ಬೆಂಗಳೂರು: ‘ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ನ್ಯಾಯಮೂರ್ತಿಗಳ ಹಿಂದೆ ಕೇಂದ್ರ ಸರ್ಕಾರವು ಗೂಢಚಾರಿಗಳನ್ನು ಕಳುಹಿಸುತ್ತಿತ್ತು. ಸಣ್ಣ ತಪ್ಪು ಕಂಡರೂ, ನ್ಯಾಯಮೂರ್ತಿಗಳನ್ನು ಬೆದರಿಸಿ ಅವರನ್ನು ತಮಗೆ ಬೇಕಾದಂತೆ ಬಳಸಿಕೊಂಡಿತು’ ಎಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಆರೋಪಿಸಿದರು.
‘ಫೋರಂ ಫಾರ್ ಡೆಮಾಕ್ರಸಿ ಆ್ಯಂಡ್ ಕಮ್ಯುನಲ್ ಅಮಿಟಿ–ಎಫ್‌ಡಿಸಿಎ’ ಕರ್ನಾಟಕ ಘಟಕವು ನಗರದಲ್ಲಿ ಆಯೋಜಿಸಿದ್ದ ‘ಲೋಕಸಭಾ ಚುನಾವಣೆಯ ನಂತರ ಮುಂದೇನು?’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
‘ನ್ಯಾಯಮೂರ್ತಿಗಳನ್ನೇ ಬೆದರಿಸುವ ತಂತ್ರವನ್ನು ಕೇಂದ್ರ ಸರ್ಕಾರ ಅನುಸರಿಸಿದ ಕಾರಣ, ಕೊಲಿಜಿಯಂ ವ್ಯವಸ್ಥೆ ಅಡಿ ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ನ್ಯಾಯಾಂಗವು ತುಸುಮಟ್ಟಿಗೆ ರಾಜಿಯಾಗುತ್ತಿತ್ತು. ಆದರೆ ಈಗ ಬಿಜೆಪಿಗೆ ಸ್ಪಷ್ಟಬಹುಮತ ದೊರೆಯದೇ ಇರುವುದು ಮತ್ತು ವಿಪಕ್ಷಗಳ ಒಕ್ಕೂಟವೂ ಪ್ರಬಲವಾಗಿರುವುದರಿಂದ ಪರಿಸ್ಥಿತಿ ಬದಲಾಗುತ್ತಿದೆ. ನ್ಯಾಯಾಂಗವು ತನ್ನ ನಿಲುವಿಗೆ ಗಟ್ಟಿಯಾಗಿ ನಿಲ್ಲಲು ಆರಂಭಿಸಿದೆ’ ಎಂದರು.
‘ಬಿಜೆಪಿ ನೇತೃತ್ವದ ಸರ್ಕಾರವು ತನ್ನ ಹತ್ತು ವರ್ಷಗಳ ಆಡಳಿತದಲ್ಲಿ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳನ್ನೂ ದುರ್ಬಲಗೊಳಿಸಿದೆ. ಅವನ್ನು ಬಲಪಡಿಸುವ ಕೆಲಸ ಮಾಡಬೇಕಿದೆ. ಇನ್ನು ಅಧಿಕಾರ ವಿಕೇಂದ್ರೀಕರಣಕ್ಕೆ ಮುಂದಾಗಬೇಕು. ಪಂಚಾಯಿತಿಗೆ ಹೆಚ್ಚಿನ ಅಧಿಕಾರವಿರಬೇಕು. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳು ಬಲವಾಗಬೇಕು’ ಎಂದರು.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಹಿನ್ನಡೆಯನ್ನು ಜನಸಾಮಾನ್ಯನ ಗೆಲುವು ಎಂದೇ ಗುರುತಿಸಬೇಕು. ಈ ಗೆಲುವಿನಿಂದ ನಾವು ಹಿಂದೆ ಸರಿಯಬಾರದುತಾರಾ ರಾವ್, ಎದ್ದೇಳು ಕರ್ನಾಟಕ ಕೇಂದ್ರ ಸಮಿತಿ ಸದಸ್ಯೆ
ಉತ್ತರ ಪ್ರದೇಶದಲ್ಲಿ ಬಿಜೆಪಿಯ ಹಿನ್ನಡೆಯನ್ನು ಸಂಭ್ರಮಿಸುತ್ತಿದ್ದೇವೆ. ತೆಲಂಗಾಣ ಆಂಧ್ರಪ್ರದೇಶ ಕೇರಳದಲ್ಲಿ ಬಿಜೆಪಿ ಗಟ್ಟಿಯಾಗುತ್ತಿರುವುದನ್ನು ಮರೆಯುತ್ತಿದ್ದೇವೆ. ಈ ಬಗ್ಗೆ ಎಚ್ಚರಿಕೆ ಅಗತ್ಯಡಾ.ಮೊಹಮ್ಮದ್ ತಾಹಾ ಮತೀನ್, ಕಾರ್ಯದರ್ಶಿ ಜಮಾತ್–ಇ–ಇಸ್ಲಾಮಿ ಹಿಂದ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.