ADVERTISEMENT

ಪೆನ್‌ ಡ್ರೈವ್‌ ಹಂಚಿದ್ದರೆ ದೊಡ್ಡ ಪಾಪ: ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2024, 0:29 IST
Last Updated 21 ಸೆಪ್ಟೆಂಬರ್ 2024, 0:29 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರ ಲೈಂಗಿಕ ಹಗರಣಕ್ಕೆ ಸಂಬಂಧಿಸಿದ ಅಶ್ಲೀಲ ವಿಡಿಯೊಗಳನ್ನು ಒಳಗೊಂಡ ಪೆನ್‌ ಡ್ರೈವ್‌ ಹಂಚಿಕೆ ಮಾಡಿಸಿದ್ದರೆ ಅದೊಂದು ದೊಡ್ಡ ಪಾಪ. ಈ ಕೃತ್ಯ ಸಂತ್ರಸ್ತೆಯರನ್ನು ಇನ್ನಿಲ್ಲದ ಅವಮಾನಕ್ಕೆ ನೂಕಿರುವ ಸಂಗತಿ’ ಎಂದು ಹೈಕೋರ್ಟ್‌ ತೀವ್ರ ಕಳವಳ ವ್ಯಕ್ತಪಡಿಸಿದೆ.

‘ಪ್ರಜ್ವಲ್‌ ರೇವಣ್ಣ ಅವರ ಲೈಂಗಿಕ ಹಗರಣದಲ್ಲಿ ಪೆನ್‌ ಡ್ರೈವ್‌ ಹಂಚಿದ ಆರೋಪಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ ಬೆಂಗಳೂರಿನ ಸೈಬರ್‌ ಅಪರಾಧ ಠಾಣೆಯಲ್ಲಿ ದಾಖಲಾಗಿರುವ ದೂರು ಮತ್ತು ಅದಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ನ್ಯಾಯಿಕ ಪ್ರಕ್ರಿಯೆ ರದ್ದುಪಡಿಸಬೇಕು’ ಎಂದು ಕೋರಿ ಮಾಜಿ ಶಾಸಕ ಬಿಜೆಪಿಯ ಪ್ರೀತಂ ಗೌಡ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಪ್ರೀತಂ ಗೌಡ ಪರ ಹಿರಿಯ ವಕೀಲ ಸಿ.ವಿ.ನಾಗೇಶ್‌, ‘ಪೆನ್‌ ಡ್ರೈವ್‌ ಹಂಚಿದ್ದಾರೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದರು ಎಂಬ ಆಧಾರದಲ್ಲಿ ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವಿಶೇಷ ತನಿಖಾ ದಳ (ಎಸ್‌ಐಟಿ) ತನಿಖೆ ಮುಂದುವರಿಸಬಹುದು. ಇದಕ್ಕೆ ನಮ್ಮ ಆಕ್ಷೇಪವಿಲ್ಲ’ ಎಂದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಒಂದು ವೇಳೆ ವಿಡಿಯೊಗಳನ್ನು ಹಂಚಿಕೆ ಮಾಡಿದ್ದರೆ ಅದು ದೊಡ್ಡ‌ ಪಾಪ. ಇದು ಪ್ರತಿಯೊಬ್ಬ ಮಹಿಳೆಯನ್ನೂ ಅವಮಾನಕ್ಕೆ ನೂಕಿರುವಂಥಾದ್ದು’ ಎಂದು ಹೇಳಿತು.

ಕೆಲಕಾಲ ವಿಚಾರಣೆ ನಡೆಸಿದ ನ್ಯಾಯಪೀಠ, ಅರ್ಜಿದಾರರನ್ನು ಬಂಧಿಸದಂತೆ ಈ ಹಿಂದೆ ನೀಡಿದ್ದ ಆದೇಶ ವಿಸ್ತರಿಸಿ ವಿಚಾರಣೆಯನ್ನು ಇದೇ 26ಕ್ಕೆ ಮುಂದೂಡಿತು. ಪ್ರಾಸಿಕ್ಯೂಷನ್‌ ಪರ ಹಿರಿಯ ವಕೀಲ ರವಿವರ್ಮ ಕುಮಾರ್ ಹಾಜರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.