ಬೆಂಗಳೂರು:‘ಕೇರಳ ಸರ್ಕಾರ ನಾಸ್ತಿಕವಾಗಿದ್ದು, ಶಬರಿಮಲೆ ದೇವಸ್ಥಾನವನ್ನು ಅಪವಿತ್ರ ಮಾಡುವ ಸಂಚು ರೂಪಿಸಿದೆ. ಮೊದಲು ಮಸೀದಿಯೊಳಗೆ ಮಹಿಳೆಯರನ್ನು ಬಿಡಲಿ, ಆನಂತರ ದೇವಸ್ಥಾನದ ಬಗ್ಗೆ ಮಾತನಾಡಲಿ’ ಎಂದುಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕಿಡಿ ಕಾರಿದರು.
‘ಕಮ್ಯುನಿಸ್ಟರು ಹಾಗೂ ಬುದ್ಧಿಜೀವಿಗಳು ಹಿಂದೂಗಳ ಮಠ ಹಾಗೂ ದೇವಸ್ಥಾನವನ್ನು ಅವಹೇಳನ ಮಾಡುತ್ತಿದ್ದಾರೆ. ಅವರು ಏನೇ ಮಾಡಿದರೂ ಹಿಂದೂ ಸಂಪ್ರದಾಯ ಮುರಿಯಲು ಸಾಧ್ಯವಿಲ್ಲ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಕಿಸ್ ಆಫ್ ಲವ್ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡವಳು ಪೊಲೀಸ್ ಉಡುಗೆಯಲ್ಲಿ ದೇವಸ್ಥಾನ ಪ್ರವೇಶಿಸಿದ್ದೇಕೆ? ಇದರಲ್ಲಿ ಸರ್ಕಾರದ ಕೈವಾಡ ಎದ್ದು ಕಾಣುತ್ತದೆ. ಕೇಂದ್ರ ಸರ್ಕಾರ, ಕೇರಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಬೇಕು’ ಎಂದು ಒತ್ತಾಯಿಸಿದರು.
ಹರಿಹರಾತ್ಮಜ ಪೀಠಾಧಿಪತಿ ವಿಶ್ವಸಂತೋಷ ಭಾರತಿ ಸ್ವಾಮೀಜಿ, ‘ತೀರ್ಪು ಮರುಪರಿಶೀಲನೆಗೆ ಆಗ್ರಹಿಸಿ ಹಿಂದೂ ಸಂಘಟನೆಗಳು ಇದೇ 27ರಂದು ಬೆಳಿಗ್ಗೆ 10ಕ್ಕೆ ಪುರಭವನದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಶಾಂತಿ ಸದ್ಭಾವನಾ ಮೆರವಣಿಗೆ ಆಯೋಜಿಸಿವೆ’ ಎಂದು ತಿಳಿಸಿದರು.
ನಟ ಶಿವರಾಮ್, ‘ಶಬರಿಮಲೆ ಪ್ರವೇಶ ಕೇಳುವ ಕೆಲವು ಪಟ್ಟಭದ್ರ ಹಿತಾಸಕ್ತಿಗಳು, ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ, ಅತ್ಯಾಚಾರದ ವಿರುದ್ಧ ಹೋರಾಡಲಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.