ಬೆಳಗಾವಿ: ಇಲ್ಲಿನ ಹಿಂಡಲಗಾ ಕೇಂದ್ರ ಕಾರಾಗೃಹದಿಂದ ಪರಾರಿಯಾಗಿರುವ ಕೈದಿ ಮುರುಗೇಶ ಅಲಿಯಾಸ್ ಮುರುಗ ಅಲಿಯಾಸ್ ಕಣ್ಣಮುಚ್ಚಿ ಸುಳಿವು ನಾಲ್ಕು ದಿನಗಳಾದರೂ ಪತ್ತೆಯಾಗಿಲ್ಲ.
ಮರಣದಂಡನೆಗೆ ಗುರಿಯಾಗಿದ್ದ ಈ ಕೈದಿ ಜೈಲಿನಿಂದ ಸೋಮವಾರ ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದ. ಐವರನ್ನು ವಿಕೃತವಾಗಿ ಕೊಚ್ಚಿ ಕೊಲೆ ಮಾಡಿದ್ದ ಈತನಿಗೆ ಚಾಮರಾಜನಗರ ನ್ಯಾಯಾಲಯ ಮರಣದಂಡನೆ ವಿಧಿಸಿದೆ.
ಆತನ ಸುಳಿವು ನೀಡಿದವರಿಗೆ ನಗದು ಬಹುಮಾನ ಕೊಡುವುದಾಗಿ ಕಾರಾಗೃಹ ಇಲಾಖೆ ತಿಳಿಸಿದೆ. ಆದರೆ, ಕೈದಿ ಎಲ್ಲಿಗೆ ಹೋಗಿದ್ದಾನೆ ಎನ್ನುವ ಮಾಹಿತಿ ಅಧಿಕಾರಿಗಳಿಗೆ ಲಭ್ಯವಾಗಿಲ್ಲ.
ಈ ನಡುವೆ, ಕರ್ತವ್ಯಲೋಪ ಆರೋಪದ ಮೇಲೆ ಜೈಲರ್ ಸುಷ್ಮಾ ಶಹಾಪುರಕರ, ಎಎಸ್ಐ ಹಾಗೂ ಇಬ್ಬರು ಕಾನ್ಸ್‌ಟೇಬಲ್ ಗಳನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.
'ಕೈದಿ ಪತ್ತೆಗಾಗಿ ಐದು ತಂಡಗಳನ್ನು ರಚಿಸಲಾಗಿದೆ. ಆತ ತಮಿಳುನಾಡಿನವನಾದ್ದರಿಂದ ಆ ಕಡೆಗೆ ಹೋಗಿರಬಹುದು. ಹೀಗಾಗಿ ಆ ಕಡೆಗೆ ಹಾಗೂ ಗೋವಾ, ಮಹಾರಾಷ್ಟ್ರ, ಬೆಂಗಳೂರು ಕಡೆಗೆ ತಂಡಗಳು ತೆರಳಿವೆ. ಎಲ್ಲ ಜಿಲ್ಲೆಗಳ ಪೊಲೀಸ್ ಠಾಣೆಗಳಿಗೂ ಮಾಹಿತಿ ಕಳುಹಿಸಿ, ಸಹಾಯ ಕೋರಲಾಗಿದೆ. ಹಲವು ಪ್ರಕರಣಗಳಲ್ಲಿ ಆತ ಬೇಕಾಗಿದ್ದಾನೆ. ಹೀಗಾಗಿ, ಗಂಭೀರವಾಗಿ ಪರಿಗಣಿಸಲಾಗಿದೆ' ಎಂದು ಹಿಂಡಲಗಾ ಕಾರಾಗೃಹದ ಮುಖ್ಯ ಸೂಪರಿಂಟೆಂಡೆಂಟ್ ಟಿ.ಪಿ. ಶೇಷ ಪ್ರಜಾವಾಣಿಗೆ ತಿಳಿಸಿದರು.
ತಪ್ಪಿಸಿಕೊಂಡಿರುವ ಕೈದಿ ನರಹಂತಕ ವೀರಪ್ಪನ್ ಸಹಚರನಾಗಿದ್ದ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.