ಕಲಬುರಗಿ: ‘ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ಮುದ್ರಾಂಕ ಶುಲ್ಕ, ಜನನ ಮರಣ ಪ್ರಮಾಣಪತ್ರ ಪಡೆಯುವ ಶುಲ್ಕ ಹೆಚ್ಚಳ, ಅಬಕಾರಿ ಸುಂಕ ಏರಿಕೆ, ಮತ್ತೆ ಇದೀಗ ಹಾಲಿನ ಬೆಲೆ ಏರಿಕೆ ಮಾಡುವ ಮೂಲಕ ಸಿದ್ದರಾಮಯ್ಯ ಸರ್ಕಾರ ಬೆಲೆ ಏರಿಕೆಯೆಂಬ ಅಘೋಷಿತ ಆರನೇ ಗ್ಯಾರಂಟಿಯನ್ನು ಜಾರಿಗೆ ತಂದಿದೆ’ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಕುಟುಕಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಮ್ಮ ಸರ್ಕಾರ ಇಂಧನದ ಬೆಲೆಯನ್ನು ಲೀಟರ್‌ಗೆ ಕೇವಲ ₹ 1 ಹೆಚ್ಚಳ ಮಾಡಿದ್ದಕ್ಕೆ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಇಂಧನ ಬೆಲೆ ಹೆಚ್ಚಳವು ಉಳಿದ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗುತ್ತದೆ ಎಂದು ಟೀಕಿಸಿದ್ದರು. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಎಂ.ಬಿ. ಪಾಟೀಲ, ಪ್ರಿಯಾಂಕ್ ಖರ್ಗೆ ಅವರು ಸ್ಕೂಟರ್‌ವೊಂದನ್ನು ಹೆಣದಂತೆ ಇರಿಸಿ ಇವರು ನಾಲ್ಕು ಕಡೆ ಹೆಗಲು ಕೊಟ್ಟಿದ್ದರು. ₹ 1 ಹೆಚ್ಚಳ ಮಾಡಿದ್ದಕ್ಕೇ ಹೀಗೆ ಮಾಡಿದ್ದವರು ಈಗ ಪೆಟ್ರೋಲ್, ಡೀಸೆಲ್ ಬೆಲೆಯನ್ನು ₹ 3 ಹೆಚ್ಚಳ ಮಾಡಿದ್ದಾರೆ. ಕೆಲ ತಿಂಗಳ ಹಿಂದೆ ಸೆಸ್ ಏರಿಸಿದ್ದು ಸೇರಿ ಒಟ್ಟಾರೆ ₹ 4.5 ಹೆಚ್ಚಳ ಮಾಡಿದ್ದಾರೆ. ಈಗ ಸ್ಕೂಟರ್ ಬದಲು ನಾವು ಯಾರನ್ನು ಹೊತ್ತುಕೊಂಡು ಹೋಗಬೇಕು’ ಎಂದು ಪ್ರಶ್ನಿಸಿದರು.
‘ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದಾರೆ. ಗ್ಯಾರಂಟಿಗಳ ನೆಪದಲ್ಲಿ ಶಾಸಕರಿಗೆ ಅನುದಾನ ನೀಡುತ್ತಿಲ್ಲ ಎಂಬ ಆಕ್ಷೇಪ ಸರ್ಕಾರದ ಒಳಗಿನಿಂದಲೇ ಕೇಳಿ ಬರುತ್ತಿದೆ. ಗ್ಯಾರಂಟಿ ಹೆಸರು ಹೇಳಿ ನಮ್ಮ ಮೂಗಿಗೆ ತುಪ್ಪ ಸವರಿ ತಾವು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂದು ಸಿದ್ದರಾಮಯ್ಯ ಸರ್ಕಾರದ ಸಚಿವರೇ ಹೇಳಿಕೆ ನೀಡುತ್ತಿದ್ದಾರೆ’ ಎಂದರು.
‘ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಯ ಬಗ್ಗೆ ಹೇಳಿಕೆ ನೀಡುವ ಮೂಲಕ ಸರ್ಕಾರದಲ್ಲಿ ಎಲ್ಲ ಸರಿ ಇಲ್ಲ ಎಂಬುದನ್ನು ತೋರಿಸುತ್ತದೆ. ಈ ಚರ್ಚೆಯನ್ನು ಜೀವಂತ ಇಡುವ ಮೂಲಕ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಪಟ್ಟದಿಂದ ದೂರ ಇಡುವ ಪ್ರಯತ್ನ ನಡೆದಿದೆ. ಡಿಸಿಎಂ ಚರ್ಚೆ ಕಾಂಗ್ರೆಸ್ ಸರ್ಕಾರದ ಪತನದೊಂದಿಗೆ ಮುಕ್ತಾಯವಾದರೂ ಅಚ್ಚರಿ ಇಲ್ಲ. ಬಹುಮತ ಇದ್ದರೂ ಪಕ್ಷದೊಳಗಿನ ಒಡಕು ಸರ್ಕಾರವನ್ನು ಕೆಡವುತ್ತದೆ. ಹಾಗೆಂದು ನಾವು ಈ ಸರ್ಕಾರ ಬೀಳಲಿ ಎಂದು ಬಯಸುತ್ತಿಲ್ಲ. ಆ ನಿಟ್ಟಿನಲ್ಲಿ ಪ್ರಯತ್ನವನ್ನೂ ಮಾಡುತ್ತಿಲ್ಲ’ ಎಂದು ಸಿ.ಟಿ. ರವಿ ಸ್ಪಷ್ಟಪಡಿಸಿದರು.
‘ಕೇಂದ್ರ ಸರ್ಕಾರವು ರಷ್ಯಾದಿಂದ ಕಡಿಮೆ ಬೆಲೆಗೆ ಖರೀದಿಸಿದ ತೈಲದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸದೇ ಇರುವುದರಿಂದ ರಾಜ್ಯ ಸರ್ಕಾರ ಇಂಧನ ಬೆಲೆ ಏರಿಕೆ ಮಾಡಬೇಕಾಯಿತು’ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿ.ಟಿ. ರವಿ, ‘ಸಿದ್ದರಾಮಯ್ಯ ಅವರು ಸುಳ್ಳು ಹೇಳುವುದರಲ್ಲಿ ಸಿದ್ಧ ಕಲೆಯನ್ನು ರೂಢಿಸಿಕೊಂಡಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆಯನ್ನು ಹೆಚ್ಚಳ ಮಾಡುವಂತೆ ಮೋದಿಯವರು ಹೇಳಿದ್ದರಾ? ಹಲವು ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರಿಗೆ ಇಂಧನ ಬೆಲೆ ಏರಿಕೆಯಿಂದ ಆಗುವ ಸಮಸ್ಯೆಗಳ ಅರಿವಿಲ್ಲವೇ’ ಎಂದು ಪ್ರಶ್ನಿಸಿದರು.
ಮಾಜಿ ಸಚಿವ ಎನ್. ಮಹೇಶ್, ಶಾಸಕ ಬಸವರಾಜ ಮತ್ತಿಮಡು, ವಿಧಾನಪರಿಷತ್ ಸದಸ್ಯರಾದ ಬಿ.ಜಿ. ಪಾಟೀಲ, ಶಶೀಲ್ ಜಿ. ನಮೋಶಿ, ಬಿಜೆಪಿ ಶಹರ ಘಟಕದ ಅಧ್ಯಕ್ಷ ಚಂದು ಪಾಟೀಲ, ಅಮರನಾಥ ಪಾಟೀಲ, ಅವ್ವಣ್ಣ ಮ್ಯಾಕೇರಿ ಗೋಷ್ಠಿಯಲ್ಲಿದ್ದರು.
‘ಪ್ರಿಯಾಂಕ್ ಬಳಿ ಎಲ್ಲ ಖಾತೆಗಳ ಜಿಪಿಎ ಇದೆಯೇ?’
‘ಪ್ರಿಯಾಂಕ್ ಖರ್ಗೆ ಅವರು ತಮ್ಮ ಇಲಾಖೆಯೊಂದನ್ನು ಬಿಟ್ಟು ಉಳಿದೆಲ್ಲ ಖಾತೆಗಳ ಸಚಿವರ ಪರವಾಗಿ ಮಾತನಾಡುತ್ತಾರೆ. ಅವರಿಗೆ ಎಲ್ಲ ಇಲಾಖೆಗಳಲ್ಲಿ ಮೂಗು ತೂರಿಸಲು ಜಿಪಿಎ (ಜನರಲ್ ಪವರ್ ಆಫ್ ಅಟಾರ್ನಿ) ಇದೆಯೇ’ ಎಂದು ಸಿ.ಟಿ. ರವಿ ಪ್ರಶ್ನಿಸಿದರು.
‘ಮೈಸೂರು, ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಕಲುಷಿತ ನೀರಿನಿಂದ ಹಲವರು ಮೃತಪಟ್ಟಿದ್ದಾರೆ. ಕಲಬುರಗಿಯ ಜಿಮ್ಸ್, ಜಯದೇವ ಆಸ್ಪತ್ರೆಗಳಲ್ಲಿ ಕಲುಷಿತ ನೀರು ಪೂರೈಕೆಯಿಂದ ಶಸ್ತ್ರಚಿಕಿತ್ಸೆಗಳನ್ನು ಮುಂದೂಡಲಾಗಿದೆ. ತಮ್ಮ ಖಾತೆಯ ಮೇಲ್ವಿಚಾರಣೆ ಇರುವ ಗ್ರಾಮೀಣ ಕುಡಿಯುವ ನೀರಿನ ಬಗ್ಗೆ ಮೊದಲು ಹೇಳಿಕೆ ನೀಡಲಿ’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.