ಬೆಂಗಳೂರು: ಖಾಸಗಿ ವೈದ್ಯಕೀಯ ಸಂಸ್ಥೆಗಳು ಚಿಕಿತ್ಸಾ ದರಪಟ್ಟಿಯನ್ನು ಪ್ರದರ್ಶಿಸಿರುವ ಬಗ್ಗೆ ಅನುಪಾಲನಾ ವರದಿ ಸಲ್ಲಿಸುವಂತೆ ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ಅವರು ಜಿಲ್ಲೆಯ ಆರೋಗ್ಯ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.
ಕೆ.ಪಿ.ಎಂ.ಇ ಕಾಯ್ದೆಯಡಿ ರಾಜ್ಯದ ಎಲ್ಲ ಖಾಸಗಿ ವೈದ್ಯಕೀಯ ಸಂಸ್ಥೆಗಳು ಕಡ್ಡಾಯವಾಗಿ ಹೊರರೋಗಿ ವಿಭಾಗದ ಸಮಾಲೋಚನಾ ಶುಲ್ಕ, ಶಸ್ತ್ರಚಿಕಿತ್ಸೆ, ಎಕ್ಸ್-ರೆ, ಸ್ಕ್ಯಾನಿಂಗ್ ಹಾಗೂ ಇತರ ವೈದ್ಯಕೀಯ ಪರೀಕ್ಷೆಗಳ ಶುಲ್ಕದ ವಿವರವನ್ನು ಪ್ರದರ್ಶಿಸಬೇಕು. ದರ ಫಲಕವು ಮುಖ್ಯ ದ್ವಾರದ ಪ್ರಮುಖ ಸ್ಥಳದಲ್ಲಿ ಸುಲಭವಾಗಿ ಕಾಣುವಂತೆ ಇರಬೇಕು. ಚಿಕಿತ್ಸಾ ದರ ಪಟ್ಟಿಯಲ್ಲಿ ಪ್ರದರ್ಶಿಸಿದ ಪ್ರಕಾರವೇ ರೋಗಿಗಳಿಗೆ ನಿಗದಿತ ಶುಲ್ಕಗಳನ್ನು ವಿಧಿಸುವುದು ಕಡ್ಡಾಯ. ಆದರೂ ಎಲ್ಲ ಖಾಸಗಿ ವೈದ್ಯಕೀಯ ಸಂಸ್ಥೆಗಳು ಚಿಕಿತ್ಸಾ ದರ ಪಟ್ಟಿಯನ್ನು ರೋಗಿಗಳಿಗೆ ಕಾಣುವ ಸ್ಥಳದಲ್ಲಿ ಪ್ರದರ್ಶಿಸಿರದ ಬಗ್ಗೆ, ನಿಗದಿತ ಶುಲ್ಕಕ್ಕಿಂತ ಹೆಚ್ಚುವರಿ ಶುಲ್ಕಗಳನ್ನು ವಿಧಿಸುತ್ತಿರುವ ಬಗ್ಗೆ ದೂರುಗಳನ್ನು ಸ್ವೀಕರಿಸಲಾಗಿದೆ ಎಂದು ತಿಳಿಸಿದ್ದಾರೆ.
ಎಲ್ಲ ಜಿಲ್ಲಾ ಆರೋಗ್ಯಾಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿಗೆ ಒಳಪಡುವ ಎಲ್ಲ ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಕಡ್ಡಾಯವಾಗಿ ಚಿಕಿತ್ಸಾ ದರಪಟ್ಟಿಗಳನ್ನು ಪ್ರದರ್ಶಿಸುವಂತೆ ಸೂಚಿಸಬೇಕು. ಎಲ್ಲ ತಾಲ್ಲೂಕು ಆರೋಗ್ಯಾಧಿಕಾರಿಗಳು ಮತ್ತು ಅಧಿಕೃತ ತಪಾಸಣಾ ಅಧಿಕಾರಿಗಳು ಮೂರು ವಾರಗಳಲ್ಲಿ ತಮ್ಮ ಕಾರ್ಯ ವ್ಯಾಪ್ತಿಗೆ ಒಳಪಡುವ ಎಲ್ಲ ಖಾಸಗಿ ವೈದ್ಯಕೀಯ ಸಂಸ್ಥೆಗಳು ಕೆ.ಪಿ.ಎಂ.ಇ ಕಾಯ್ದೆಯಡಿ ಚಿಕಿತ್ಸಾ ದರಪಟ್ಟಿಗಳನ್ನು ಪ್ರದರ್ಶಿಸುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಖಾಸಗಿ ವೈದ್ಯಕೀಯ ಸಂಸ್ಥೆಗಳು ಚಿಕಿತ್ಸಾ ದರಪಟ್ಟಿಯನ್ನು ಅವುಗಳ ಆವರಣದಲ್ಲಿ ಪ್ರದರ್ಶಿಸಿರುವ ಬಗ್ಗೆ, ಚಿಕಿತ್ಸಾ ದರಪಟ್ಟಿಯನ್ನು ಪ್ರದರ್ಶಿಸದೇ ಇರುವ ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿರುದ್ಧ ತೆಗೆದುಕೊಂಡ ಕ್ರಮಗಳ ಬಗ್ಗೆ ಅನುಪಾಲನಾ ವರದಿಯನ್ನು ಕಳೆದ ಜ.20ಕ್ಕೆ ಸಲ್ಲಿಸಲು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಗಿತ್ತು. ಆದರೆ, ಯಾವುದೇ ಜಿಲ್ಲೆಯಿಂದ ಅನುಪಾಲನಾ ವರದಿ ಕಚೇರಿಗೆ ಸ್ವೀಕೃತವಾಗಿಲ್ಲ. ಮಾರ್ಚ್ 20ರೊಳಗೆ ತಾಲ್ಲೂಕುವಾರು ಸಾಂಖ್ಯಿಕ ಮತ್ತು ವಿವರವಾದ ವರದಿಯನ್ನು ಸಲ್ಲಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಆದೇಶಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.