ADVERTISEMENT

250 ಶಾಲೆಗಳಲ್ಲಿ ಬಡವಾಯ್ತು ಕನ್ನಡ

ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ: 26,156 ಮಕ್ಕಳ ನೋಂದಣಿ

ಎಂ.ಜಿ.ಬಾಲಕೃಷ್ಣ
Published 10 ಆಗಸ್ಟ್ 2019, 19:57 IST
Last Updated 10 ಆಗಸ್ಟ್ 2019, 19:57 IST
   

ಬೆಂಗಳೂರು: ಸರ್ಕಾರದ ಮಹತ್ವಾಕಾಂಕ್ಷಿ ಇಂಗ್ಲಿಷ್‌ ಮಾಧ್ಯಮ ಶಿಕ್ಷಣ ಆರಂಭಿಸುವ ಯೋಜನೆ ರಾಜ್ಯದಲ್ಲಿ ಯಶಸ್ವಿಯಾಗಿದ್ದು, 1000 ಶಾಲೆಗಳಲ್ಲಿ 26,156 ಮಕ್ಕಳು ಒಂದನೇ ತರಗತಿಗೆ ದಾಖಲಾಗಿದ್ದಾರೆ. ಇದೇ ವೇಳೆ ಸುಮಾರು 250 ಶಾಲೆಗಳಲ್ಲಿ ಕನ್ನಡ ಮಾಧ್ಯಮ ಮಕ್ಕಳ ದಾಖಲಾತಿ 10ಕ್ಕಿಂತ ಕೆಳಗೆ ಬಂದಿದೆ.

276 ಕರ್ನಾಟಕ ಪಬ್ಲಿಕ್‌ ಸ್ಕೂಲ್‌ (ಕೆಪಿಎಸ್‌) ಮತ್ತು 724 ಸರ್ಕಾರಿ ಪ್ರಾಥಮಿಕ ಶಾಲೆಗಳು ಸೇರಿ ಒಟ್ಟು ಒಂದು ಸಾವಿರ ಶಾಲೆಗಳಲ್ಲಿ ಈ ಬಾರಿ 1ನೇ ತರಗತಿಗೆ ಇಂಗ್ಲಿಷ್‌ ಮಾಧ್ಯಮಕ್ಕೆ ಪ್ರವೇಶಾತಿ ನೀಡಲಾಗಿತ್ತು. ಕೇವಲ 30 ಮಕ್ಕಳಿಗಷ್ಟೇ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ್ದು, ಉಳಿದವರನ್ನು ಕನ್ನಡ ಮಾಧ್ಯಮಕ್ಕೆ ಸೇರಿಸಲಾಗಿದೆ. ಕೆಲವರು ಸೀಟು ಸಿಗದ ಕಾರಣ ಖಾಸಗಿ ಶಾಲೆಗಳಿಗೆ ತೆರಳಿದ್ದಾರೆ.

‘ಇಂಗ್ಲಿಷ್‌ ಮಾಧ್ಯಮ ಆರಂಭಿಸಿದ್ದಕ್ಕೇ ಕನ್ನಡ ಮಾಧ್ಯಮಕ್ಕೆ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ ಎಂದು ಭಾವಿಸಬೇಕಿಲ್ಲ. ಕೆಲವು ಶಾಲೆಗಳಲ್ಲಿ ಕೇವಲ 4ರಿಂದ 5 ಮಕ್ಕಳು ದಾಖಲಾಗಿದ್ದೂ ಇದೆ. ಅಂತಹುದರಲ್ಲಿ ಇಂಗ್ಲಿಷ್‌ ಮಾಧ್ಯಮದ ಸೀಟುಗಳೂ ಭರ್ತಿಯಾಗಿಲ್ಲ. ಅಂದರೆ ಆ ಪ್ರದೇಶದಲ್ಲಿ ಒಟ್ಟಾರೆ ಮಕ್ಕಳ ಪ್ರಮಾಣವೇ ಕಡಿಮೆ ಇತ್ತು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಎಂ.ಪಿ.ಮಾದೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಕನ್ನಡ ಮಾಧ್ಯಮದಲ್ಲಿ ಕಲಿಯುವ ಮಕ್ಕಳಿಗೆ ಯಾವುದೇ ಕೀಳರಿಮೆ ಮೂಡಬಾರದು, ಮುಂದಿನ ದಿನಗಳಲ್ಲಿ ಅವರೂ ಇಂಗ್ಲಿಷ್‌ ಮಾಧ್ಯಮ ತರಗತಿಗೆ ಪ್ರವೇಶ ಪಡೆಯುವ ಆತ್ಮಸ್ಥೈರ್ಯ ಮೂಡಿಸುವ ನಿಟ್ಟಿನಲ್ಲಿ ಈ ಬಾರಿಯಿಂದ ಎಲ್ಲ ಸಾವಿರ ಶಾಲೆಗಳಲ್ಲಿ ಇಂಗ್ಲಿಷ್‌ನಲ್ಲೂ ನಲಿಕಲಿ ಆರಂಭಿಸಲಾಗಿದೆ. ಶಿಕ್ಷಕರು, ಮಕ್ಕಳು ಇದಕ್ಕೆ ಬಹಳ ಉತ್ಸಾಹ ತೋರಿಸಿದ್ದಾರೆ. ಇದೇ ಪರಿಸ್ಥಿತಿ ಇದ್ದರೆ 6ನೇ ತರಗತಿಯ ಹಂತದಲ್ಲಿ ಹಲವಾರು ಮಕ್ಕಳುಇಂಗ್ಲಿಷ್‌ ಮಾಧ್ಯಮಕ್ಕೆ ಬದಲಾವಣೆ ಮಾಡಿಕೊಳ್ಳುವ ವಿಶ್ವಾಸ ಇದೆ’ ಎಂದು ಸರ್ವ ಶಿಕ್ಷಣ ಅಭಿಯಾನದ ಯೋಜನಾ ಅಧಿಕಾರಿ ಪ್ರಮೀತಾ ಅದೋನಿ ತಿಳಿಸಿದರು.

‘ಕನ್ನಡ ಮಾಧ್ಯಮಕ್ಕೆ ಮಕ್ಕಳ ಪ್ರವೇಶಾತಿ ಕಡಿಮೆಯಾಯಿತು ಎಂಬ ಕಾರಣಕ್ಕೆ ತರಗತಿಗಳನ್ನು ಬಂದ್ ಮಾಡುವುದಿಲ್ಲ. ಬದಲಿಗೆ ಇಂಗ್ಲಿಷ್‌ ಭಾಷೆಯ ವಾತಾವರಣ ಮೂಡಿಸುವ ಪ್ರಯತ್ನದ ಮೂಲಕ ಮಕ್ಕಳ ಪೋಷಕರಲ್ಲಿ ಶಾಲೆಯ ಬಗ್ಗೆ ಉತ್ತಮ ಅಭಿಪ್ರಾಯ ಮೂಡಿಸಲಾಗುತ್ತದೆ. ಇದಕ್ಕೆ ಉತ್ತಮ ಸ್ಪಂದನೆ ದೊರಕುವ ವಿಶ್ವಾಸ ಇದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.