ADVERTISEMENT

ಹಂಪಿಯಲ್ಲಿ ದೊಡ್ಡ ಉತ್ಖನನಕ್ಕೆ ಸಿದ್ಧತೆ

ಹೊರ ಜಗತ್ತಿಗೆ ಗೊತ್ತಾಗಲಿವೆ ವಿಜಯನಗರ ಸಾಮ್ರಾಜ್ಯದ ಮತ್ತಷ್ಟು ಸಂಗತಿಗಳು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 29 ನವೆಂಬರ್ 2020, 20:10 IST
Last Updated 29 ನವೆಂಬರ್ 2020, 20:10 IST
ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು ಉತ್ಖನನಕ್ಕೆ ಗುರುತಿಸಿರುವ ಹಂಪಿಯ ‘ಪಾನ್‌ ಸುಪಾರಿ ಬಜಾರ್’ ಅವಶೇಷಗಳಿರುವ ಸ್ಥಳ
ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು ಉತ್ಖನನಕ್ಕೆ ಗುರುತಿಸಿರುವ ಹಂಪಿಯ ‘ಪಾನ್‌ ಸುಪಾರಿ ಬಜಾರ್’ ಅವಶೇಷಗಳಿರುವ ಸ್ಥಳ   

ಹೊಸಪೇಟೆ: ವಿಶ್ವ ವಿಖ್ಯಾತ ಹಂಪಿಯಲ್ಲಿ ದೊಡ್ಡ ಪ್ರಮಾಣದ ಉತ್ಖನನಕ್ಕೆ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ (ಎಎಸ್‌ಐ) ಹಂಪಿ ವೃತ್ತ ಸಿದ್ಧತೆ ನಡೆಸಿದೆ. ಹಿಂದಿನ ಹತ್ತು ವರ್ಷಗಳಲ್ಲೇ ಇದು ದೊಡ್ಡ ಮಟ್ಟದ ಉತ್ಖನನವಾಗಿರಲಿದೆ ಎಂದು ಗೊತ್ತಾಗಿದೆ.

ಹಂಪಿಯ ಹಜಾರರಾಮ ದೇವಸ್ಥಾನದ ಬಳಿಯಿರುವ ‘ಪಾನ್‌ ಸುಪಾರಿ ಬಜಾರ್‌’, ‘ಶೃಂಗಾರದ ಹೆಬ್ಬಾಗಿಲು’ ಇರುವ ಪರಿಸರದಲ್ಲಿ ಈ ಉತ್ಖನನ ನಡೆಯಲಿದೆ ಎಂದು ತಿಳಿದು ಬಂದಿದೆ.

ಉತ್ಖನನಕ್ಕೆ ಆಯ್ಕೆ ಮಾಡಿರುವ ಸ್ಥಳ ‘ರಾಜರ ಖಾಸಾ ಜಾಗ’ಕ್ಕೆ ಹೊಂದಿಕೊಂಡಂತೆ ಇರುವುದರಿಂದ ಬಹಳ ಪ್ರಾಮುಖ್ಯತೆ ಪಡೆದಿದೆ. ಇದೇ ಪರಿಸರದಲ್ಲಿ ರಾಜ, ಮಹಾರಾಜರ ಅರಮನೆ, ದೇವಸ್ಥಾನಗಳು, ಗುಪ್ತ ಮಾರ್ಗಗಳು, ವಿಶಿಷ್ಟ ವಿನ್ಯಾಸದ ಪುಷ್ಕರಣಿ, ಮಹಾನವಮಿ ದಿಬ್ಬ, ರಾಣಿ ಸ್ನಾನಗೃಹ ಸ್ಮಾರಕ ಇವೆ.

ADVERTISEMENT

ಇತ್ತೀಚೆಗೆ ಇದೇ ಭಾಗದಲ್ಲಿ ನೀರಿನ ದೊಡ್ಡ ಜಾಲವಿರುವ ಕೊಳವೆ ಮಾರ್ಗದ ಕುರುಹುಗಳು, ಪುಷ್ಕರಣಿಯ ಅವಶೇಷಗಳು ಕೂಡ ಪತ್ತೆಯಾಗಿವೆ. ಅದಕ್ಕೂ ಹಲವು ವರ್ಷಗಳ ಹಿಂದೆ ಕೆಲ ಕೆತ್ತನೆಗಳು ಕೂಡ ಪತ್ತೆಯಾಗಿದ್ದವು.

‘1980ರಲ್ಲಿ ಪಾನ್‌ ಸುಪಾರಿ ಬಜಾರ್‌ ಪರಿಸರದಲ್ಲಿ ಕೆಲ ಅಪರೂಪದ ಕೆತ್ತನೆಗಳು ಸಿಕ್ಕಿದ್ದವು. ಈಗ ಆ ಕೆತ್ತನೆಗಳು ವಸ್ತು ಸಂಗ್ರಹಾಲಯದಲ್ಲಿ ಇಡಲಾಗಿದೆ. ಇಡೀ ಪರಿಸರದ ಸುತ್ತ ಅನೇಕ ಸ್ಮಾರಕಗಳಿರುವುದರಿಂದ ಈ ಸ್ಥಳಕ್ಕೆ ವಿಶೇಷ ಮಹತ್ವವಿದೆ. ಉತ್ಖನನ ನಡೆಸುವುದರಿಂದ ವಿಜಯನಗರ ಸಾಮ್ರಾಜ್ಯದ ಇತಿಹಾಸ ತಿಳಿದುಕೊಳ್ಳಲು ಮತ್ತಷ್ಟು ಸಹಕಾರಿಯಾಗಲಿದೆ’ ಎನ್ನುತ್ತಾರೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪುರಾತತ್ವ ವಿಭಾಗದ ಹಿರಿಯ ಪ್ರಾಧ್ಯಾಪಕ ಸಿ.ಎಸ್‌. ವಾಸುದೇವನ್‌.

‘ಹೊಸ ವಿಷಯಗಳು ಬೆಳಕಿಗೆ ಬರುವುದರಿಂದ ಗತಕಾಲದ ಸಂಗತಿಗಳು ತಿಳಿಯುತ್ತವೆ. ನಮ್ಮ ಹೊಸ ತಲೆಮಾರಿಗೆ ಚರಿತ್ರೆಯನ್ನು ಪರಿಚಯಿಸಿದಂತಾಗುತ್ತದೆ’ ಎಂದು ಹೇಳಿದರು.

‘ಉತ್ಖನನಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಭೆ ನಡೆಸಲಾಗಿದೆ. ಇಲಾಖೆಯ ಹಿರಿಯ ಅಧಿಕಾರಿಗಳು ಜಾಗ ಕೂಡ ಪರಿಶೀಲನೆ ನಡೆಸಿದ್ದಾರೆ. ಉದ್ದೇಶಿತ ಉತ್ಖನನಕ್ಕೆ ಮೌಖಿಕ ಒಪ್ಪಿಗೆ ಸಿಕ್ಕಿದೆ. ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಉತ್ಖನನ ನಡೆಸುವಾಗ ವಿಡಿಯೊ, ಛಾಯಾಚಿತ್ರ, ರೇಖಾಚಿತ್ರ, ವಿವರಗಳನ್ನೆಲ್ಲ ದಾಖಲಿಸುವ ದೊಡ್ಡ ಪ್ರಕ್ರಿಯೆಯೇ ಇರುತ್ತದೆ’ ಎಂದು ಪುರಾತತ್ವ ಸರ್ವೇಕ್ಷಣ ಇಲಾಖೆ ಹಂಪಿ ವೃತ್ತದ ಡೆಪ್ಯುಟಿ ಸೂಪರಿಟೆಂಡೆಂಟ್‌ ಪಿ. ಕಾಳಿಮುತ್ತು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.