವ ಎಸ್ಐಟಿ ಕಚೇರಿಗೆ ಕರೆತಂದಿದೆ. ವೈದ್ಯಕೀಯ ಪರೀಕ್ಷೆ ಬಳಿಕ, ಅವರನ್ನು ನ್ಯಾಯಾಧೀಶರ ಮುಂದೆ ಭಾನುವಾರ ಬೆಳಿಗ್ಗೆ ಹಾಜರುಪಡಿಸುವ ಸಾಧ್ಯತೆ ಇದೆ. ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲು ಎಸ್‌ಐಟಿ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.  

‘ಕೆ.ಆರ್. ನಗರದ ಸಂತ್ರಸ್ತೆ, ಎಚ್‌.ಡಿ. ರೇವಣ್ಣ ಅವರ ಮನೆಯಲ್ಲಿ ಕೆಲಸಕ್ಕಿದ್ದರು. ಇದೇ ಮಹಿಳೆ ಮೇಲೆ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಬಲವಂತದಿಂದ ಅತ್ಯಾಚಾರ ಎಸಗಿದ್ದಾರೆಂಬ ಆರೋಪವಿದೆ. ಈ ಕೃತ್ಯದ ವಿಡಿಯೊಗಳು ಪೆನ್‌ಡ್ರೈವ್‌ನಲ್ಲಿ ಹಲವರಿಗೆ ಹಂಚಿಕೆಯಾಗಿವೆ. ಕೃತ್ಯಕ್ಕೆ ಒಪ್ಪದ ಮಹಿಳೆ, ತನ್ನನ್ನು ಬಿಟ್ಟುಬಿಡುವಂತೆ ಗೋಗರೆಯುವ ದೃಶ್ಯಗಳು ವಿಡಿಯೊದಲ್ಲಿವೆ’ ಎಂದು ಎಸ್‌ಐಟಿ ಮೂಲಗಳು
ಹೇಳಿವೆ.

‘ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊಗಳು ಹಂಚಿಕೆಯಾಗಿದ್ದವು. ಮಗ ಪ್ರಜ್ವಲ್‌ ರಕ್ಷಣೆಗೆ ಮುಂದಾಗಿದ್ದ ಎಚ್‌.ಡಿ.ರೇವಣ್ಣ ಹಾಗೂ ಇತರರು, ಸಂತ್ರಸ್ತೆ ಯನ್ನು ಏಪ್ರಿಲ್ 29ರಂದು ಅಪಹರಿಸಿದ್ದರು ಎಂಬುದಾಗಿ ಗೊತ್ತಾಗಿದೆ. ನಂತರ, ಹಲವು ಕಡೆಗಳಲ್ಲಿ ಅವರನ್ನು ಅಕ್ರಮ ಬಂಧನದಲ್ಲಿಟ್ಟಿದ್ದರು. ಹಲ್ಲೆ ಸಹ ಮಾಡಿದ್ದರು. ತನ್ನ ತಾಯಿಯನ್ನು ಅಪಹರಿಸಲಾಗಿದೆ ಎಂದು ಸಂತ್ರಸ್ತೆಯ ಪುತ್ರ ಕೆ.ಆರ್. ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣದಲ್ಲಿ ಸತೀಶ್ ಬಾಬಣ್ಣ ಎಂಬುವರನ್ನು ಬಂಧಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ ರೇವಣ್ಣ ಅವರನ್ನು ಬಂಧಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಭವಾನಿಗೂ ನೋಟಿಸ್ ಸಾಧ್ಯತೆ: ‘ಅಪಹರಣ ಕೃತ್ಯದಲ್ಲಿ ಎಚ್.ಡಿ. ರೇವಣ್ಣ ಅವರ ಪತ್ನಿ ಭವಾನಿ ಅವರೂ ಭಾಗಿಯಾಗಿರುವ ಮಾಹಿತಿ ಇದೆ. ಹೀಗಾಗಿ, ಅವರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸಲು ಚಿಂತನೆ ನಡೆಸಲಾಗುತ್ತಿದೆ’ ಎಂದು ಮೂಲಗಳು ಹೇಳಿವೆ.

ಪ್ರಜ್ವಲ್‌ಗಾಗಿ ಬ್ಲೂ ಕಾರ್ನರ್‌ ನೋಟಿಸ್?

ಹಲವು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿದ್ದು, ತಲೆಮರೆಸಿಕೊಂಡಿರುವ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಪತ್ತೆಗೆ ಸಿಬಿಐ ನೆರವಿನಲ್ಲಿ ‘ಬ್ಲೂ ಕಾರ್ನರ್‌ ನೋಟಿಸ್‌’ ಜಾರಿಗೊಳಿಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ಮುಂದಾಗಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳ ಜತೆ ಶನಿವಾರ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ತನಿಖೆಯಲ್ಲಿನ ಪ್ರಗತಿ ಕುರಿತು ಮಾಹಿತಿ ಪಡೆದರು. ಪ್ರಜ್ವಲ್‌ ಪತ್ತೆಗೆ ಮಾಹಿತಿ ಕೋರಿ ಸಿಬಿಐ ಮೂಲಕ ಬ್ಲೂ ಕಾರ್ನರ್‌ ನೋಟಿಸ್‌ ಜಾರಿಗೊಳಿಸುವುದಾಗಿ ಎಸ್‌ಐಟಿ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಸಚಿವಾಲಯ ಹೇಳಿದೆ.

‘ಪ್ರಜ್ವಲ್‌ ನಾಪತ್ತೆಯಾಗಿದ್ದು, ಪತ್ತೆಗಾಗಿ ಲುಕ್‌ ಔಟ್‌ ನೋಟಿಸ್‌ ಜಾರಿ ಗೊಳಿಸಲಾಗಿದೆ. ಬ್ಲೂ ಕಾರ್ನರ್‌ ನೋಟಿಸ್‌ ಜಾರಿಯಾದರೆ ತನಿಖೆಗೆ ಮತ್ತಷ್ಟು ವೇಗ ದೊರಕುತ್ತದೆ. ವಿಮಾನ ನಿಲ್ದಾಣಗಳಲ್ಲೇ ಬಂಧಿಸಿ ಕರೆತರಬಹುದು ಎಂಬ ಮಾಹಿತಿಯನ್ನು ಎಸ್‌ಐಟಿ ಹಂಚಿಕೊಂಡಿದೆ’ ಎಂದು ಮುಖ್ಯಮಂತ್ರಿ ಸಚಿವಾಲಯ ಹೇಳಿದೆ. ‘ಪ್ರಜ್ವಲ್‌ನನ್ನು ತ್ವರಿತವಾಗಿ ಬಂಧಿಸಬೇಕು. ಈ ಪ್ರಕರಣದ ತನಿಖೆಯಲ್ಲಿ ನಿರ್ಲಕ್ಷ್ಯ, ವಿಳಂಬ ಧೋರಣೆ ಅನುಸರಿಸಿದರೆ ಕಠಿಣ ಕ್ರಮ ಜರುಗಿಸ ಲಾಗುವುದು’ ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಎಚ್ಚರಿಕೆ ನೀಡಿದ್ದಾರೆ.

ರೇವಣ್ಣ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆದ ಕಾರಣ ಬಂಧಿಸಲಾಗಿದೆ. ಇದರಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ. ಕಾನೂನು ರೀತಿ ಕ್ರಮ ತೆಗೆದುಕೊಳ್ಳಲಾಗುತ್ತದೆ
ಸಿದ್ದರಾಮಯ್ಯ, ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.