ಬೆಂಗಳೂರು: ‘ತನಿಖಾ ಸಂಸ್ಥೆಗಳು ನಿರ್ವಹಿಸುತ್ತಿರುವ ಕೇಸ್ ಡೈರಿಯನ್ನು (ಸಿ.ಡಿ) ತಿದ್ದುವ ಅಥವಾ ತಿರುಚುವ ಸಾಧ್ಯತೆ ಇರುವ ಕಾರಣ ತನಿಖಾಧಿಕಾರಿಯು ಅದರ ಪ್ರತಿ ಪುಟಕ್ಕೂ ಸಹಿ ಹಾಕುವಂತೆ ನಿರ್ದೇಶಿಸಬೇಕು’ ಎಂದು ಕೋರಲಾಗಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ವಜಾ ಮಾಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಮೊಹಮ್ಮದ್ ಶಿಯಾಬ್ ಈ ಸಂಬಂಧ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ವಜಾಗೊಳಿಸಿದೆ.
‘ಚಾಲ್ತಿ ಕಾನೂನುಗಳ ಅನುಸಾರ ಕೇಸ್ ಡೈರಿಯಲ್ಲಿ ಸಹಿ ಹಾಕಲು ಅವಕಾಶ ನೀಡುವಂತಹ ನಿಯಮಗಳಿಲ್ಲ. ಹೀಗಾಗಿ, ಏನೇ ತಕರಾರುಗಳಿದ್ದರೆ ಅವುಗಳನ್ನು ಹಾಲಿ ಕಾನೂನುಗಳ ಅಡಿ ವಿಶ್ಲೇಷಿಸಬಹುದೇ ಹೊರತು, ವಿಶ್ಲೇಷಣೆಯ ಹೆಸರಿನಲ್ಲಿ ಕೋರ್ಟ್ ಹೊಸ ಕಾನೂನು ಜಾರಿಗೊಳಿಸಲಾಗದು’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
‘ಶಾಸನಗಳಲ್ಲಿ ಇರುವ ಪದಗಳನ್ನು ವ್ಯಾಖ್ಯಾನಿಸಲು ಅಥವಾ ವಿಶ್ಲೇಷಿಸಲು ಕೋರ್ಟ್‌ಗೆ ಅಧಿಕಾರವಿದೆ. ಶಾಸನ ರೂಪಿಸಿದ ನಂತರ ಅದರಲ್ಲಿರುವ ಪದಗಳನ್ನು ಹೊರತುಪಡಿಸಿ ನ್ಯಾಯಾಲಯವೇ ಹೆಚ್ಚುವರಿ ಪದಗಳನ್ನು ಸೇರ್ಪಡೆ ಮಾಡಲು ಆಗದು’ ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣವೇನು?:
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ತನಿಖಾಧಿಕಾರಿಗೆ ‘ಕೇಸ್ ಡೈರಿ ಹಾಜರುಪಡಿಸಿ’ ಎಂದು ತನಿಖಾಧಿಕಾರಿಗೆ ನಿರ್ದೇಶನ ನೀಡಿತ್ತು. ಅದರಂತೆ ತನಿಖಾಧಿಕಾರಿ ಕೇಸ್ ಡೈರಿ ಸಲ್ಲಿಸಿ ಅದನ್ನು ವಾಪಸ್ ಪಡೆದುಕೊಂಡಿದ್ದರು. ಇದಕ್ಕೆ ಆರೋಪಿ ಮೊಹಮ್ಮದ್ ಶಿಯಾಬ್ ಮೆಮೊ ಸಲ್ಲಿಸಿ, ‘ಕೇಸ್ ಡೈರಿಯಲ್ಲಿ ಏನಾದರೂ ಸೇರ್ಪಡೆ ಅಥವಾ ತಿದ್ದುಪಡಿ ಮಾಡುವ ಸಾಧ್ಯತೆ ಇದೆ. ಹಾಗಾಗಿ, ತನಿಖಾಧಿಕಾರಿ ಕೋರ್ಟ್‌ಗೆ ಕೇಸ್ ಡೈರಿ ಸಲ್ಲಿಸಿದಾಗ ಅದರ ಪ್ರತಿ ಪುಟದಲ್ಲೂ ಸಹಿ ಹಾಕುವಂತೆ ನಿರ್ದೇಶಿಸಬೇಕು’ ಎಂದು ವಿಚಾರಣಾ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ, ವಿಚಾರಣಾ ನ್ಯಾಯಾಲಯ 2022ರ ನವೆಂಬರ್ 16ರಂದು ಈ ಮನವಿಯನ್ನು ತಿರಸ್ಕರಿಸಿತ್ತು.
ಇದನ್ನು ಪ್ರಶ್ನಿಸಿ ಆರೋಪಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ನ್ಯಾಯಪೀಠ ಈ ರಿಟ್ ಅರ್ಜಿಯನ್ನು ವಜಾ ಮಾಡಿ ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.