ಬೆಂಗಳೂರು: ಬಿಜೆಪಿಯ ಯುವ ಮೋರ್ಚಾ ಮುಖಂಡರಾಗಿದ್ದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ 21ನೇ ಆರೋಪಿ ಮೊಹಮದ್ ಜಬೀರ್‌ಗೆ ಜಾಮೀನು ಮಂಜೂರು ಮಾಡಲು ಹೈಕೋರ್ಟ್ ನಿರಾಕರಿಸಿದೆ.
ಈ ಸಂಬಂಧ ಎನ್‌ಐಎ ವಿಶೇಷ ನ್ಯಾಯಾಲಯದ ಪ್ರಶ್ನಿಸಿ ಪುತ್ತೂರು ತಾಲ್ಲೂಕು ಒಳಮೊಗ್ರು ಗ್ರಾಮದ ಮೊಹಮದ್ ಜಬೀರ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ವಿಜಯಕುಮಾರ್ ಎ. ಪಾಟೀಲ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಜಾಗೊಳಿಸಿದೆ.
ಎನ್‌ಐಎ ಪರ ಪಿ.ಪ್ರಸನ್ನ ಕುಮಾರ್ ಮಂಡಿಸಿದ್ದ ವಾದ ಮನ್ನಿಸಿರುವ ನ್ಯಾಯಪೀಠ, ‘ಡೀಫಾಲ್ಟ್ ಜಾಮೀನು ಕೋರಿರುವ ಅರ್ಜಿದಾರರ ಕೋರಿಕೆಯನ್ನು ಎನ್‌ಐಎ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ. ಈ ವೇಳೆ ಅರ್ಜಿದಾರರನ್ನು ಕಸ್ಟಡಿಗೆ ಪಡೆಯಲು ಸೂಕ್ತ ಮತ್ತು ನಿರ್ದಿಷ್ಟ ಕಾರಣ ನೀಡಲಾಗಿಲ್ಲ ಎಂದು ಅರ್ಜಿದಾರರು ಕೋರದೇ ಇರುವುದರಿಂದ ಅದನ್ನು ಪರಿಶೀಲನೆ ಮಾಡುವ ಅಗತ್ಯವಿಲ್ಲ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ವಿವರಿಸಿರುವುದು ಸರಿಯಾಗಿದೇ ಇದೆ. ಹೀಗಾಗಿ ಮೊಹಮದ್ ಜಬೀರ್ ಸಲ್ಲಿಸಿರುವ ಈ ರಿಟ್ ಅರ್ಜಿ ತಿರಸ್ಕರಿಸಲಾಗುತ್ತಿದೆ’ ಎಂದು ನ್ಯಾಯಪೀಠ ಹೇಳಿದೆ.
‘ಆರೋಪಿಯ ಕಸ್ಟಡಿ ಅವಧಿ ವಿಸ್ತರಿಸಬೇಕು ಎಂದು ಕೋರಿ ಒಂದೆಡೆ ಎನ್ಐಎ ಅರ್ಜಿ ಸಲ್ಲಿಸಿದ್ದರೆ ಮತ್ತೊಂದೆಡೆ, ಡೀಫಾಲ್ಟ್ ಜಾಮೀನು ಕೋರಿ ಅರ್ಜಿದಾರರೂ ಅದೇ ದಿನ ಇನ್ನೊಂದು ಅರ್ಜಿ ಸಲ್ಲಿಸಿದ್ದಾರೆ. ಎರಡೂ ಅರ್ಜಿಗಳನ್ನು ಎನ್ಐಎ ವಿಶೇಷ ನ್ಯಾಯಾಲಯ ಒಂದೇ ದಿನ ವಿಚಾರಣೆ ನಡೆಸಿದೆ. ಅಂತೆಯೇ, ಅರ್ಜಿದಾರರ ಕಸ್ಟಡಿ ವಿಸ್ತರಣೆ ಕೋರಿ ನಿರ್ದಿಷ್ಟ ಕಾರಣಗಳನ್ನು ಒಳಗೊಂಡ ಮನವಿಯನ್ನು ಎನ್ಐಎ ಸಲ್ಲಿಸಿದ ಕಾರಣ ವಿಶೇಷ ನ್ಯಾಯಾಲಯ ಎನ್ಐಎ ಅರ್ಜಿಯನ್ನು ಪುರಸ್ಕರಿಸಿರುವುದು ಕೂಡಾ ಸಮರ್ಪಕವಾಗಿದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಮೊಹಮದ್ ಜಬೀರ್ ವಿರುದ್ಧ ಭಾರತೀಯ ದಂಡ ಸಂಹಿತೆ–1860ರ ಕಲಂ 302, ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ. ಅವರನ್ನು 2022ರ ನವೆಂಬರ್ 7ರಂದು ಬಂಧಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.