ಬೆಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯು ರಾಜ್ಯ ರಾಜಕಾರಣದಲ್ಲಿ ಕಲ್ಲೋಲವನ್ನೇ ಸೃಷ್ಟಿಸಿದೆ.
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಜುಲೈ 28 ಹಮ್ಮಿಕೊಂಡಿದ್ದ ಸಾಧನಾ ಸಮಾವೇಶ– ‘ಜನೋತ್ಸವ’ವನ್ನು ರದ್ದುಪಡಿಸಲಾಗಿದೆ. ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆಯಲ್ಲಿ ವ್ಯಕ್ತವಾದ ಆಕ್ರೋಶವು ಜನೋತ್ಸವವನ್ನು ರದ್ದುಪಡಿಸಲು ಕಾರಣವಾಗಿದೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆ, ‘ಜನಪರ ಯೋಜನೆಯನ್ನೇ ರೂಪಿಸದ ಸರ್ಕಾರ ಜನೋತ್ಸವ ಎಂಬ ಕೃತಕ ಜನ ಬೆಂಬಲವನ್ನು ತೋರಿಸಲು ಹೊರಟಿತ್ತು. ಆದರೆ, ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ ಎಂಬಂತೆ ಜನರ ಅಸಲಿ ಆಕ್ರೋಶವನ್ನುಕಣ್ಣಾರೆ ಕಂಡಿತು’ ಎಂದು ವಾಗ್ದಾಳಿ ನಡೆಸಿದ್ದಾರೆ.
‘ಮಧ್ಯರಾತ್ರಿ ಓಡೋಡಿ ಬಂದು ಕಾರ್ಯಕ್ರಮವನ್ನು ರದ್ದುಗೊಳಿಸುವಷ್ಟು ಅನಿವಾರ್ಯತೆ ಸೃಷ್ಟಿಯಾಗಿದ್ದು ಈ ಸರ್ಕಾರದ ಅಸಲಿ ಸಾಧನೆಗೆ ಕನ್ನಡಿ ಹಿಡಿದಂತಾಗಿದೆ’ ಎಂದೂ ವ್ಯಂಗ್ಯವಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.