ಬೆಂಗಳೂರು: 2019ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ನಟ ಪ್ರಕಾಶ್ ರೈ ಶನಿವಾರ ಪ್ರಕಟಿಸಿಕೊಂಡಿದ್ದಾರೆ.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೊಸ ವರ್ಷದ ಮೊದಲ ದಿನ ಘೋಷಿಸಿದ್ದ ಅವರು ಸ್ಪರ್ಧಿಸಲಿರುವ ಕ್ಷೇತ್ರದ ಮಾಹಿತಿ ಬಹಿರಂಗ ಪಡಿಸಿರಲಿಲ್ಲ. ಪ್ರಕಾಶ್ ರೈ, ಉಪೇಂದ್ರ, ರಜನಿಕಾಂತ್, ಕಮಲಹಾಸನ್, ಪವನ್ ಕಲ್ಯಾಣ್,...ಹೀಗೆ ದಕ್ಷಿಣ ಭಾರತದಲ್ಲಿ ಸಕ್ರಿಯ ರಾಜಕೀಯ ಪ್ರವೇಶಿಸುತ್ತಿರುವ ಚಿತ್ರರಂಗದ ಪ್ರಮುಖ ನಟರ ಸಂಖ್ಯೆ ಹೆಚ್ಚುತ್ತಿದ್ದೆ.
‘ಸ್ವತಂತ್ರ ಅಭ್ಯರ್ಥಿಯಾಗಿ ಬೆಂಗಳೂರು ಕೇಂದ್ರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದೇನೆ. ನನ್ನ ಹೊಸ ಪಯಣಕ್ಕೆ ಬೆಂಬಲ ಸೂಚಿಸಿದಕ್ಕೆ ಧನ್ಯವಾದಗಳು. ಶೀಘ್ರದಲ್ಲಿಯೇ ಹೆಚ್ಚಿನ ವಿವರಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಳ್ಳಲಿದ್ದೇನೆ...’ ಎಂದು ಜ.1ರಂದು ಟ್ವೀಟಿಸಿ ಲೋಕಸಭೆಯಲ್ಲಿಯೂ ಸಿಟಿಜನ್ಸ್‌ವಾಯ್ಸ್, ಜಸ್ಟ್‌ಆಸ್ಕಿಂಗ್ ಅಭಿಯಾನ ಗೋಚರಿಸುವ ವಿಶ್ವಾಸ ವ್ಯಕ್ತಪಡಿಸಿದ್ದರು.
ಪ್ರಕಾಶ್ ರೈ 2017ರ ನವೆಂಬರ್‌ನಲ್ಲಿ ಜಸ್ಟ್ ಆಸ್ಕಿಂಗ್ ಅಭಿಯಾನ ಹಮ್ಮಿಕೊಂಡಿದ್ದರು. ‘ಸಾಮಾಜಿಕ ಮಾಧ್ಯಮಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಸಲುವಾಗಿ ನಡೆಯುವ ಟ್ರೋಲ್ ಗೂಂಡಾಗಿರಿ ವಿರೋಧಿಸಿ ಜಸ್ಟ್ ಆಸ್ಕಿಂಗ್ ಎಂಬ ಪ್ರತಿಭಟನಾ ಸ್ವರೂಪದ ಅಭಿಯಾನ ಆರಂಭಿಸಿದ್ದೇನೆ’ ಎಂದು ಅವರು ಆಗ ತಿಳಿಸಿದ್ದರು. ಪ್ರಕಾಶ್ ರೈ ಅವರು ‘ಪ್ರಕಾಶ್ ರಾಜ್ ಫೌಂಡೇಷನ್’ ಮೂಲಕ ಸಮಾಜ ಸೇವಾ ಕ್ಷೇತ್ರದಲ್ಲೂ ತೊಡಗಿಕೊಂಡಿದ್ದಾರೆ. ಚಿತ್ರದುರ್ಗ ಸಮೀಪದ ಬಂಡ್ಲೋರಹಟ್ಟಿ ಗ್ರಾಮವನ್ನು ದತ್ತು ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.