ಲಖನೌ: ದೇಗುಲವನ್ನು ನಿರ್ಮಾಣ ಮಾಡುವುಕ್ಕಿಂತ ಅದನ್ನು ರಕ್ಷಿಸಿಕೊಳ್ಳುವುದೇ ದೊಡ್ಡ ಸವಾಲು ಎಂದು ಅಯೋಧ್ಯೆ ರಾಮ ಮಂದಿರ ಟ್ರಸ್ಟ್‌ನ ಸದಸ್ಯರಾದ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ಸ್ವಾಮಿ ಹೇಳಿದ್ದಾರೆ.
‘ಶತಮಾನಗಳಿಂದ ಕಂಡ ಕನಸು ನನಸಾಗುತ್ತಿದೆ. ಆದರೆ ಜವಾಬ್ದಾರಿ ಮುಗಿಯಿತೆಂದು ಯಾರೂ ಅಂದುಕೊಳ್ಳಬಾರದು. ಮುಂದೆ ಎಷ್ಟು ವರ್ಷಗಳ ಕಾಲ ನಿರ್ಮಾಣಗೊಂಡ ದೇವಾಲಯ ಅದೇ ಸ್ವರೂಪದಲ್ಲಿರಲಿದೆ? ಮತ್ತು ಆ ದೇಗುಲಕ್ಕೆ ಯಾರೊಬ್ಬರೂ ಹಾನಿ ಮಾಡದಂತೆ ತಡೆಯುವುದು ಹೇಗೆ ಎಂಬುದು ನಮ್ಮ ಆಲೋಚನೆಯಾಗಿರಬೇಕು’ ಎಂದು ಅವರು ನುಡಿದಿದ್ದಾರೆ.
ನಮ್ಮ ಮಕ್ಕಳು ಹಿಂದೂ ಧರ್ಮದಲ್ಲಿರುವವರೆಗೂ ಹಾಗೂ ಹಿಂದೂಗಳು ಬಹುಸಂಖ್ಯಾತರಾಗಿರುವವರೆಗೂ ರಾಮ ಮಂದಿರ ಹಾಗೇ ಇರಲಿದೆ. ಬುದ್ಧನ ಮೂರ್ತಿ ನಾಶ ಮಾಡಿದ ಆಫ್ಗಾನಿಸ್ತಾನದ ಸ್ಥಿತಿಯನ್ನು ಊಹಿಸಿಕೊಳ್ಳಬಹುದು’ ಎಂದಿದ್ದಾರೆ.
ನಾವು ಇಲ್ಲಿ ಶಾಶ್ವತವಾಗಿ ನೆಲೆಸಿರುವುದಿಲ್ಲ. ಆದರೆ ಬದುಕಿರುವಾಗ ಹಿಂದೂ ಹಾಗೂ ಸನಾತನ ಧರ್ಮವನ್ನು ನಮ್ಮ ಮಕ್ಕಳಿಗೆ ದಾಟಿಸಬೇಕು. ನಮ್ಮ ಸಂತತಿಗಳಿಗೆ ಸಂಸ್ಕೃತಿಯನ್ನು ದಾಟಿಸುವ ಮೂಲಕ ಧರ್ಮವನ್ನು ಉಳಿಸಬಹುದು’ ಎಂದು ಹೇಳಿದ್ದಾರೆ.
ರಾಮ ಪ್ರಾಣ ಪ್ರತಿಷ್ಠಾಪನೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಶತಮಾನಗಳ ಕನಸು ನನಸಾಗುತ್ತಿದೆ. ಇದು ಕಾನೂನು ಸಮರವಾಗಿತ್ತು. ಸುಪ್ರೀಂ ಕೋರ್ಟ್ ನಮ್ಮ ಪರವಾಗಿ ತೀರ್ಪು ನೀಡಿದೆ. ಸಂವಿಧಾನದ ಬಗ್ಗೆ ನಂಬಿಕೆ ಇರುವವರು ಸುಪ್ರೀಂ ಕೋರ್ಟ್‌ನ ತೀರ್ಪನ್ನು ಸ್ವೀಕರಿಸಿದ್ದಾರೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
‘ಜನರು ತಮ್ಮ ಮಕ್ಕಳಿಗೆ ಹಿಂದೂ ಗ್ರಂಥಗಳಿಂದ ನಾಮಕರಣ ಮಾಡಬೇಕು. ವೇದ, ಪುರಾಣ, ರಾಮಾಯಣ ಹಾಗೂ ಮಹಾಭಾರತದಲ್ಲಿ ಇರುವ ಹೆಸರುಗಳನ್ನು ಮಕ್ಕಳಿಗೆ ಇಡಬೇಕು ಎಂದು ಹೇಳಿದ ಅವರು, ಇದರಿಂದ ತಾವು ಯಾವ ಸಂಸ್ಕೃತಿಗೆ ಸೇರಿದ್ದೇವೆ ಎನ್ನುವುದನ್ನು ತಿಳಿದುಕೊಳ್ಳಲು ಮಕ್ಕಳಿಗೆ ಸಾಧ್ಯವಾಗಲಿದೆ’ ಎಂದಿದ್ದಾರೆ.
‘ಜನರ ಮರುನಾಮಕರಣಕ್ಕೆ ಅಭಿಯಾನ ಪ್ರಾರಂಭಿಸಬೇಕು. ಇದು ಸಾರ್ವಜನಿಕವಾಗಿ ನಡೆಯಬೇಕು. ಮತಾಂತರ ನಿಲ್ಲಬೇಕು. ಸಂಸ್ಕೃತಿಯನ್ನು ದಾಟಿಸುವ ಕೆಲಸ ಶುರುವಾಗಬೇಕು’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.