ADVERTISEMENT

Pendrive case | ಹಾಸನದಲ್ಲಿ 15 ಲಕ್ಷ ಜನರನ್ನು ಬಂಧಿಸಬೇಕಾಗುತ್ತೆ: ಪ್ರೀತಂಗೌಡ

​ಪ್ರಜಾವಾಣಿ ವಾರ್ತೆ
Published 13 ಮೇ 2024, 16:29 IST
Last Updated 13 ಮೇ 2024, 16:29 IST
ಪ್ರೀತಂ ಗೌಡ
ಪ್ರೀತಂ ಗೌಡ   

ಬೆಂಗಳೂರು: ‘ಪೆನ್‌ಡ್ರೈವ್‌ ಇದೆ, ವಿಡಿಯೊ ಇದೆ ಎಂದು ಬಂಧಿಸಲು ಹೊರಟರೆ ಹಾಸನ ಜಿಲ್ಲೆಯಲ್ಲಿ15 ಲಕ್ಷ ಜನರ ಮೇಲೂ ಕೇಸ್ ಹಾಕಿ, ಬಂಧಿಸಬೇಕಾಗುತ್ತದೆ’ ಎಂದು ಮಾಜಿ ಶಾಸಕ ಬಿಜೆಪಿಯ ಪ್ರೀತಂಗೌಡ ಹೇಳಿದರು.

ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ವಿಡಿಯೊ ವ್ಯಾಪಕವಾಗಿ ಹಂಚಿಕೆಯಾಗಿರುವುದು ನಿಜ. ಅಶ್ಲೀಲ ವಿಡಿಯೊಗಳನ್ನು ಹಂಚಿಕೊಳ್ಳಬಾರದು ಎಂದು ನಮ್ಮ ಕಾರ್ಯಕರ್ತರಿಗೆ ಕಟ್ಟುನಿಟ್ಟಾದ ಸೂಚನೆ ನೀಡಿದ್ದೇನೆ’ ಎಂದರು.

‘ಈ ರೀತಿಯ ಕೃತ್ಯಗಳಿಗೆ ನಾನು ಬೆಂಬಲ ನೀಡುವುದಿಲ್ಲ. ಈ ಕುರಿತು ಹಾಸನ ಜಿಲ್ಲೆಯ ಪ್ರಮುಖ ನಾಯಕರು ನನ್ನ ಜತೆ ಮಾತನಾಡಿದ್ದಾರೆ. ಯಾರಿಗಾದರೂ ಪೆನ್‌ಡ್ರೈವ್‌ ಸಿಕ್ಕರೆ ಎಸ್ಐಟಿ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಿದ್ದೇನೆ‘ ಎಂದು ಹೇಳಿದರು.

ADVERTISEMENT

‘ಈ ವಿಚಾರವಾಗಿ ತನಿಖೆ ನಡೆಯುತ್ತಿರುವಾಗ ಅದರ ಬಗ್ಗೆ ಮಾತನಾಡುವುದು ಸರಿಯಲ್ಲ. ಆ ತನಿಖೆಯು ಯಾವ ದಿಕ್ಕಿನಲ್ಲಿ ನಡೆಯುತ್ತಿದೆ ಎಂದು ಕಾದು ನೋಡಬೇಕು. ಏನೆಲ್ಲ ಆಗಿದೆ ಎಂಬುದು ತನಿಖೆಯಿಂದ ಬಹಿರಂಗವಾಗಬೇಕು. ನಮ್ಮ ಕಾರ್ಯಕರ್ತರು ಯಾರೂ ವಿಡಿಯೊಗಳನ್ನು ಹಂಚಿಕೊಳ್ಳುತ್ತಿಲ್ಲ’ ಎಂದರು.

‘ಈ ವಿಡಿಯೊಗಳನ್ನು ಯಾರೊಬ್ಬರೂ ಬೇಕೆಂದು ಕೇಳಿ ತರಿಸಿಕೊಳ್ಳುವುದಿಲ್ಲ. ಆದರೆ, ಯಾರೊ ಯಾವುದೋ ಗ್ರೂಪ್‌ಗೆ ಫಾರ್ವರ್ಡ್‌ ಮಾಡಿರುತ್ತಾರೆ. ಆಗ ಅದು ಮೊಬೈಲ್‌ನಲ್ಲಿ ಸೇವ್‌ ಆಗಿರುತ್ತದೆ. ಹಾಗೆಂದು ಎಲ್ಲರನ್ನು ಕರೆದುಕೊಂಡು ಹೋಗಿ ಬಂಧಿಸಲು ಆಗುತ್ತದೆಯೇ’ ಎಂದರು.

‘ಎಸ್‌ಐಟಿ ಅಧಿಕಾರಿಗಳು ಬಂಧಿಸಿರುವುದು ನನ್ನ ಆಪ್ತ ಸಹಾಯಕನಲ್ಲ. ನನ್ನ ಕಚೇರಿಯಲ್ಲಿ 40 ರಿಂದ 50 ಸಿಬ್ಬಂದಿ ಕೆಲಸ ಮಾಡುತ್ತಾರೆ. ಅವರಲ್ಲಿ ಯಾರೋ ಒಬ್ಬರ ಬಳಿ ಪೆನ್‌ಡ್ರೈವ್‌, ವಿಡಿಯೊ ಇದ್ದು, ಅದನ್ನು ಅವರು ಕಂಪ್ಯೂಟರ್‌ನಲ್ಲಿ ಹಾಕಿ ನೋಡಿದ್ದನ್ನೇ ಅಪರಾಧ ಎಂದು ಪರಿಗಣಿಸಲು ಸಾಧ್ಯವೇ. ಅಮಾಯಕನನ್ನು ಬಂಧಿಸಿದ್ದಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.