ADVERTISEMENT

ಮುಂಗಾರು ಪೂರ್ವ ಮಳೆ: ಆಲಮಟ್ಟಿಗೆ 2.42 ಟಿಎಂಸಿ ಅಡಿ ನೀರು

ಕೃಷ್ಣಾ ನದಿಗೆ 20 ಸಾವಿರ ಕ್ಯುಸೆಕ್ ನೀರು

​ಪ್ರಜಾವಾಣಿ ವಾರ್ತೆ
Published 22 ಮೇ 2022, 19:37 IST
Last Updated 22 ಮೇ 2022, 19:37 IST
ಆಲಮಟ್ಟಿ ಜಲಾಶಯಕ್ಕೆ ಭಾನುವಾರ ಒಂದೇ ದಿನ 2.42 ಟಿಎಂಸಿ ಅಡಿ ನೀರು ಹರಿದು ಬಂದಿದ್ದು, ಜಲಾಶಯದ ಹಿನ್ನೀರಿನಲ್ಲಿ ರಭಸದ ಅಲೆಗಳು ಎದ್ದಿವೆ –ಪ್ರಜಾವಾಣಿ ಚಿತ್ರ/ಚಂದ್ರಶೇಖರ ಕೋಳೇಕರ
ಆಲಮಟ್ಟಿ ಜಲಾಶಯಕ್ಕೆ ಭಾನುವಾರ ಒಂದೇ ದಿನ 2.42 ಟಿಎಂಸಿ ಅಡಿ ನೀರು ಹರಿದು ಬಂದಿದ್ದು, ಜಲಾಶಯದ ಹಿನ್ನೀರಿನಲ್ಲಿ ರಭಸದ ಅಲೆಗಳು ಎದ್ದಿವೆ –ಪ್ರಜಾವಾಣಿ ಚಿತ್ರ/ಚಂದ್ರಶೇಖರ ಕೋಳೇಕರ   

ಆಲಮಟ್ಟಿ (ವಿಜಯಪುರ ಜಿಲ್ಲೆ): ಮುಂಗಾರು ಪೂರ್ವ ಭಾರಿ ಮಳೆಯಿಂದಾಗಿ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಆರಂಭಗೊಂಡಿದ್ದು ಭಾನುವಾರ ಒಂದೇ ದಿನ‌ 28,077 ಕ್ಯುಸೆಕ್‌ (2.42 ಟಿಎಂಸಿ ಅಡಿ)ನೀರು ಹರಿದು ಬಂದಿದೆ.

519.60 ಮೀಟರ್‌ ಗರಿಷ್ಠ ಎತ್ತರದ ಜಲಾಶಯದಲ್ಲಿ 123.081 ಟಿಎಂಸಿ ಅಡಿ ಗರಿಷ್ಠ ನೀರಿನ ಸಂಗ್ರಹ ಸಾಮರ್ಥ್ಯವಿದ್ದು ಸದ್ಯಕ್ಕೆ 37.37 ಟಿಎಂಸಿ ಅಡಿಗಳಿಗೆ ಏರಿಕೆಯಾಗಿದೆ.

‘ಸಾಧಾರಣವಾಗಿ ಜೂನ್‌ನಲ್ಲಿ ಒಳಹರಿವು ಆರಂಭವಾಗುವುದು ವಾಡಿಕೆ. ಆಲಮಟ್ಟಿ ಜಲಾಶಯದ ದಶಕದ ನೀರಿನ‌ ಸಂಗ್ರಹದ ಮಾಹಿತಿ‌ ಗಮನಿಸಿದಾಗ ಜಲಾಶಯದಲ್ಲಿ ಈ ಮಟ್ಟದಲ್ಲಿ ನೀರು ಸಂಗ್ರಹ ಇರುವುದು ಕೂಡ ದಾಖಲೆಯೇ. ಕಳೆದ ವರ್ಷ ಸ್ಥಗಿತಗೊಂಡಿದ್ದ ಒಳಹರಿವು ನವೆಂಬರ್‌ 23ರಿಂದ ಪುನಃ ಆರಂಭಗೊಂಡು 20 ಟಿಎಂಸಿ ಅಡಿ ಹೆಚ್ಚುವರಿ ನೀರು ಸಂಗ್ರಹಗೊಂಡಿದ್ದರಿಂದ ಈ ವರ್ಷ ಬೇಸಿಗೆ ಕಳೆದರೂ ಅತಿ ಹೆಚ್ಚು ನೀರು ಜಲಾಶಯದಲ್ಲಿ ಉಳಿದಿದೆ’ ಎಂದು ಕೆಬಿಜೆಎನ್‌ಎಲ್ ಅಧಿಕಾರಿಗಳು ತಿಳಿಸಿದರು.

ADVERTISEMENT

ಹಿಪ್ಪರಗಿ ಜಲಾಶಯ: ‘ಈ ಭಾಗದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ತಾಲ್ಲೂಕಿನ ಹಿಪ್ಪರಗಿ ಜಲಾಶಯಕ್ಕೆ ಭಾನುವಾರ ಬೆಳಿಗ್ಗೆ 20 ಸಾವಿರ ಕ್ಯುಸೆಕ್‌ ಒಳ ಹರಿವು ಇದ್ದು, ಹೊರ ಹರಿವು ಕೂಡ ಅಷ್ಟೆ ಪ್ರಮಾಣದಲ್ಲಿ ಇದೆ’ ಎಂದು ರಬಕವಿ ಬನಹಟ್ಟಿ ತಾಲ್ಲೂಕಿನ ಹಿಪ್ಪರಗಿ ಜಲಾಶಯದ ಸಹಾಯಕ ಎಂಜಿನಿಯರ್ ವಿಠ್ಠಲ ನಾಯಕ ತಿಳಿಸಿದರು.

‘ಜಲಾಶಯದ ಸಾಮರ್ಥ್ಯ 6 ಟಿಎಂಸಿ ಅಡಿ ಇದ್ದು, ಜಲಾಶಯದಲ್ಲಿ ಈಗ 3 ಟಿಎಂಸಿ ಅಡಿ ನೀರಿದೆ. ನದಿಯ ಮೇಲ್ಭಾಗದ ಪ್ರದೇಶದಲ್ಲಿ ಸುರಿದ ಮಳೆಯಿಂದಾಗಿ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಮಹಾರಾಷ್ಟ್ರದ ಜಲಾಶಯಗಳಿಂದ ಇನ್ನೂ ನೀರು ಬಿಟ್ಟಿಲ್ಲ’ ಎಂದು ನಾಯಕ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.