ADVERTISEMENT

ಸೋಲಿನ ಹತಾಶೆಯಿಂದ ಕೀಳುಮಟ್ಟದ ಮಾತಾಡುತ್ತಿರುವ ಪ್ರಧಾನಿ ಮೋದಿ: ಪ್ರಕಾಶ್‌ ರಾಜ್‌

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2024, 16:01 IST
Last Updated 23 ಏಪ್ರಿಲ್ 2024, 16:01 IST
<div class="paragraphs"><p>ಪ್ರಕಾಶ್ ರಾಜ್</p></div>

ಪ್ರಕಾಶ್ ರಾಜ್

   

ಬೆಂಗಳೂರು: ’ಲೋಕಸಭೆಗೆ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗುವ ಸುಳಿವು ಸಿಕ್ಕಿದ್ದರಿಂದ  ಹತಾಶೆಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯಂತ ಕೀಳುಮಟ್ಟದ ಮಾತುಗಳನ್ನು ಆಡುತ್ತಿದ್ದಾರೆ’ ಎಂದು ನಟ ಪ್ರಕಾಶ್‌ ರಾಜ್‌ ಹೇಳಿದರು. 

’ಚುನಾವಣೆಯ ಸೋಲಿನ ಭೀತಿಯಿಂದ ಮೋದಿ ಅವರು ಬಟ್ಟೆಯ ಒಳಗೆ ಬೆವೆಯುತ್ತಿದ್ದಾರೆ. ಹಿಂದೆ ಪ್ರಧಾನಿಯಾಗಿದ್ದ ಮನಮೋಹನ್‌ ಸಿಂಗ್ ಅವರು ಎಲ್ಲ ಹಿಂದುಳಿದ ವರ್ಗಗಳು, ಮಹಿಳೆಯರಿಗೆ ಸಮಾನ ಅವಕಾಶ ಸಿಗಬೇಕು ಎಂದಿದ್ದರು. ಅದನ್ನು ಮೋದಿ ಅವರು ತಿರುಚಿ ಹೇಳಿಕೆ ನೀಡುತ್ತಿದ್ದಾರೆ. ‘ಇಂಡಿಯಾ’ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ಎಲ್ಲ ಸಂಪತ್ತು ಹಂಚುತ್ತಾರೆ ಎಂಬ ‘ಕಾಗಕ್ಕ ಗುಬ್ಬಕ್ಕನ ಕಥೆ’ ಹೇಳುತ್ತಿದ್ದಾರೆ. ಹಿಂದೂ ಧರ್ಮದ ಮಹಿಳೆಯರ ತಾಳಿ, ಬಂಗಾರ, ಆಸ್ತಿ ಎಲ್ಲವನ್ನೂ ಉಳಿಸಲು ಎನ್‌ಡಿಎಗೆ ಮತ ನೀಡಬೇಕು ಎಂದು ಹೇಳುವುದು ಅತ್ಯಂತ ನೀಚತನದ ಪರಮಾವಧಿ’ ಎಂದು ಮಂಗಳವಾರ ‘ಎದ್ದೇಳು ಕರ್ನಾಟಕ’ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.

ADVERTISEMENT

’ಸೂರತ್‌ನಲ್ಲಿ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿರುವ ಪ್ರಕರಣದ ಹಿಂದೆಯೂ ಹಲವು ಅನುಮಾನಗಳಿವೆ. ಒಂದು ಪಕ್ಷ ಚುನಾವಣೆ ರಹಿತವಾಗಿ ಗೆಲ್ಲುವ ಮಾರ್ಗ ಕಂಡುಕೊಳ್ಳುತ್ತಿದೆ. ಪ್ರಜಾಪ್ರಭುತ್ವದ ಕತ್ತು ಹಿಸುಕುವ, ಜನರ ಧ್ವನಿಯನ್ನೇ ಹತ್ತಿಕ್ಕುವ ಕೆಲಸ ಮಾಡುತ್ತಿದೆ’ ಎಂದರು.

’ರಾಜ್ಯದ ಪ್ರತಿನಿಧಿಯಾದ ಹಣಕಾಸು ಸಚಿವೆ ರಾಜ್ಯಕ್ಕೆ ಆದ ಅನ್ಯಾಯದ ವಿರುದ್ಧ ಧ್ವನಿಯನ್ನೇ ಎತ್ತಲಿಲ್ಲ. ರಾಜ್ಯ ಸರ್ಕಾರ ಬರಪರಿಹಾರಕ್ಕಾಗಿ ಸುಪ್ರೀಂಕೋರ್ಟ್‌ ಮೊರೆ ಹೋಗಬೇಕಾಯಿತು. ಪರಿಹಾರ ನೀಡದೇ ಅನಗತ್ಯ ವಿಚಾರಗಳನ್ನು ಪ್ರಸ್ತಾಪಿಸುತ್ತಾ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

’ಚುನಾವಣಾ ಬಾಂಡ್‌ ಹಗರಣ ಹೊರಬಂದ ನಂತರ ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿಲ್ಲ. ಅದಕ್ಕಾಗಿಯೇ ಸಮುದಾಯಗಳ ಮಧ್ಯೆ ದ್ವೇಷ ಹುಟ್ಟು ಹಾಕುವ ವಿಚಾರ ಮಾತನಾಡುತ್ತಿದ್ದಾರೆ. ಹಿಂದು–ಮುಸ್ಲಿಂ, ಭಾರತ–ಪಾಕ್‌ ವಿಚಾರ ಬಿಟ್ಟರೆ ಬೇರೆ ವಿಷಯಗಳಿಲ್ಲ. ಕೋವಿಡ್‌ ಸಮಯದಲ್ಲಿ ಮುಸ್ಲಿಮರ ಪಟ್ಟಿ ಹಿಡಿದುಕೊಂಡು ದ್ವೇಷ ಬಿತ್ತಲು ಪ್ರಯತ್ನಿಸಿದ್ದ ತೇಜಸ್ವಿ ಸೂರ್ಯ, ಏನೂ ಕೆಲಸ ಮಾಡದ ಪಿ.ಸಿ. ಮೋಹನ್‌ ಆಯ್ಕೆಯಾಗಬೇಕಾ ಎನ್ನುವುದನ್ನು ಜನರು ನಿರ್ಧರಿಸಬೇಕು. ಜನರ ಹಕ್ಕುಗಳಿಗೆ ತುಡಿಯುವ ಜನರನ್ನು ಆಯ್ಕೆಮಾಡಬೇಕು. ಈಗ ಮತದಾನಕ್ಕೆ ಸರದಿಯಲ್ಲಿ ನಿಲ್ಲದಿದ್ದರೆ ಐದು ವರ್ಷ ಬೇರೆ ವಿಚಾರಗಳಿಗೆ ಸರದಿಯಲ್ಲಿ ನಿಲ್ಲಬೇಕಾಗುತ್ತದೆ’ ಎಂದರು. 

ಸಾವಿರಾರು ಕೋಟಿ ಹಣ ಪ್ರಧಾನಿ ಪರಿಹಾರ ನಿಧಿಯಲ್ಲಿ ಕೊಳೆಯುತ್ತಿದೆ. ಮಾಹಿತಿ ಹಕ್ಕಿನ ಅಡಿ ಖರ್ಚು ಮಾಡಿದ ವಿವರ ಕೊಡಲು ಅವರು ಸಿದ್ಧರಿಲ್ಲ. ಪ್ರಶ್ನೆ ಮಾಡಿವರನ್ನು ಎದುರಿಸುತ್ತಿದ್ದಾರೆ. ನಗರ ನಕ್ಸಲರ ಹಣೆಪಟ್ಟಿ ಕಟ್ಟುತ್ತಿದ್ದಾರೆ.
ಪ್ರಕಾಶ್‌ ರಾಜ್, ನಟ

ಸುದ್ದಿವಾಹಿನಿ ಒಡೆಯ ತೆರಿಗೆ ಕಟ್ಟಿದ್ದು ₹600!

ರಾಜ್ಯವನ್ನು 18 ವರ್ಷ ಸಂಸತ್‌ನಲ್ಲಿ ಪ್ರತಿನಿಧಿಸಿದ ರಾಜ್ಯಸಭಾ ಸದಸ್ಯ ಚಂದ್ರಶೇಖರ್‌ ಈಗ ತಿರುವನಂತಪುರಕ್ಕೆ ಪಲಾಯನ ಮಾಡಿದ್ದಾರೆ. ಇಲ್ಲಿ ಕೆಲಸ ಮಾಡದ ಕಾರಣಕ್ಕೆ ಅಲ್ಲಿಗೆ ಹೋಗಿದ್ದಾರೆ. ಸುದ್ದಿ ವಾಹಿನಿ ಉದ್ಯಮದ ಒಡೆಯರೂ ಆದ ಅವರು ಸಲ್ಲಿಸಿದ ಅಫಿಡವಿಟ್‌ನಲ್ಲಿ ₹ 600 ತೆರಿಗೆ ಕಟ್ಟಿರುವುದಾಗಿ ಹೇಳಿದ್ದಾರೆ. ಅವರು ನನಗಿಂತ ‘ಭಡವ’ ಎಂದು ಪ್ರಕಾಶ್‌ ರಾಜ್‌ ಟೀಕಿಸಿದರು. 

‘ಚುನಾವಣಾ ಆಯೋಗ ಸ್ವತಂತ್ರವಾಗಿಲ್ಲ’

‘ಮೋದಿ ಧರ್ಮದ ಆಧಾರದಲ್ಲಿ ಚುನಾವಣೆ ನಡೆಸುತ್ತಿದ್ದಾರೆ. ರಾಮನನ್ನು ತಂದಿದ್ದೇ ನಾನು ಎನ್ನುತ್ತಿದ್ದಾರೆ. ಕಾವಿಯನ್ನು ನೋಡಿ ಜನರು ಎದರುವ ಸ್ಥಿತಿ ತಂದಿದ್ದಾರೆ. ಇದು ಚುನಾವಣಾ ನಿಯಮಗಳಿಗೆ ವಿರುದ್ಧ. ಚುನಾವಣಾ ಆಯೋಗ ಒಂದು ದೂರಿಗೂ ಕ್ರಮ ಕೈಗೊಳ್ಳುತ್ತಿಲ್ಲ. ಕಳ್ಳರ ಹತ್ತಿರ ದೂರು ನೀಡಿದರೆ ಹೇಗೆ  ಸ್ವೀಕರಿಸುತ್ತಾರೆ? ಅದು ಸ್ವತಂತ್ರ ಸಂಸ್ಥೆಯಾಗಿ ಉಳಿದಿಲ್ಲ. ಅದು ಮೋದಿ ಪರಿವಾರವಾಗಿದೆ’ ಎಂದು ಟೀಕಿಸಿದರು. 

ಮೋದಿ ಎಂದು ಮೂರು ಬಾರಿ ಹೇಳಿದ್ದಕ್ಕೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿಗೆ ಸಂಕಷ್ಟ ತಂದರು. ಅದೇ ಮೋದಿ ತಪ್ಪುಗಳನ್ನು ನೋಡಿಯೂ ಆಯೋಗ ಸುಮ್ಮನೆ ಕುಳಿತಿದೆ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.