ಹೊಸಪೇಟೆ: ‘ಆದಿತ್ಯ ರಾವ್ ಅಥವಾ ಅಬ್ದುಲ್ಲಾ ಯಾರೇ ಆಗಿರಲಿ ಬಾಂಬ್ ಇಟ್ಟು ದೇಶದ ಸುರಕ್ಷತೆಗೆ ಸವಾಲೊಡ್ಡಿದರೆ ಅಂತಹವರನ್ನು ಗಲ್ಲಿಗೇರಿಸಬೇಕು’ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ಒತ್ತಾಯಿಸಿದರು.
ಗುರುವಾರ ಸಂಜೆ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಯಾರೇ ದೇಶ ವಿರೋಧಿ ಕೃತ್ಯ ಎಸಗಿದರೂ ಮುಲಾಜಿಲ್ಲದೇ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಬಾಂಬ್ ಇಟ್ಟು ಶರಣಾಗಿರುವ ಆದಿತ್ಯ ರಾವ್ ಹುಚ್ಚನಾಗಿರಲಿ ಅಥವಾ ಅರೆಹುಚ್ಚನಾಗಿರಲಿ, ಮಾನಸಿಕ ಅಸ್ವಸ್ಥನಾಗಿರಲಿ ಆತನ ತಪ್ಪಿಗೆ ಶಿಕ್ಷೆಯಾಗಲೇಬೇಕು’ ಎಂದು ಆಗ್ರಹಿಸಿದರು.
‘ಹಿಂದೂಗಳ ದೇಶವಾಗಿರುವ ಭಾರತದಲ್ಲಿ ಯಾವ ಹಿಂದೂ ಕೂಡ ದೇಶ ವಿರೋಧಿ ಕೃತ್ಯ ಎಸಗುವುದಿಲ್ಲ. ‘ಹಿಂದೂ ಟೆರರ್’ ಎಂಬುದು ಕಾಂಗ್ರೆಸ್ ಪಕ್ಷ ಹೆಣೆದ ಕಥೆ. ಒಂದುವೇಳೆ ಹಿಂದೂ ಟೆರರ್ ಆಗಿ ಬದಲಾದರೆ ಕಾಂಗ್ರೆಸ್ ಪಕ್ಷವೇ ಈ ದೇಶದಲ್ಲಿ ಉಳಿಯುವುದಿಲ್ಲ. ಆದರೆ, ‘ಇಸ್ಲಾಮಿಕ್ ಟೆರರ್’ ಇದೆ. ಅದಕ್ಕೆ ಅನೇಕ ದಾಖಲೆಗಳನ್ನು ಕೊಡಬಲ್ಲೆ’ ಎಂದರು.
‘ಮಂಗಳೂರು ಬಾಂಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆ ಬಾಲಿಶನತದ್ದು. ಯಾರೇ ಆಗಿರಲಿ ಪೊಲೀಸರು, ದೇಶದ ಸೈನಿಕರ ಮನೋಸ್ಥೈರ್ಯ ಕುಂದಿಸುವಂತಹ ಹೇಳಿಕೆಗಳನ್ನು ಕೊಡಬಾರದು. ಅದನ್ನು ನಾನು ಕಟುವಾಗಿ ಖಂಡಿಸುತ್ತೇನೆ’ ಎಂದರು.
‘ಹಿಂದೂಗಳನ್ನು ಕೆಣಕಿದರೆ ಸುಮ್ಮನಿರಲ್ಲ’ ಎಂದು ಶಾಸಕ ಜಿ. ಸೋಮಶೇಖರ ರೆಡ್ಡಿ ನೀಡಿರುವ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಜನರನ್ನು ಪ್ರಚೋದಿಸುತ್ತಿರುವವರಿಗೆ ಅವರು ಎಚ್ಚರಿಕೆ ನೀಡಿದ್ದಾರೆ. ಕಾಂಗ್ರೆಸ್ ಹಾಗೂ ಎಡ ಪಕ್ಷಗಳು ಕಾಯ್ದೆ ಬಗ್ಗೆ ಅಲ್ಪಸಂಖ್ಯಾತರಲ್ಲಿ ತಪ್ಪು ಅಭಿಪ್ರಾಯ ಮೂಡಿಸಿ, ರಸ್ತೆಗಿಳಿದು ಹೋರಾಟ ಮಾಡುವಂತೆ ಪ್ರಚೋದಿಸುತ್ತಿವೆ’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.