ಬೆಂಗಳೂರು: ಮೂರರಿಂದ ಎಂಟು ವರ್ಷದವರೆಗಿನ ಮಕ್ಕಳ ಶಿಕ್ಷಣಕ್ಕಾಗಿ ರೂಪಿಸಿದ ಪೂರ್ವ ಪ್ರಾಥಮಿಕ ಶಿಕ್ಷಣದ ರಾಜ್ಯ ಪಠ್ಯಕ್ರಮ ಚೌಕಟ್ಟನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಬಿಡುಗಡೆ ಮಾಡಿದರು.
ಹೊಸದಾಗಿ ರೂಪಿಸಿದ ಈ ಶಿಕ್ಷಣ ನೀತಿಯಲ್ಲಿ ಆಯಾ ಮಾತೃಭಾಷೆಯಲ್ಲೇ ಮಕ್ಕಳ ಕಲಿಕೆಗೆ ಒತ್ತು ನೀಡಲಾಗಿದೆ. ಮಾತೃ ಭಾಷೆಯಲ್ಲಿ ಕಲಿಯುವುದು ವೈಜ್ಞಾನಿಕ, ಶೈಕ್ಷಣಿಕ ಅನಿವಾರ್ಯತೆ ಎಂದು ವಿವರಿಸಲಾಗಿದೆ.
ಮಕ್ಕಳ ಆಟ, ಶಿಶು ಕೇಂದ್ರಿತ ಶಿಕ್ಷಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಆರು ಶೈಕ್ಷಣಿಕ ಕ್ಷೇತ್ರ, 13 ಶೈಕ್ಷಣಿಕ ಗುರಿಗಳು, 68 ಸಾಮರ್ಥ್ಯಗಳು, 128 ಕಲಿವಿನ ಫಲಗಳನ್ನು ಪಠ್ಯಕ್ರಮ ಚೌಕಟ್ಟು ಹೊಂದಿದೆ.
ಪ್ರತಿ ಮಗುವೂ ವಿಶೇಷ ಕೌಶಲ ಹೊಂದಿದ್ದು, ಕಲಿಯಲು ಶಕ್ತವಾಗಿರುತ್ತದೆ. ಮಕ್ಕಳ ಕಲಿಕಾಂಶವು ಆ ಮಕ್ಕಳ ಅನುಭವ, ಸುತ್ತಲಿನ ಪರಿಸರದೊಟ್ಟಿಗೆ ಒಡನಾಟದಿಂದ ಹುಟ್ಟಿಕೊಳ್ಳಬೇಕಾಗುತ್ತದೆ ಎಂಬ ಅಂಶಗಳ ಆಧಾರದಲ್ಲಿ ಕಲಿಕಾ ಕ್ರಮವನ್ನು ರೂಪಿಸ ಲಾಗಿದೆ. ಪ್ರಸ್ತುತ ರಾಜ್ಯದ ಅಂಗನವಾಡಿಗಳಲ್ಲಿ ಅನುಷ್ಠಾನದಲ್ಲಿರುವ ಚಿಲಿಪಿಲಿ ಹಾಗೂ ಪ್ರಾಥಮಿಕ ಶಾಲೆಗಳ ನಲಿಕಲಿ ಪದ್ಧತಿಯ ಪಠ್ಯಕ್ರಮದಲ್ಲಿ
ಮಾರ್ಪಾಡುಗಳನ್ನು ಮಾಡಲಾಗಿದೆ.
‘ಮಕ್ಕಳ ಶಿಕ್ಷಣಕ್ಕಾಗಿ ರಚಿತವಾದ ರಾಷ್ಟ್ರೀಯ ಶಿಕ್ಷಣ ನೀತಿಯ ಹೊಸ ಪಠ್ಯಕ್ರಮ ಚೌಕಟ್ಟನ್ನು ಕಳೆದ ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು. ಅದರ ಆಧಾರದ ಮೇಲೆ ಮಕ್ಕಳ ಬುನಾದಿ ಶಿಕ್ಷಣವನ್ನು ರೂಪಿಸಲಾಗಿದೆ. ಆಮೂಲಕ ಮಕ್ಕಳ ಶಿಕ್ಷಣಕ್ಕಾಗಿ ಬುನಾದಿ ಹಂತದ ರಾಜ್ಯ ಪಠ್ಯಕ್ರಮ ಚೌಕಟ್ಟನ್ನು ರಚಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ರಾಜ್ಯದ ಪೂರ್ವ ಪ್ರಾಥಮಿಕ ಶಿಕ್ಷಣ ಮತ್ತು ಆರೈಕೆ ವ್ಯವಸ್ಥೆಯನ್ನು ಸುಧಾರಿಸಲು ರಚಿತವಾದ ಆರು ತಂಡಗಳಲ್ಲಿ ಇಂದು ತಂಡದ ವರದಿ ನೀಡಿದ್ದು, ಇತರೆ ತಂಡಗಳ ವರದಿಯನ್ನು ಶೀಘ್ರ ಬಿಡುಗಡೆ ಮಾಡಲಾಗುವುದು’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ ಅವರು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.