ಬೆಂಗಳೂರು: ದ್ವಿತೀಯ ಪಿಯು ತರಗತಿಗಳನ್ನು ಮೇ 18ರಂದು ಆರಂಭಿಸಬೇಕು ಎಂಬ ಸರ್ಕಾರದ ಆದೇಶವನ್ನು ಧಿಕ್ಕರಿಸಿ ಹಲವು ಖಾಸಗಿ ಕಾಲೇಜುಗಳು ತರಗತಿ ಆರಂಭಿಸಿಯೇ ಬಿಟ್ಟಿವೆ.
ಪ್ರಥಮ ಪಿಯು ಪರೀಕ್ಷೆ ಕೊನೆಗೊಂಡದ್ದು ಇದೇ 25ರಂದು. ಮರುದಿನದಿಂದಲೇ ದ್ವಿತೀಯ ಪಿಯು ತರಗತಿಗಳನ್ನು ಕೆಲವು ಖಾಸಗಿ ಕಾಲೇಜುಗಳು ಆರಂಭಿಸಿವೆ. ವಿಶೇಷವೆಂದರೆ ಫಲಿತಾಂಶ ಬರದಿದ್ದರೂ, ಎಲ್ಲರನ್ನೂ ತರಗತಿಯಲ್ಲಿ ಕುಳ್ಳಿರಿಸಿ ಪಾಠ ಮಾಡಲಾಗುತ್ತಿದೆ.
ಅಕ್ಟೋಬರ್, ನವೆಂಬರ್ ವೇಳೆಗೆ ಪಾಠ ಪ್ರವಚನ ಕೊನೆಗೊಳಿಸಿ, ಪುನರಾವಲೋಕನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಕಾಲೇಜುಗಳು ಹೇಳುತ್ತಿವೆ. ವಿದ್ಯಾರ್ಥಿಗಳಿಗೆ ಒತ್ತಡ ನಿವಾರಿಸಲೆಂದೇ ವಾರ್ಷಿಕ ರಜೆ ಕೊಟ್ಟಿರುತ್ತಾರೆ, ಆದರೆ ರಜೆಯಲ್ಲೂ ತರಗತಿ ನಡೆಸಿ ಮಕ್ಕಳ ಒತ್ತಡ ಹೆಚ್ಚಿಸಲಾಗುತ್ತಿದೆ ಎಂದು ಹಲವು ಪೋಷಕರು ದೂರಿದ್ದಾರೆ.
ಕೆಲವು ಕಾಲೇಜುಗಳಲ್ಲಿ ಕೇವಲ ಒಂದು ತಿಂಗಳು ರಜೆ ನೀಡಿದ್ದು, ಮಾರ್ಚ್ 23ರಿಂದ ದ್ವಿತೀಯ ಪಿಯು ತರಗತಿಗಳು ಆರಂಭವಾಗುತ್ತವೆ ಎಂದು ಈಗಾಗಲೇ ತಿಳಿಸಲಾಗಿದೆ.
ಈ ಬಗ್ಗೆ ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.